ಮುಝಫ್ಫರ್ ನಗರದಲ್ಲಿ ರೈತರ ಮಹಾ ಪಂಚಾಯತ್ : ಪ್ರತಿಭಟನೆ ಮುಂದುವರಿಸಲು ನಿರ್ಧಾರ

Update: 2021-09-05 07:44 GMT
Image Source : PTI

ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ಬೃಹತ್ ಸಭೆ ನಡೆಸಿದರು. ಪ್ರತಿಭಟನೆಯನ್ನು ಮುಂದುವರಿಸುವ ತಮ್ಮ ನಿರ್ಧಾರವನ್ನು ರೈತರು ಪುನರುಚ್ಚರಿಸಿದರು.

 "ಬೆರಳೆಣಿಕೆಯಷ್ಟು ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಎಷ್ಟು ಜನರು ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ಅವರು ನೋಡಲಿ. ನಾವು ಧ್ವನಿ ಎತ್ತೋಣ. ಇದು ಸಂಸತ್ತಿನಲ್ಲಿ ಕುಳಿತವರ ಕಿವಿಗೆ ತಲುಪುತ್ತದೆ" ಎಂದು ವೇದಿಕೆ ಯಲ್ಲಿದ್ದವರು ಘೋಷಿಸಿದರು.

ನೆರೆದಿದ್ದವರ ಮೇಲೆ ಹೆಲಿಕಾಪ್ಟರ್‌ನಿಂದ ಹೂವಿನ ದಳಗಳನ್ನು ಸುರಿಯಲು ಆಡಳಿತವು ಅನುಮತಿ ನೀಡಿಲ್ಲ ಎಂದು ಸಭೆಯಲ್ಲಿ ಭಾಗವಹಿಸುತ್ತಿರುವ ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ ಅವರು ಟ್ವೀಟ್ ಮಾಡಿದರು.

ಹಾಪುರ್, ಬುಲಂದ್‌ಶಹರ್, ಅಲಿಗಡ್ ಮತ್ತು ಇತರ ಪ್ರದೇಶಗಳ ರೈತರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಭಟನೆ ಆರಂಭವಾದ ಒಂಬತ್ತು ತಿಂಗಳಲ್ಲಿ ಇದು ದೊಡ್ಡ ರೈತ ಸಮಾವೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

''ಮಹಾಪಂಚಾಯತ್' ಆಂದೋಲನವು 'ಎಲ್ಲಾ ಜಾತಿಗಳು, ಧರ್ಮಗಳು, ರಾಜ್ಯಗಳು, ವರ್ಗಗಳು, ಸಣ್ಣ ವ್ಯಾಪಾರಿಗಳು ಹಾಗೂ  ಸಮಾಜದ  ಎಲ್ಲಾ ವರ್ಗಗಳ ಬೆಂಬಲವನ್ನು ಹೊಂದಿದೆ ಎಂದು ಸಾಬೀತುಪಡಿಸುತ್ತದೆ" ಎಂದು ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ 40 ರೈತ ಸಂಘಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

ಸೆಪ್ಟೆಂಬರ್ 5 ರ 'ಮಹಾಪಂಚಾಯತ್' ಯೋಗಿ-ಮೋದಿ ಸರಕಾರಗಳು ರೈತರು, ಕೃಷಿ ಕಾರ್ಮಿಕರು ಹಾಗೂ  ರೈತ ಚಳುವಳಿಯ ಬೆಂಬಲಿಗರ ಶಕ್ತಿಯನ್ನು ಅರಿತುಕೊಳ್ಳುವಂತೆ ಮಾಡುತ್ತದೆ ಎಂದು ರೈತ ಸಂಘ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News