ಬಡಕಲಾಗುತ್ತಿರುವ ಭಾರತದ ಭವಿಷ್ಯ!

Update: 2021-09-06 05:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವ ಮಾತಿದೆ. ಇಂದಿನ ಮಕ್ಕಳೇ ನಮ್ಮ ಭವಿಷ್ಯ. ನಾವಿಂದು ಬಿತ್ತಿದ ಬೀಜದಲ್ಲೇ ಭವಿಷ್ಯದ ಮರ ಅಡಗಿದೆ. ಕಳಪೆ ಬೀಜ ಅಥವಾ ಬೀಜ ಮೊಳಕೆಯೊಡೆಯಲು ಬೇಕಾಗಿರುವ ಗೊಬ್ಬರಗಳು ಸೂಕ್ತ ಸಮಯದಲ್ಲಿ ಒದಗದೇ ಇದ್ದರೆ, ಮುಂದೆ ಗಿಡವೂ ರೋಗಗ್ರಸ್ಥವಾಗಿ ಬೆಳೆಯುತ್ತದೆ. ಹಾಗೆ ಬೆಳೆದ ಗಿಡ ಮರವಾಗಿ ಎಷ್ಟರಮಟ್ಟಿಗೆ ಫಲ ಬಿಡಬಹುದು? ನಾವೆಲ್ಲರೂ ಮೊಳಕೆಯಲ್ಲಿ ಗಿಡಗಳನ್ನು ನಿರ್ಲಕ್ಷಿಸಿ ಬೆಳೆದ ಬಳಿಕ ಮರದಲ್ಲಿ ಫಲವನ್ನು ನಿರೀಕ್ಷಿಸುತ್ತೇವೆ. ಬೆಳೆದ ಮರಕ್ಕೆ ಅದೆಷ್ಟು ಗೊಬ್ಬರ ಹಾಕಿದರೂ, ದೊಡ್ಡ ವ್ಯತ್ಯಾಸವಾಗುವುದಿಲ್ಲ. ನಮ್ಮ ಭವಿಷ್ಯ ಸಮೃದ್ಧವಾಗಬೇಕಾದರೆ, ನಮ್ಮ ಮಕ್ಕಳು ಆರೋಗ್ಯವಂತರಾಗಿ ಬೆಳೆಯಬೇಕು. ಅದಕ್ಕೆ ಬೇಕಾದ ಮುಂಜಾಗ್ರತೆಯನ್ನು ನಾವು ಮಾಡಬೇಕು.

 ಮಕ್ಕಳು, ಮಹಿಳೆ, ಬಾಣಂತಿಯರ ಬಗ್ಗೆ ಭಾರತ ಸದಾ ಶ್ರೇಷ್ಠವಾದುದನ್ನೇ ಯೋಚಿಸುತ್ತಾ ಬಂದಿದೆ. ಆದರೆ ಅದರ ಜಾರಿಯಲ್ಲಿ ಮಾತ್ರ ವಿಫಲವಾಗಿದೆ. ಪರಿಣಾಮವಾಗಿ, ಶಿಶು, ಮಕ್ಕಳು ಮತ್ತು ಬಾಣಂತಿಯರ ಸಾವು-ನೋವುಗಳನ್ನು ತಡೆಯುವಲ್ಲಿ ಭಾರತಕ್ಕೆ ಇನ್ನೂ ಸಾಧ್ಯವಾಗಿಲ್ಲ. 2016ರಲ್ಲಿ ಭಾರತದಲ್ಲಿ 6 ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆಂಬ ಆಘಾತಕಾರಿ ಮಾಹಿತಿಯನ್ನು ಯುನಿಸೆಫ್ ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿಯೊಂದು ಬಹಿರಂಗಪಡಿಸಿದೆ. ಜಗತ್ತಿನಾದ್ಯಂತ ಶಿಶು ಮರಣಗಳ ಪೈಕಿ ಮೂರನೇ ಒಂದರಷ   ್ಟು ಭಾರತದಲ್ಲೇ ಸಂಭವಿಸಿದೆಯೆಂಬ ಬೆಚ್ಚಿಬೀಳಿಸುವ ಸಂಗತಿಯನ್ನು ಕೂಡಾ ಈ ವರದಿ ಬಹಿರಂಗಪಡಿಸಿದೆ. ಅಂದ ಹಾಗೆ ಭಾರತದಲ್ಲಿ ಸಾವನ್ನಪ್ಪುವ ಶಿಶುಗಳ ಸರಾಸರಿ ಜೀವಿತಾವಧಿಯು 28 ದಿನಗಳಿಗಿಂತಲೂ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಯುನಿಸೆಫ್ 2020ರಲ್ಲಿ ಜಾಗತಿಕ ಅಪೌಷ್ಟಿಕ ಸೂಚ್ಯಂಕ ವರದಿಯನ್ನು ಬಿಡುಗಡೆಗೊಳಿಸಿತ್ತು. ಈ ವರದಿಯಲ್ಲಿ ಅಪೌಷ್ಟಿಕತೆಯ ರ್ಯಾಂಕಿಂಗ್‌ನಲ್ಲಿ ಜಗತ್ತಿನ 107 ದೇಶಗಳ ಪೈಕಿ ಭಾರತಕ್ಕೆ 102ನೇ ಸ್ಥಾನವನ್ನು ನೀಡಲಾಗಿದೆ. ಐರ್‌ಲ್ಯಾಂಡ್‌ನ ಕನ್ಸರ್ನ್ ವಲ್ಡ್‌ವೈಡ್ ಹಾಗೂ ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫಿ ಸಂಘಟನೆಗಳು ಪ್ರಕಟಿಸಿದ ಸಮೀಕ್ಷಾ ವರದಿಯು ಭಾರತದಲ್ಲಿ ಅಪೌಷ್ಟಿಕತೆಯ ಸಮಸ್ಯೆಯು ಅತ್ಯಂತ ಕಳವಳಕಾರಿಯಾಗಿದೆ ಎಂದು ಹೇಳಿದೆ. 2018ರ ಜಾಗತಿಕ ಅಪೌಷ್ಟಿಕತೆ ರ್ಯಾಂಕಿಂಗ್‌ನಲ್ಲಿ ಭಾರತವು ಜಗತ್ತಿನ 119 ದೇಶಗಳ ಪೈಕಿ 103ನೇ ಸ್ಥಾನದಲ್ಲಿದೆ. ಕಳೆದ ವರ್ಷ ಪ್ರಕಟವಾದ ಜಾಗತಿಕ ಆರೋಗ್ಯ ಸಂಸ್ಥೆಯ ವರದಿಯು ದೇಶದಲ್ಲಿ ಅಪೌಷ್ಟಿಕತೆಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆಯೆಂದು ತಿಳಿಸಿದೆ.

ಜಾಗತಿಕ ಅಪೌಷ್ಟಿಕತೆ ಸೂಚ್ಯಂಕದ ಪ್ರಕಾರ ಜಗತ್ತಿನಾದ್ಯಂತ 6 ಕೋಟಿಗೂ ಅಧಿಕ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಯಾವುದೇ ದೇಶದಲ್ಲಿ ಹಸಿವಿನ ಪ್ರಮಾಣವನ್ನು ಆಧರಿಸಿ ದೇಶಗಳಿಗೆ 0 ಯಿಂದ 100ರವರೆಗೆ ಅಂಕಗಳನ್ನು ನೀಡಲಾಗುತ್ತದೆ. 0 ಅಂಕವನ್ನು ಪಡೆದ ದೇಶದಲ್ಲಿ ಹಸಿವು ಆತಂಕದ ವಿಷಯ  ವಲ್ಲವೆಂದು ಪರಿಗಣಿಸಲಾಗುತ್ತದೆ. ಅಪೌಷ್ಟಿಕತೆ ಸೂಚ್ಯಂಕದಲ್ಲಿ ಭಾರತಕ್ಕೆ 27.2 ಅಂಕಗಳನ್ನು ನೀಡಲಾಗಿದೆ ಹಾಗೂ ಅಲ್ಲಿನ ಪರಿಸ್ಥಿತಿಯು ಗಂಭೀರವಾದುದೆಂದು ಬಣ್ಣಿಸಲಾಗಿದೆ.ಭಾರತವು ಜಾಗತಿಕ ಅಪೌಷ್ಟಿಕತೆ ಸೂಚ್ಯಂಕದಲ್ಲಿ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತಲೂ ಹಿಂದೆ ಉಳಿದಿದೆ. ಕೇವಲ 13 ರಾಷ್ಟ್ರಗಳು ಮಾತ್ರ ಭಾರತಕ್ಕಿಂತ ಕೆಳಸ್ಥಾನದಲ್ಲಿವೆ.

ಒಂದೆಡೆ ಭಾರತದ ಅಂಬಾನಿ, ಅದಾನಿಗಳು ವಿಶ್ವದಲ್ಲೇ ಶ್ರೀಮಂತ ಉದ್ಯಮಿಗಳೆಂದು ಗುರುತಿಸಲ್ಪಡುತ್ತಿದ್ದರೆ, ಭಾರತದ ಮಕ್ಕಳು ಹೊಟ್ಟೆಗಿಲ್ಲದೆ ದಿನದಿನಕ್ಕೆ ಬಡಕಲಾಗುತ್ತಿದ್ದಾರೆ. ಅಂದರೆ ಈ ಮಕ್ಕಳ ಮೂಲಕ ಬಡಕಲು ಭಾರತವೊಂದನ್ನು ಕಟ್ಟುವುದಕ್ಕೆ ನಾವು ಹೊರಟಿದ್ದೇವೆ. ಈ ಕರಾಳ ವಾಸ್ತವತೆಯು ವಿಶ್ವದ ಸೂಪರ್‌ಪವರ್ ಆಗಲು ಆತುರಪಡುತ್ತಿರುವ ನಮ್ಮ ರಾಷ್ಟ್ರದ ನಾಯಕತ್ವಕ್ಕೆ ಮನವರಿಕೆಯಾಗಬೇಕಾಗಿದೆ. ದೇಶವನ್ನು ಕಾಡುತ್ತಿರುವ ಅಪೌಷ್ಟಿಕತೆ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆಯು ನಿರ್ದೇಶ ನೀಡುತ್ತಲೇ ಬಂದಿವೆ. ಕೇಂದ್ರದ ಸರಕಾರಿ ಏಜೆನ್ಸಿಗಳು ನಡೆಸಿದ್ದ ಹಲವಾರು ಸಮೀಕ್ಷೆಗಳು ಕೂಡಾ ಈ ಜ್ವಲಂತ ವಾಸ್ತವವನ್ನು ಅನಾವರಣಗೊಳಿಸಿದ್ದವು. ಆದಾಗ್ಯೂ ಯಾವುದೇ ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗಲಿಲ್ಲ. ‘ ಬೆೇಟಿ ಬಚಾವೋ’ ಘೋಷಣೆಯು ಕೇವಲ ಜಾಹೀರಾತುಗಳಲ್ಲಿ ಹಾಗೂ ಮನ್ ಕಿ ಬಾತ್‌ನಲ್ಲಿ ಮಾತ್ರವೇ ಉಳಿದುಕೊಂಡಿತು

ಹಸಿವು ಹಾಗೂ ಅಪೌಷ್ಟಿಕತೆಯನ್ನು ನಿರ್ಮೂಲಗೊಳಿಸಲು ದೇಶದಲ್ಲಿ ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದೇ ಇದ್ದುದರಿಂದ ಕೋಟ್ಯಂತರ ಫಲಾನುಭವಿಗಳು ಈ ಯೋಜನೆಯ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇದರ ಜೊತೆಗೆ ಈ ಯೋಜನೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ದೊಡ್ಡ ಸಂಖ್ಯೆ ಫಲಾನುಭವಿಗಳು ಅನ್ಯಾಯಕ್ಕೊಳಗಾಗಿದ್ದಾರೆ. ಕನಿಷ್ಠ ವಿವಿಧ ಹಂತಗಳಲ್ಲಿ ಆಹಾರ ಪೋಲಾಗುವುದನ್ನು ತಡೆಗಟ್ಟಲು ಸಾಧ್ಯವಾದಲ್ಲಿ ದೇಶದಲ್ಲಿ ಯಾರಿಗೂ ಕೂಡಾ ಹಸಿದ ಹೊಟ್ಟೆಯಲ್ಲಿ ಮಲಗುವ ಪರಿಸ್ಥಿತಿ ಬರಲಾರದು. ಅಪೌಷ್ಟಿಕತೆಯ ಸಮಸ್ಯೆಯನ್ನು ಕೇವಲ ಆಹಾರ ಒದಗಿಸುವುದರಿಂದ ಮಾತ್ರವೇ ದೂರವಿಡಲು ಸಾಧ್ಯವಿಲ್ಲ.

ಸಮತೋಲನದ ಹಾಗೂ ಪೌಷ್ಟಿಕ ಪಥ್ಯಾಹಾರವನ್ನು ನೀಡುವುದು ಅಗತ್ಯವಾಗಿದೆ. ದುರದೃಷ್ಟವಶಾತ್ ಭಾರತ ಮಕ್ಕಳು, ಬಾಣಂತಿಯರ ಕುರಿತಂತೆ ತಲೆಕೆಡಿಸಿಕೊಳ್ಳದೆ, ಗೋವುಗಳ ಕುರಿತಂತೆ ಯೋಚಿಸುತ್ತಿದೆ. ಶಿಶುಗಳ ಉಳಿವಿಗೆ ವ್ಯಯವಾಗಬೇಕಾದ ಹಣ ಗೋಶಾಲೆಗಳ ಹೆಸರಲ್ಲಿ ಕಂಡವರ ಪಾಲಾಗುತ್ತಿದೆ. ರೈತರು ತಾವು ಸಾಕಿದ ಜಾನುವಾರುಗಳನ್ನು ಮಾರುವ ಹಕ್ಕುಗಳನ್ನು ಕಳೆದುಕೊಂಡು ಆರ್ಥಿಕವಾಗಿ ನಷ್ಟಕ್ಕೊಳಗಾಗುತ್ತಿದ್ದಾರೆ. ಅನುಪಯುಕ್ತ ಗೋವುಗಳನ್ನು ಆಹಾರಕ್ಕಾಗಿ ಬಳಸಲು ಸಾಧ್ಯವಾಗದೆ ಪೌಷ್ಟಿಕ ಆಹಾರಗಳಿಂದ ಜನರು ವಂಚಿತರಾಗುತ್ತಿದ್ದಾರೆ. ಇದರ ಬೆನ್ನಿಗೇ ಕೊರೋನ, ಲಾಕ್‌ಡೌನ್ ದೇಶದ ಅಪೌಷ್ಟಿಕತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದರ ನೇರ ಪರಿಣಾಮವನ್ನು ಗರ್ಭಿಣಿಯರು ಮತ್ತು ನವಜಾತ ಶಿಶುಗಳು ಎದುರಿಸುತ್ತಿದ್ದಾರೆ. ಚುನಾವಣಾ ರಾಜಕೀಯಕ್ಕಾಗಿ ದೇಶದ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ, ಇನ್ನಾದರೂ, ವಾಸ್ತವಕ್ಕೆ ನಮ್ಮ ನಾಯಕರು ಮುಖಾಮುಖಿಯಾಗಬೇಕಾಗಿದೆ. ಜಾನುವಾರು ಮಾರಾಟದ ಸಂಪೂರ್ಣ ಹಕ್ಕು ರೈತರದ್ದಾಗಬೇಕು. ಅನುಪಯುಕ್ತ ಜಾನುವಾರುಗಳನ್ನು ಆಹಾರವಾಗಿ ಬಳಕೆ ಮಾಡಲು ಇರುವ ಎಲ್ಲ ಅಡ್ಡಿಗಳು ನಿವಾರಣೆಯಾಗಬೇಕು. ಜೊತೆಗೆ ಗೋದಾಮಿನಲ್ಲಿ ವ್ಯರ್ಥವಾಗುತ್ತಿರುವ ಧಾನ್ಯಗಳು ಅರ್ಹರಿಗೆ ಸೇರುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಈ ಮೂಲಕವಷ್ಟೇ ನಾವು ಬಲಾಢ್ಯ, ಆರೋಗ್ಯವಂತ ಭಾರತವನ್ನು ರೂಪಿಸಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News