ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ ರಾಜ್ಯ ಸರಕಾರ

Update: 2021-09-05 11:50 GMT

ಬೆಂಗಳೂರು, ಸೆ. 5: ಕೋವಿಡ್-19 ಸೋಂಕಿನ ಮೂರನೆ ಅಲೆಯ ಆತಂಕದ ನಡುವೆಯೇ ರಾಜ್ಯ ಸರಕಾರ, ರಾಜ್ಯಾದ್ಯಂತ ಐದು ದಿನಗಳ ಕಾಲ `ಸಾರ್ವಜನಿಕ ಗಣೇಶೋತ್ಸವ ಆಚರಣೆ'ಗೆ ಷರತ್ತು ಬದ್ಧ ಅನುಮತಿ ನೀಡಿದ್ದು, ಮೆರವಣಿಗೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿ `ಪರಿಷ್ಕೃತ ಮಾರ್ಗಸೂಚಿ'ಯನ್ನು ಹೊರಡಿಸಲಾಗಿದೆ.

ರವಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ವಿಷಯಕ್ಕೆ ಸಂಬಂಧಿಸಿದ ಉನ್ನತಮಟ್ಟದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದೆ. ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ವಿಧಿಸುವ ಷರತ್ತುಗಳನ್ನು ಪಾಲಿಸಿಕೊಂಡು ಕೋವಿಡ್ ಮಾರ್ಗಸೂಚಿ ಅನುಸರಿಸಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, `ಸೆ.9ರಿಂದ ಗೌರಿ ಮತ್ತು ಗಣೇಶನ ಹಬ್ಬ ಆರಂಭವಾಗಲಿದ್ದು, ಗರಿಷ್ಠ ಐದು ದಿನಗಳವರೆಗೆ ಮಾತ್ರ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ವಾರ್ಡ್‍ಗೆ ಒಂದು ಹಾಗೂ ಹಳ್ಳಿಗಳಲ್ಲಿ ಸ್ಥಳೀಯ ಆಡಳಿತದ ತೀರ್ಮಾನದಂತೆ ಸಾರ್ವಜನಿಕ ಗಣೇಶೋತ್ಸವ ನಡೆಸಲು ಷರತ್ತು ಬದ್ಧ ಅನುಮತಿ ನೀಡಲಾಗುವುದು' ಎಂದು ಸ್ಪಷ್ಟಪಡಿಸಿದರು.

ನಗರಗಳಲ್ಲಿ ಪ್ರತಿ ವಾರ್ಡ್‍ಗೆ ಒಂದು ಸ್ಥಳದಲ್ಲಿ ಮಾತ್ರ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ದೊರೆಯಲಿದೆ. ಪೊಲೀಸರು ಕಾರ್ಯಕ್ರಮ ಸಂಘಟಕರ ಜತೆ ಚರ್ಚಿಸಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಡಿ.ಜೆ.ಧ್ವನಿವರ್ಧಕ ಬಳಕೆಗೆ ಅನುಮತಿ ಇರುವುದಿಲ್ಲ.ಗಣೇಶ ವಿಗ್ರಹಗಳ ವಿಸರ್ಜನೆಗೆ ಮೆರವಣಿಗೆ ನಡೆಸುವಂತಿಲ್ಲ. ನಿಗದಿತ ಸಂಖ್ಯೆಯ ಜನರು ಮಾತ್ರ ಗಣೇಶ ವಿಗ್ರಹ ವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಶಾಲೆ-ಕಾಲೇಜುಗಳಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲ' ಎಂದು ಅಶೋಕ್ ತಿಳಿಸಿದರು.

ಗಣೇಶೋತ್ಸವ ಪೆಂಡಾಲ್ 50-50 ಅಡಿ ವಿಸ್ತೀರ್ಣದಲ್ಲಿ ಕೇವಲ 20 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ಗಣೇಶೋತ್ಸವ ಆಚರಣೆ ಮಾಡುವಂತಿಲ್ಲ. ಸಾರ್ವಜನಿಕ ಗಣೇಶ  ಉತ್ಸವದಲ್ಲಿ ಪಾಲ್ಗೊಳ್ಳುವವರು ಕೋವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ. ಕಾರ್ಯಕ್ರಮ ಸಂಘಟಕರು ಕೋವಿಡ್ ಪರೀಕ್ಷೆಯನ್ನೂ ಮಾಡಿಸಿಕೊಂಡಿರಬೇಕು' ಎಂದು ಅಶೋಕ್ ಹೇಳಿದರು.

ಗಡಿ ಜಿಲ್ಲೆಗಳಲ್ಲಿ ಡಿಸಿಗಳಿಗೆ ಅಧಿಕಾರ: ರಾಜ್ಯದ ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ದೃಢಪ್ರಮಾಣ ದರ ಶೇ.2ಕ್ಕಿಂತ ಕಡಿಮೆಯಾದರೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾರ್ಯಕ್ರಮ ನಡೆದ ಸ್ಥಳದಲ್ಲೇ ಕೋವಿಡ್ ಲಸಿಕೆ ನೀಡಲು ವ್ಯವಸ್ಥೆ ಮಾಡಬೇಕು. ಆ ಪ್ರದೇಶದಲ್ಲಿ ಲಸಿಕೆ ನೀಡುವುದನ್ನು ಹೆಚ್ಚಿಸಬೇಕೆಂಬ ಷರತ್ತುಗಳನ್ನೂ ವಿಧಿಸಲಾಗಿದೆ ಎಂದು ಸಚಿವ ಅಶೋಕ್ ವಿವರಿಸಿದರು.

ಮಾರ್ಗಸೂಚಿ: ಗಣೇಶ ಚತುರ್ಥಿಯನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ಮತ್ತು ತಮ್ಮ ತಮ್ಮ ಮನೆ ಅಥವಾ ಕಚೇರಿ/ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ನಾಲ್ಕು ಅಡಿ ಮತ್ತು ಮನೆಗಳಲ್ಲಿ ಎರಡು ಅಡಿ ಮೀರದಂತೆ ಪ್ರತಿಷ್ಟಾಪಿಸುವುದು. ಪಾರಂಪಾರಿಕ ಗಣೇಶೋತ್ಸವಕ್ಕೆ ಸ್ಥಳೀಯಾಡಳಿತದಿಂದ ಪೂರ್ವಾನುಮತಿ ಪಡೆಯತಕ್ಕದ್ದು. ಒಂದು ನಗರದಲ್ಲಿ ವಾರ್ಡ್‍ಗೆ ಒಂದರಂತೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು. ಗರಿಷ್ಟ 5 ದಿನಗಳಿಗಿಂತ ಹೆಚ್ಚಿನ ದಿನ ಆಚರಿಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣ ನಿರ್ಮಿಸುವುದು. ಅಲ್ಲದೆ, 20ಕ್ಕಿಂತ ಹೆಚ್ಚಿನ ಜನ ಸೇರದಂತೆ ವ್ಯವಸ್ಥೆ ಕಲ್ಪಿಸಬೇಕು.

ಗಣೇಶೋತ್ಸವ ಆಯೋಜಿತ ಸ್ಥಳದಲ್ಲಿ ಆಯೋಜಕರು ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ಯಾವುದೆ ಅಡೆತಡೆಯಾಗದಂತೆ ಮೂರ್ತಿ ಪ್ರತಿಷ್ಟಾಪಿಸಬೇಕು. ಯಾವುದೇ ರೀತಿಯ ಸಾಂಸ್ಕøತಿಕ ಕಾರ್ಯಕ್ರಮ, ಡಿ.ಜೆ. ಧ್ವನಿವರ್ಧಕ ಬಳಕೆ ಸಹಿತ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಮೂರ್ತಿ ತರುವ ವೇಳೆ ಮತ್ತು ವಿಸರ್ಜನೆ ವೇಳೆ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇಲ್ಲ. ಮೂರ್ತಿಯನ್ನು ಹೊಂಡ ಅಥವಾ ಮೊಬೈಲ್ ಟ್ಯಾಂಕ್‍ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‍ಗಳಲ್ಲಿ ವಿಸರ್ಜಿಸಬೇಕು.

ಗಣೇಶೋತ್ಸವ ಆಚರಿಸುವ ಸ್ಥಳಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಭಕ್ತರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಡ್ಡಾಯ. ಭಕ್ತಾಧಿಗಳು ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಭಕ್ತಾಧಿಗಳು ಸೇರಿದಂತೆ ಎಲ್ಲರೂ ಸಾರ್ವಜನಿಕವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಹಬ್ಬದ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಉಂಟಾಗಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಗಣೇಶೋತ್ಸವ ಆಚರಿಸಬೇಕು. ಮಾರ್ಗಸೂಚಿ ಹಾಗೂ ಸರಕಾರದ ನಿರ್ದೇಶನ ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News