ಲಸಿಕೆ ಆಂದೋಲನ: ಬೆದರಿಕೆ ಬೇಡ

Update: 2021-09-02 06:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಲಸಿಕೆ ಆಂದೋಲನದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾಡಳಿತ ನೀಡಿದ ಆದೇಶವೊಂದು ಸಾಕಷ್ಟು ವಿವಾದಗಳಿಗೆ ಕಾರಣವಾಯಿತು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ಪಡೆಯದೇ ಇರುವ ಕುಟುಂಬಗಳಿಗೆ ಪಡಿತರ ಮತ್ತು ಪೆನ್ಶನ್ ಪಾವತಿ ಮಾಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದರು. ಚಾಮರಾಜನಗರ ಜಿಲ್ಲೆಯು ಕರ್ನಾಟಕ-ತಮಿಳುನಾಡು-ಕೇರಳ ರಾಜ್ಯಗಳ ಗಡಿ ಪ್ರದೇಶವಾಗಿರುವುದರಿಂದ ಜಿಲ್ಲೆಯಲ್ಲಿ ಕಡ್ಡಾಯ ಲಸಿಕೆ ಮಹಾ ಮೇಳವನ್ನು ಆಯೋಜಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ ಸೆ. 1ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದರು. ಲಸಿಕೆ ಆಂದೋಲನಗಳನ್ನು ಹಮ್ಮಿಕೊಳ್ಳುವುದು, ಅದಕ್ಕಾಗಿ ಮಹಾ ಮೇಳಗಳನ್ನು ನಡೆಸುವುದು ಇವೆಲ್ಲವೂ ಅಭಿನಂದನಾರ್ಹವೇ ಆಗಿದೆ. ಇದೇ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೂ ಅತ್ಯಗತ್ಯ. ಆದರೆ ಉತ್ತೇಜನ ಮತ್ತು ಬೆದರಿಕೆಗಳ ನಡುವೆ ವ್ಯತ್ಯಾಸವಿದೆ ಎನ್ನುವುದನ್ನು ಜಿಲ್ಲಾಧಿಕಾರಿಗಳು ಗಮನಿಸಬೇಕು. ಲಸಿಕೆ ಹಾಕಿಸಿಕೊಂಡವರಿಗಾಗಿ ಬೇರೆ ಬೇರೆ ಉಡುಗೊರೆಗಳನ್ನು ನೀಡಿದರೆ ಅಥವಾ ಹೆಚ್ಚುವರಿ ರೇಷನ್‌ಗಳನ್ನು ನೀಡುವುದಾಗಿ ಘೋಷಿಸಿದರೆ ಅದನ್ನು ಉತ್ತೇಜನ ಎಂದು ಕರೆಯಬಹುದು. ಇದೇ ಸಂದರ್ಭದಲ್ಲಿ, ಲಸಿಕೆ ಹಾಕಿಕೊಳ್ಳದೇ ಇರುವವರಿಗೆ ರೇಷನ್ ನೀಡಲಾಗುವುದಿಲ್ಲ, ಪೆನ್ಶನ್ ನೀಡಲಾಗುವುದಿಲ್ಲ ಎನ್ನುವುದನ್ನು ‘ಉತ್ತೇಜನ’ವೆಂದು ಕರೆಯಲಾಗುವುದಿಲ್ಲ. ಇವುಗಳನ್ನು ಬೆದರಿಕೆ ಎಂದು ಕರೆಯಲಾಗುತ್ತದೆ. ಬಲವಂತವಾಗಿ ಲಸಿಕೆ ನೀಡುವುದು ಎಷ್ಟರಮಟ್ಟಿಗೆ ಸರಿ? ಎನ್ನುವುದೇ ಚರ್ಚೆಯಲ್ಲಿರುವ ಸಂದರ್ಭದಲ್ಲಿ ರೇಷನ್, ಪೆನ್ಶನ್ ನೀಡುವುದಿಲ್ಲ ಎಂದು ಬೆದರಿಸಿ ಬಡವರು ಮತ್ತು ಮಧ್ಯಮವರ್ಗಕ್ಕೆ ಲಸಿಕೆ ನೀಡಲು ಮುಂದಾಗುವುದು ಲಸಿಕೆಯನ್ನು ಯಶಸ್ವಿಗೊಳಿಸುವುದಕ್ಕೆ ಅನುಸರಿಸುವ ಸರಿಯಾದ ಕ್ರಮ ಅಲ್ಲ.

ತೀವ್ರ ಆಕ್ಷೇಪದ ಬಳಿಕ ಚಾಮರಾಜನಗರ ಜಿಲ್ಲಾಡಳಿತ ಆದೇಶವನ್ನು ಹಿಂದೆಗೆದುಕೊಂಡಿದೆಯಾದರೂ, ಇಂತಹ ಆದೇಶಗಳು ಕೇವಲ ಚಾಮರಾಜನಗರಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಹಲವು ಜಿಲ್ಲಾಡಳಿತಗಳು ಇಂತಹ ‘ಸರ್ವಾಧಿಕಾರಿ’ ಆದೇಶಗಳ ಮೂಲಕ ಲಸಿಕೆಯನ್ನು ಜನರ ಮೇಲೆ ಹೇರಲು ಹೊರಟಿವೆ. ವಿಪರ್ಯಾಸವೆಂದರೆ, ಇವರ ಬೆದರಿಕೆ ಕೇವಲ ರೇಷನ್ ಕಾರ್ಡ್‌ಗಳಿಗಷ್ಟೇ ಸೀಮಿತಗೊಂಡಿರುವುದು. ಬಡವರು ಲಸಿಕೆ ಹಾಕಿಕೊಳ್ಳದೇ ಇದ್ದರೆ ಅವರಿಗೆ ರೇಷನ್ ಇಲ್ಲ. ಇದೇ ಸಂದರ್ಭದಲ್ಲಿ ಶ್ರೀಮಂತರು, ಮೇಲ್‌ಮಧ್ಯಮ ವರ್ಗದಜನರು ಲಸಿಕೆ ಹಾಕಿಕೊಳ್ಳದೇ ಇದ್ದರೆ ಅವರನ್ನು ಯಾವ ರೀತಿಯಲ್ಲಿ ದಂಡಿಸಲಾಗುತ್ತದೆ ಎನ್ನುವ ಬಗ್ಗೆ ಯಾವ ಆದೇಶಗಳನ್ನೂ ಸರಕಾರ ಹೊರಡಿಸಿಲ್ಲ. ಲಸಿಕೆ ಹಾಕಿಕೊಳ್ಳದವರಿಗೆ ಪೆಟ್ರೋಲ್ ಇಲ್ಲ, ಮಾಲ್‌ಗಳಲ್ಲಿ ಪ್ರವೇಶವಿಲ್ಲ, ಬಾರ್‌ಗಳಲ್ಲಿ ಪ್ರವೇಶವಿಲ್ಲ, ನ್ಯಾಯಾಲಯದೊಳಗೆ ಪ್ರವೇಶವಿಲ್ಲ ಎಂಬ ಆದೇಶಗಳನ್ನೂ ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ನೀಡಿದ ಒಂದೇ ಒಂದು ಉದಾಹರಣೆ ಇಲ್ಲ. ಲಸಿಕೆ ಹಾಕಿಸುವುದನ್ನು ಉತ್ತೇಜಿಸಲು ಸರಕಾರ ಮಹಾಮೇಳಗಳನ್ನು ಒಂದೆಡೆ ಹಮ್ಮಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಲಸಿಕೆಗಳ ಕೊರತೆಯ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿವೆ. ಜನರಿಗೆ ಬೇಕಾದಷ್ಟು ಲಸಿಕೆಗಳು ಸಿಗುತ್ತಿಲ್ಲ , ಜನರು ಆಸ್ಪತ್ರೆಗಳಿಗೆ ತೆರಳಿ ನಿರಾಶರಾಗಿ ಮರಳುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿವೆ. ಇನ್ನೊಂದೆಡೆ, ಲಸಿಕೆ ತೆಗೆದುಕೊಂಡವರಲ್ಲಿ ಹಲವರು ಅಸ್ವಸ್ಥರಾಗುತ್ತಿರುವುದು ಮಾಧ್ಯಮಗಳ ಸುದ್ದಿಯಾಗುತ್ತಿವೆ.

ಕೂಲಿ ಕಾರ್ಮಿಕರು ಒಂದು ದಿನ ಕೆಲಸಕ್ಕೆ ಹೋಗದೆ ಇಡೀ ದಿನ ಆಸ್ಪತ್ರೆಯ ಬಾಗಿಲಲ್ಲಿ ಕಾದು, ಲಸಿಕೆಯಿಲ್ಲದೆ ವಾಪಸಾದರೆ, ಅವರಿಗೆ ಎರಡೆರಡು ನಷ್ಟ. ಒಂದು, ಆ ದಿನದ ಕೂಲಿಯೇ ತಪ್ಪಿದಂತಾಯಿತು. ಇನ್ನೊಂದೆಡೆ ಲಸಿಕೆ ಸಿಗದೆ ಇಡೀ ದಿನ ವ್ಯರ್ಥವಾಯಿತು. ಇದರ ಜೊತೆಗೆ ತಿಂಗಳಿಗೊಮ್ಮೆ ಸಿಗುವ ರೇಷನ್ ಕೂಡ ಸಿಗದಂತಾದರೆ ಅವರೇನು ಮಾಡಬೇಕು? ಈಗಾಗಲೇ ಬೇರೆ ಬೇರೆ ನೆಪಗಳನ್ನು ಮುಂದೊಡ್ಡಿ ಬಡವರ ರೇಷನ್‌ಗಳನ್ನು ತಡೆಹಿಡಿಯಲಾಗುತ್ತಿದೆ. ಆಧಾರ್ ಇಲ್ಲ ಎಂದು ರೇಷನ್ ತಡೆ ಹಿಡಿದ ಕಾರಣಕ್ಕೆ ಕುಟುಂಬ ಹಸಿವಿನಿಂದ ಸತ್ತ ಬೇರೆ ಬೇರೆ ಪ್ರಕರಣಗಳು ಈಗಾಗಲೇ ಬಹಿರಂಗವಾಗಿವೆ. ಒಂದು ವೇಳೆ, ಅಧಿಕಾರಿಗಳ, ಆಸ್ಪತ್ರೆಗಳ ವೈಫಲ್ಯದಿಂದ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಅದಕ್ಕಾಗಿಯೂ ಈ ಬಡವರ್ಗ ತನ್ನ ರೇಷನ್‌ನ್ನು ಕಳೆದುಕೊಳ್ಳಬೇಕೇ? ಕೊರೋನ ವಿರುದ್ಧ ಲಸಿಕೆ ಆಂದೋಲನ ಯಶಸ್ವಿಯಾಗಬೇಕಾದರೆ ಅದನ್ನು ಜನರ ಮೇಲೆ ಬಲವಂತವಾಗಿ ಹೇರುವುದಲ್ಲ. ಮೊದಲು ಲಸಿಕೆ ಹಂಚುವಿಕೆಯಲ್ಲಿಯರುವ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ಕನಿಷ್ಠ, ಯಾರೆಲ್ಲ ಲಸಿಕೆ ಹಾಕಿಸಿಕೊಳ್ಳಲು ಇಷ್ಟ ಪಡುತ್ತಾರೆಯೋ ಅವರಿಗೆಲ್ಲ ಉಚಿತವಾಗಿ ಲಸಿಕೆ ಸಿಗುವ ವ್ಯವಸ್ಥೆಯನ್ನು ಮಾಡಬೇಕು. ಇದೇ ಸಂದರ್ಭದಲ್ಲಿ ಲಸಿಕೆಯ ಕುರಿತಂತೆ ಹರಡಿರುವ ಭಯವನ್ನು ಇಲ್ಲವಾಗಿಸುವುದು ಸರಕಾರದ ಹೊಣೆ.

ಹಲವೆಡೆ ಲಸಿಕೆ ತೆಗೆದುಕೊಂಡ ಮರುದಿನವೇ ವ್ಯಕ್ತಿ ಮೃತಪಟ್ಟ ಘಟನೆಗಳು ನಡೆದಿವೆ. ಈ ಸಾವಿಗೆ ಲಸಿಕೆ ಎಷ್ಟರಮಟ್ಟಿಗೆ ಹೊಣೆ? ಈ ಸಾವು ಸಂಭವಿಸಿರುವುದು ಲಸಿಕೆಯಿಂದಲೋ, ಇತರ ಕಾರಣದಿಂದಲೋ ಎನ್ನುವುದನ್ನು ತನಿಖೆ ನಡೆಸಿ, ಅದರ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು. ಇದರ ಜೊತೆಗೇ ಲಸಿಕೆ ಹಾಕಿಸಿಕೊಳ್ಳುವುದರಿಂದಾಗುವ ಪ್ರಯೋಜನಗಳನ್ನು ಜನರಿಗೆ ಮನವರಿಕೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಬಡವರನ್ನು ಆಕರ್ಷಿಸುವುದಕ್ಕಾಗಿ, ಲಸಿಕೆ ತೆಗೆದುಕೊಂಡವರಿಗೆ ಎರಡು ತಿಂಗಳು ಹೆಚ್ಚುವರಿ ರೇಷನ್ ನೀಡುವ ಘೋಷಣೆ ಮಾಡಬೇಕು. ಒಂದು ದಿನ ರಜೆ ಹಾಕಿ ಲಸಿಕೆ ಹಾಕಿಸಿಕೊಳ್ಳಲು ಬರುವ ಕೂಲಿ ಕಾರ್ಮಿಕರಿಗೆ ವಿಶೇಷ ನಗದನ್ನು ನೀಡಬೇಕು. ಇಂತಹ ಮಾನವೀಯ ಕ್ರಮದಿಂದಷ್ಟೇ ಲಸಿಕೆಯನ್ನು ಜನಪ್ರಿಯಗೊಳಿಸಬಹುದು. ಈ ದೇಶದಲ್ಲಿ ದೊಡ್ಡ ಸಂಖ್ಯೆಯ ಬಡವರ ಸಮಸ್ಯೆ ಕೊರೋನ, ಲಸಿಕೆ ಇತ್ಯಾದಿಗಳಲ್ಲ. ಅವರ ಮೊದಲ ಆದ್ಯತೆ ಅನ್ನ. ಅದಕ್ಕಾಗಿ ಅವರಿಗೆ ಬೇಕಾಗಿರುವುದು ಕೆಲಸ. ಬಡವರ ನಿಜ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಜಿಲ್ಲಾಧಿಕಾರಿಗಳು ಆದೇಶಗಳನ್ನು ಹೊರಡಿಸಿದರೆ ಅದು ಇನ್ನೊಂದು ತುಘಲಕ್ ಆದೇಶವಾಗಿ, ಜನರ ಆಕ್ರೋಶಕ್ಕೆ ಕಾರಣವಾಗಬಹುದು. ಇದು ಲಸಿಕೆ ಆಂದೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News