ಅಂಬೇಡ್ಕರ್‌ರನ್ನು ಪಠ್ಯ ಪುಸ್ತಕಗಳಿಂದ ಹೊರ ದಬ್ಬಲಾಗುತ್ತದೆಯೇ?

Update: 2021-09-03 04:23 GMT

ಇತ್ತೀಚೆಗೆ ದಿಲ್ಲಿ ವಿಶ್ವವಿದ್ಯಾನಿಲಯವು ಬಿಎ (ಆನರ್ಸ್) ಕೋರ್ಸ್‌ನ ಪಠ್ಯ ಪುಸ್ತಕಗಳಿಂದ ಮೂವರು ಲೇಖಕರನ್ನು ಹೊರ ಹಾಕಿತ್ತು. ಇವರಲ್ಲಿ ಇಬ್ಬರು ದಲಿತ ಲೇಖಕರಾಗಿದ್ದರೆ, ಇನ್ನೊಬ್ಬರು ದೇಶದ ಖ್ಯಾತ ಲೇಖಕಿ ಮಹಾಶ್ವೇತಾ ದೇವಿ. ಸುಖಿರ್ತಾರಿಣಿಯವರ ಮೈ ಬಾಡಿ, ಸೂಸೈರಾಜ್ ಅವರ ಸಂಗಾತಿ ಮತ್ತು ಮಹಾಶ್ವೇತಾದೇವಿಯವರ ದ್ರೌಪದಿ ಕೈ ಬಿಟ್ಟ ಪಠ್ಯಗಳಾಗಿವೆ. ಇವುಗಳಲ್ಲಿ ದ್ರೌಪದಿ ಈಗಾಗಲೇ ದೇಶದ ಹತ್ತು ಹಲವು ಭಾಷೆಗಳಿಗೆ ಅನುವಾದಗೊಂಡಿರುವ ನೀಳ್ಗತೆ. ಈ ಕತೆಯಲ್ಲಿ ಮಹಿಳೆಯರ ಮೇಲೆ, ಬುಡಕಟ್ಟು ಜನರ ಮೇಲೆ, ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಹೃದಯವಿದ್ರಾವಕವಾಗಿ ಕಟ್ಟಿಕೊಡಲಾಗಿದೆ. ಈ ಮೂರೂ ಲೇಖಕರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬರಹಗಳಿಗಾಗಿ ಸುದ್ದಿಯಲ್ಲಿರುವವರು. ಇವರ ಪಠ್ಯಗಳನ್ನು ಕೈ ಬಿಡಲು ವಿವಿ ನೀಡಿರುವ ಸಮರ್ಥನೆಯೂ ಕುತೂಹಲಕರವಾಗಿದೆ.

‘ಭಾಷಾ ವಿಷಯದ ಪಠ್ಯ ಕ್ರಮವು ಯಾವುದೇ ವ್ಯಕ್ತಿಯ ಭಾವನೆಗಳನ್ನು ನೋಯಿಸುವ ವಿಷಯಗಳನ್ನು ಒಳಗೊಂಡಿರಬಾರದು’ ಎನ್ನುವ ಕಾರಣದಿಂದ ಲೇಖಕರ ಬರಹಗಳನ್ನು ಹೊರಗಿಡಲಾಗಿದೆಯಂತೆ. ತಮ್ಮ ಮೂಗಿನ ನೇರಕ್ಕೆ ಇಲ್ಲದೇ ಇರುವ ಇತಿಹಾಸವನ್ನು ತಿರುಚುವ ಮೂಲಕ ಹೊಸ ಇತಿಹಾಸವೊಂದನ್ನು ರಚಿಸುವುದಕ್ಕೆ ಆರೆಸ್ಸೆಸ್ ಹೊರಟಿದೆ. ಇದೀಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ, ಅದಕ್ಕೆ ಇನ್ನಷ್ಟು ವೇಗ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಇತಿಹಾಸದಂತೆಯೇ ಭಾಷಾ ಪಠ್ಯ ಪುಸ್ತಕಗಳೂ ವಿದ್ಯಾರ್ಥಿಗಳ ಆಲೋಚಿಸುವ ವಿಧಾನವನ್ನು ನಿಯಂತ್ರಿಸುತ್ತದೆ ಎನ್ನುವುದನ್ನು ಮನಗಂಡು, ಯಾರ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು, ಯಾರ ಸಾಹಿತ್ಯವನ್ನು ಹೊರಗಿಡಬೇಕು ಎನ್ನುವುದನ್ನು ನಿರ್ಧರಿಸಲು ಮುಂದಾಗಿದೆ. ಮಹಾಶ್ವೇತಾದೇವಿಯಂತಹ ಅಪ್ಪಟ ಮಾನವೀಯ ಲೇಖಕಿಯ ಸಾಹಿತ್ಯ ಈ ಕಾರಣಕ್ಕಾಗಿಯೇ ದಿಲ್ಲಿ ವಿವಿಗೆ ಬೇಡವಾಗಿದೆ. ಬುಡಕಟ್ಟು ಮಹಿಳೆಯರ ನೋವುಗಳನ್ನು, ಸೇನೆಗಳ ಕ್ರೌರ್ಯಗಳನ್ನು , ದಲಿತರ ಹಸಿವನ್ನು, ಹೆಣ್ಣಿನ ಆಕ್ರಂದನಗಳನ್ನು ತೆರೆದಿಡುವ ಮಹಾಶ್ವೇತಾದೇವಿಯು ಈ ದೇಶದ ಮೇಲ್ವರ್ಗ ಮತ್ತು ಮೇಲ್‌ಜಾತಿಯ ನಾಯಕರ ಭಾವನೆಗಳನ್ನು ಸಹಜವಾಗಿಯೇ ನೋಯಿಸುತ್ತಿದ್ದಾರೆ. ಇಂತಹ ಲೇಖಕರ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ಬಂಡೇಳುವ, ಪ್ರತಿಭಟಿಸುವ ಮನಸ್ಥಿತಿಯನ್ನು ಸೃಷ್ಟಿಸಬಹುದು ಎನ್ನುವ ಭಯ ಸರಕಾರವನ್ನೂ ಕಾಡುತ್ತಿದೆ.

ಇತ್ತೀಚೆಗೆ ಕರ್ನಾಟಕ ಸರಕಾರ ‘ಬೌದ್ಧ ಧರ್ಮ ಉದಯವಾಗಲು ಕಾರಣವೇನು?’ ಎನ್ನುವ ಪ್ರಶ್ನೆಯನ್ನು ಯಾವ ಕಾರಣಕ್ಕೂ ಕೇಳಬಾರದು ಎಂಬ ಆದೇಶವನ್ನು ಹೊರಡಿಸಿತ್ತು. ಬೌದ್ಧ ಧರ್ಮ ಉಗಮಕ್ಕೆ ಕಾರಣ ಏನು ? ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ, ಪುರೋಹಿತಶಾಹಿ ವ್ಯವಸ್ಥೆ ಹಿಂದೂ ಸಮಾಜವನ್ನು ಶೋಷಿಸುತ್ತಿದ್ದ ಬಗೆಯನ್ನು ವಿವರಿಸಬೇಕಾಗುತ್ತದೆ. ಹೀಗೆ ವಿವರಿಸುವುದರಿಂದ ಹಿಂದೂ ಸಮಾಜಕ್ಕೆ ನೋವಾಗುತ್ತದೆ ಎಂದು ಆ ಪ್ರಶ್ನೆಯನ್ನೇ ಕಿತ್ತುಹಾಕಲು ಸರಕಾರ ಸೂಚನೆ ನೀಡಿತು. ಇದು ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ಪುರೋಹಿತಶಾಹಿಗಳ ವಿರುದ್ಧ ವಿವೇಕಾನಂದರು, ನಾರಾಯಣಗುರುಗಳು ಮಾಡಿದ ಹೋರಾಟಗಳನ್ನು ಕೂಡ ಇತಿಹಾಸದಿಂದ ಬಚ್ಚಿಡುವ ಪ್ರಯತ್ನ ನಡೆಯಬಹುದು. ಈ ದೇಶದ ಜಾತಿ ವ್ಯವಸ್ಥೆಯ ವಿರುದ್ಧ ಕಟು ಧ್ವನಿಯಲ್ಲಿ ಮಾತನಾಡಿದ ಜ್ಯೋತಿ ಬಾಫುಲೆಯಂತಹ ಮಹನೀಯರು ಪಠ್ಯದೊಳಗೆ ಸೇರ್ಪಡೆಯಾಗುವುದು ಕಷ್ಟವಾಗಬಹುದು. ಇದೇ ಸಂದರ್ಭದಲ್ಲಿ ಮಹಾಡ್‌ನಲ್ಲಿ ಅಂಬೇಡ್ಕರ್ ಕೆರೆ ನೀರು ಕುಡಿಯುವುದಕ್ಕಾಗಿ ನಡೆಸಿದ ಹೋರಾಟವನ್ನೂ ಇನ್ನು ವಿದ್ಯಾರ್ಥಿಗಳು ಓದುವಂತಿಲ್ಲ. ಯಾಕೆಂದರೆ ಚಳವಳಿ ಒಂದು ಕಾಲದಲ್ಲಿ ಈ ದೇಶದ ಮೇಲ್‌ವರ್ಣೀಯರು ದಲಿತರ ಮತ್ತು ಶೂದ್ರರ ಮೇಲೆ ಎಸಗಿದ ದೌರ್ಜನ್ಯಗಳನ್ನು ಬಹಿರಂಗ ಪಡಿಸಬಹುದು. ಇದು ಈಗಿನ ಮೇಲ್‌ಜಾತಿಯ ಜನರ ಭಾವನೆಗಳನ್ನು ನೋಯಿಸುವ ಸಾಧ್ಯತೆಗಳಿವೆ ಎಂದು ಸರಕಾರ ಅಂಬೇಡ್ಕರ್ ನಡೆಸಿದ ಯಾವುದೇ ಹೋರಾಟಗಳನ್ನು ಪಠ್ಯ ಪುಸ್ತಕಗಳಲ್ಲಿ ದಾಖಲಿಸಬಾರದು ಎಂದು ಆದೇಶ ಹೊರಡಿಸುವ ದಿನ ದೂರವಿಲ್ಲ. ಹಾಗೆಯೇ ‘ಬ್ರಹ್ಮ ಸಮಾಜ’ ಯಾಕೆ ಹುಟ್ಟಿತು? ಎಂಬ ಪ್ರಶ್ನೆಯೂ ಹಿಂದೂ ಸಮಾಜದ ಹತ್ತು ಹಲವು ನಕಾರಾತ್ಮಕ ವಿಷಯಗಳನ್ನು ಹೇಳುವುದರಿಂದ ಅದನ್ನೂ ಹೊರಗಿಡಬೇಕಾಗುತ್ತದೆ.

ಭಾರತದ ಇತಿಹಾಸವಿರಲಿ, ಸಾಹಿತ್ಯವಿರಲಿ ಅವುಗಳನ್ನು ಜಾತಿ ರಹಿತವಾಗಿ ನೋಡುವುದು ಸಾಧ್ಯವೇ ಇಲ್ಲ. ಜಾತಿಗಳು ಭಾರತಕ್ಕೆ ಮಾಡಿದ ಆಳವಾದ ಗಾಯಗಳನ್ನು ಮುಚ್ಚಿಟ್ಟು ಹೊಸ ಇತಿಹಾಸವನ್ನು ಬರೆಯುವ ಪ್ರಯತ್ನ ನಡೆಸಿದರೆ ಅದರಲ್ಲಿ ಆರೆಸ್ಸೆಸ್ ಅಥವಾ ಯಾವುದೇ ಸಂಘಟನೆಗಳು ಯಶಸ್ವಿ ಕಾಣಲಾರವು. ಯಾಕೆಂದರೆ, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಫುಲೆ, ನಾರಾಯಣ ಗುರು, ರಾಜಾರಾಮ್ ಮೋಹನ್ ರಾಯ್, ಅಂಬೇಡ್ಕರ್, ಕಾನ್ಶೀರಾಂ ಮೊದಲಾದ ಮಹಾನ್ ನಾಯಕರನ್ನು ಹೊರಗಿಟ್ಟು ಬರೆಯುವ ಇತಿಹಾಸದ ಮೂಲಕ, ಪಾರ್ಶ್ವಪೀಡಿತ ಭಾರತವನ್ನಷ್ಟೇ ತೋರಿಸಲು ಸಾಧ್ಯ. ಕರ್ನಾಟಕದ ಪಠ್ಯ ಪುಸ್ತಕಗಳನ್ನೇ ತೆರೆದು ನೋಡೋಣ. ರಾಷ್ಟ್ರಕವಿಯೆಂದು ಕರೆಯಲ್ಪಟ್ಟ ಕುವೆಂಪು ಅವರು ಈ ನಾಡಿನ ಪುರೋಹಿತ ಶಾಹಿ ವ್ಯವಸ್ಥೆಯ ವಿರುದ್ಧ ಬಂಡೆದ್ದು ಬರೆದವರು. ಶೂದ್ರ ಶಂಭೂಕನ ಮೂಲಕ ಶ್ರೀರಾಮನ ಜಾತೀಯತೆಯ ಗರ್ವವನ್ನು ಇಳಿಸಿದವರು. ಯಾರಿಗೆ ಬಂತು ಎಲ್ಲಿ ಗೆ ಬಂತು ನಲ್ವತ್ತೇಳರ ಸ್ವಾತಂತ್ರ? ಎಂಬ ಪ್ರಶ್ನೆಯನ್ನು ಕೇಳಿ ಯುವ ಸಮೂಹವನ್ನು ಬಡಿದೆಬ್ಬಿಸಿದ ಸಿದ್ದಲಿಂಗಯ್ಯ ಅವರ ಬರಹಗಳೂ ಇಂದಿನ ರಾಜಕೀಯ ನಾಯಕರ ಭಾವನೆಗಳನ್ನು ನೋಯಿಸಬಹುದು. ದೇವನೂರ ಮಹಾದೇವರ ಅಮಾಸ ಎನ್ನುವ ಪಠ್ಯವನ್ನು ಅಳವಡಿಸುವುದು ಸರಕಾರಕ್ಕೆ ಮುಜುಗರವಾಗಬಹುದು. ಹಾಗಾದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಏನನ್ನು ಓದಬೇಕು? ಬ್ರಿಟಿಷರಿಗೆ ಕ್ಷಮಾಯಾಚನೆಯನ್ನು ಬರೆದುಕೊಟ್ಟು ಜೈಲು ಶಿಕ್ಷೆಯಿಂದ ಪಾರಾದ ಸಾವರ್ಕರ್ ಅವರನ್ನು ವೀರ ಶೂರರೆಂದು ಕರೆದು ಅದನ್ನೇ ಮಕ್ಕಳಿಗೆ ಉರು ಹೊಡೆಸಲು ಹೊರಟಿದೆಯೇ? ಗಾಂಧೀಜಿಯನ್ನು ಕೊಂದಿರುವುದು ಹಿಂದೂ ಮಹಾಸಭಾದ ಕಾರ್ಯಕರ್ತನಾಗಿರುವ ನಾಥೂರಾಂ ಗೋಡ್ಸೆ ಎನ್ನುವುದನ್ನು ಪಠ್ಯದಲ್ಲಿ ಅಳವಡಿಸಿದರೆ ಹಿಂದೂಗಳ ಮನಸ್ಸಿಗೆ ನೋವಾಗಬಹುದು ಎಂದು, ಗಾಂಧೀಜಿ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ಇತಿಹಾಸ ಪುಸ್ತಕದಲ್ಲಿ ದಾಖಲಿಸಲು ಹೊರಟಿದೆಯೇ?

ಪಠ್ಯ ಪುಸ್ತಕಗಳು ಅದೇನನ್ನೇ ಬೋಧಿಸಲಿ, ಅಂತಿಮವಾಗಿ ಈ ನೆಲದಲ್ಲಿ ನಡೆದದ್ದೇನು, ನಡೆಯುತ್ತಿರುವುದೇನು ಎನ್ನುವುದನ್ನು ಈ ದೇಶದ ಕಲ್ಲು, ಮಣ್ಣುಗಳೂ ಈಗಲೂ ಹೇಳುತ್ತಿವೆ. ದಮನಿತರ ಇತಿಹಾಸವನ್ನು ಸಂಘಪರಿವಾರ ಅದೆಷ್ಟು ಚಿವುಟಿದರೂ ಅವು ಏಕಲವ್ಯನ ಬೆರಳಿನಂತೆ ಮತ್ತೆ ಚಿಗುರುತ್ತವೆ. ಬೆರಳು ಕತ್ತರಿಸಿದವರ ಕೊರಳನ್ನೇ ಬಲಿ ತೆಗೆದುಕೊಳ್ಳುತ್ತವೆ. ಜ್ಯೋತಿಬಾ ಫುಲೆ, ಸಾವಿತ್ರಿ ಬಾಫುಲೆ, ನಾರಾಯಣ ಗುರು, ಕುವೆಂಪು, ಅಂಬೇಡ್ಕರ್ ಮೊದಲಾದವರು ಬಿತ್ತಿದ್ದ ಬೀಜ ಕಿತ್ತಷ್ಟೂ ಮೊಳಕೆಯೊಡೆಯುವಂತಹದು. ಇದು ಹಿಂದೆಯೂ ಸಾಬೀತಾಗಿದೆ. ಮುಂದೆಯೂ ಸಾಬೀತಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News