'ನೀವು ನೆಹರು ಅವರನ್ನು ಏಕೆ ಇಷ್ಟೊಂದು ದ್ವೇಷಿಸುತ್ತೀರಿ': ಕೇಂದ್ರವನ್ನು ಪ್ರಶ್ನಿಸಿದ ಸಂಜಯ್ ರಾವತ್

Update: 2021-09-05 07:00 GMT

ಮುಂಬೈ: ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿದ ಪೋಸ್ಟರ್ ನಿಂದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಚಿತ್ರವನ್ನು ಕೈಬಿಟ್ಟಿರುವುದು ಕೇಂದ್ರದ ‘ಸಂಕುಚಿತ ಮನೋಭಾವವನ್ನು’ ತೋರಿಸುತ್ತದೆ. ಕೇಂದ್ರ ಸರಕಾರವು ನೆಹರು ಅವರನ್ನು ಏಕೆ ಇಷ್ಟೊಂದು ದ್ವೇಷಿಸುತ್ತದೆ? ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಕೇಳಿದ್ದಾರೆ.

ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ರಾವತ್ ತನ್ನ ವಾರದ ಅಂಕಣ 'ರೋಖ್‌ಥೋಕ್' ನಲ್ಲಿ, ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್‌ಆರ್) ನೆಹರು ಹಾಗೂ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಚಿತ್ರಗಳನ್ನು ತನ್ನ ಪೋಸ್ಟರ್‌ನಿಂದ ಹೊರಗಿಟ್ಟಿದೆ ಇದು ‘ರಾಜಕೀಯ ಸೇಡು ತೀರಿಸಿಕೊಳ್ಳುವ’ ಕೃತ್ಯ ಎಂದು ಆರೋಪಿಸಿದರು.

"ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಹಾಗೂ  ಇತಿಹಾಸವನ್ನು ರಚಿಸುವವರು ಸ್ವಾತಂತ್ರ್ಯ ಹೋರಾಟದ ನಾಯಕರಲ್ಲಿ ಒಬ್ಬರನ್ನು ಹೊರಗಿಡುತ್ತಿದ್ದಾರೆ. ಈ ಕೃತ್ಯವು ರಾಜಕೀಯ ಪ್ರತೀಕಾರದಿಂದ ಕೂಡಿದ್ದು ಇದು ಅವರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಇದು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿರುವ ಅವಮಾನ"ಎಂದು ರಾವತ್ ಹೇಳಿದ್ದಾರೆ.

ಸ್ವಾತಂತ್ರ್ಯಾನಂತರ ನೆಹರೂ ಅವರ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದು ಸಾಮ್ನಾ ಕಾರ್ಯಕಾರಿ ಸಂಪಾದಕರಾದ ರಾಜ್ಯಸಭಾ ಸದಸ್ಯ ಹೇಳಿದರು.

"ನೆಹರು ಅವರನ್ನು ತುಂಬಾ ದ್ವೇಷಿಸಲು ಅವರೇನು ಮಾಡಿದ್ದಾರೆ? ವಾಸ್ತವವಾಗಿ, ಅವರು ನಿರ್ಮಿಸಿದ ಸಂಸ್ಥೆಗಳನ್ನು ಈಗ ಭಾರತದ ಆರ್ಥಿಕತೆಯನ್ನು ಮುಂದುವರಿಸಲು ಮಾರಾಟ ಮಾಡಲಾಗುತ್ತಿದೆ" ಎಂದು ರಾವತ್ ಹೇಳಿದರು.

ಇತ್ತೀಚೆಗೆ ಕೇಂದ್ರದಿಂದ ಘೋಷಿಸಲಾಗಿರುವ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಉಲ್ಲೇಖಿಸಿದ ರಾವತ್,  ನೆಹರೂರವರ ‘ದೀರ್ಘಾವಧಿಯ ದೃಷ್ಟಿಕೋನ’ ದಿಂದಾಗಿ ದೇಶವು ಆರ್ಥಿಕ ವಿನಾಶದಿಂದ ಪಾರಾಯಿತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News