ಬೆಂಗಳೂರು: ನಕಲಿ ಕೋವಿಡ್ ಟೆಸ್ಟ್ ವರದಿ, ಪಾಸ್ ಪೋರ್ಟ್ ತಯಾರಿಸುತ್ತಿದ್ದ ಆರೋಪಿಯ ಸೆರೆ

Update: 2021-09-02 10:00 GMT

ಆನೇಕಲ್, ಸೆ.2: ಕೋವಿಡ್-19 ಪರೀಕ್ಷೆಯ ನಕಲಿ ವರದಿ ಹಾಗೂ‌ ನಕಲಿ ಪಾಸ್ ಪೋರ್ಟ್ ತಯಾರಿಸಿ‌ ಕೊಡುತ್ತಿದ್ದ ಆರೋಪಿಯೊಬ್ಬನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿ ನಿಪುಣ್(30) ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹುಳಿಮಾವು ಬಳಿಯ ನ್ಯಾನಪನಹಳ್ಳಿಯ ಅವಳಿ ಸಿಂಗೇರಿ ಮನೆಯಲ್ಲಿ ನಕಲಿ ದಂಧೆ ನಡೆಸುತ್ತಿದ್ದ ನಿಪುಣ್, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು‌ ಕೊಡಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಲಾಕ್‌ಡೌ‌ನ್‌ನಲ್ಲಿ ಕೆಲಸವಿರಲಿಲ್ಲ. ಈ ವೇಳೆ ನಕಲಿ ಕೋವಿಡ್ ವರದಿ ಹಾಗೂ ನಕಲಿ ಪಾಸ್ ಪೋರ್ಟ್ ತಯಾರಿಸಿ ಮಾರಲಾರಂಭಿಸಿದ್ದಾನೆ' ಎಂದು ಪೊಲೀಸರು ಹೇಳಿದ್ದಾರೆ.

'ಗ್ರಾಹಕರನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿ, ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ಪಡೆದು ಕೋವಿಡ್ ಟೆಸ್ಟ್ ವರದಿ ತಯಾರಿಸುತ್ತಿದ್ದ. ಆನ್‌ಲೈನ್ ಮೂಲಕ ಹಣ ಪಡೆದು ವರದಿಯನ್ನು ಗ್ರಾಹಕರ‌ ಕೈಗೆ ತಲುಪಿಸುತ್ತಿದ್ದ. ಕೋವಿಡ್ ನಕಲಿ ವರದಿಗೆ ರೂ.2,000ದಿಂದ ರೂ.5,000 ಪಡೆಯುತ್ತಿದ್ದ. ನಕಲಿ ಪಾಸ್ ಪೋರ್ಟ್ ಗೆ ರೂ. 25 ಸಾವಿರದಿಂದ 5 ಲಕ್ಷ ರೂ.ವರೆಗೂ  ಪಡೆಯುತ್ತಿದ್ದ' ಎಂದೂ ಪೊಲೀಸರು ತಿಳಿಸಿದ್ದಾರೆ. 'ಆರೋಪಿ ಕಡೆಯಿಂದ ಲ್ಯಾಪ್‌ಟಾಪ್, ಮುದ್ರಣ ಯಂತ್ರ ಹಾಗೂ ನಕಲಿ ವರದಿಗಳನ್ನು ಜಪ್ತಿ ಮಾಡಲಾಗಿದೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News