ದಿಲ್ಲಿ ದಂಗೆಗಳ ಆರೋಪಿಯ ವಿರುದ್ಧದ ನಾಲ್ಕು ಎಫ್ ಐಆರ್ ಗಳನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿಗೆ ಎಪಿಸಿಆರ್ ಸ್ವಾಗತ

Update: 2021-09-06 17:06 GMT

ಹೊಸದಿಲ್ಲಿ,ಸೆ.6: ಒಂದೇ ಅಪರಾಧಕ್ಕಾಗಿ ಹಲವಾರು ಎಫ್ಐಆರ್ಗಳನ್ನು ದಾಖಲಿಸುವಂತಿಲ್ಲ ಮತ್ತು ಹಲವಾರು ತನಿಖೆಗಳನ್ನು ಕೈಗೊಳ್ಳುವಂತಿಲ್ಲ ಎನ್ನುವುದನ್ನು ಬುಧವಾರ ಎತ್ತಿ ಹಿಡಿದ ದಿಲ್ಲಿ ಉಚ್ಚ ನ್ಯಾಯಾಲಯವು ದಿಲ್ಲಿ ದಂಗೆಗಳ ಸಂದರ್ಭದಲ್ಲಿ ಲೂಟಿ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದ ಘಟನೆಗೆ ಸಂಬಂಧಿಸಿದಂತೆ ಆತಿರ್ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಐದು ಎಫ್ಐಆರ್ಗಳ ಪೈಕಿ ನಾಲ್ಕನ್ನು ರದ್ದುಗೊಳಿಸಿದ್ದನ್ನು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸ್ವಾಗತಿಸಿದೆ.

   ‘ಈ ತೀರ್ಪುಗಳ ರೂಪದಲ್ಲಿ ನಮ್ಮ ಪ್ರಯತ್ನಗಳು ಫಲ ನೀಡುತ್ತಿರುವುದು ನಮಗೆ ಹರ್ಷವನ್ನುಂಟು ಮಾಡಿದೆ ಮತ್ತು ಇವು ನಿಷ್ಪಕ್ಷತನ ಮತ್ತು ನ್ಯಾಯದ ತತ್ತ್ವಗಳನ್ನು ಬಲಗೊಳಿಸುತ್ತವೆ. 2006ರಲ್ಲಿ ಸ್ಥಾಪನೆಗೊಂಡಾಗಿನಿಂದಲೂ ಎಪಿಸಿಆರ್ ದುರ್ಬಲರ ಪರ ಕಾನೂನು ಹೋರಾಟದಲ್ಲಿ ತೊಡಗಿಕೊಂಡಿದೆ. ಹಲವಾರು ನ್ಯಾಯಾಲಯಗಳಲ್ಲಿಯ ಪ್ರಕರಣಗಳಲ್ಲಿ ಪರಿಶ್ರಮದಿಂದಾಗಿ ನಾವು ಜನಮಾನಸದಲ್ಲಿ ಗೌರವವನ್ನು ಗಳಿಸಿದ್ದೇವೆ. ಯಾವುದೇ ವ್ಯಕ್ತಿ ನ್ಯಾಯದಿಂದ ವಂಚಿತನಾಗಬಾರದು ಎಂದು ನಾವು ಬಯಸಿದ್ದೇವೆ ’ ಎಂದು ಎಪಿಸಿಆರ್ನ ಪ್ರಧಾನ ಕಾರ್ಯದರ್ಶಿ ಮಲಿಕ್ ಮೊಹ್ತಾಸಿಮ್ ಖಾನ್ ಹೇಳಿದರು.

ದಿಲ್ಲಿ ದಂಗೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರ ಕಳಪೆ ತನಿಖೆಯಿಂದಾಗಿ ಅನಗತ್ಯ ಕಿರುಕುಳವನ್ನು ಅನುಭವಿಸುತ್ತಿದ್ದ ಮತ್ತು ಕಳೆದ ಒಂದೂವರೆ ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದ ಯುವಕರಲ್ಲಿ ಆತಿರ್ ಒಬ್ಬನಾಗಿದ್ದಾನೆ. ಆದರೆ ನ್ಯಾಯಾಲಯದ ತೀರ್ಪು ಒಂದೇ ಅಪರಾಧಕ್ಕಾಗಿ ಹಲವಾರು ಎಫ್ ಐಆರ್ ಗಳಿಂದಾಗಿ ಸುದೀರ್ಘ ಜೈಲುವಾಸವನ್ನು ನಿವಾರಿಸಲು ನೆರವಾಗುತ್ತದೆ ಮತ್ತು ನ್ಯಾಯಾಂಗದ ಅಮೂಲ್ಯ ಸಮಯವನ್ನೂ ಉಳಿಸುತ್ತದೆ ಎಂದರು.

ಎಪಿಸಿಆರ್ ನುರಿತ ವಕೀಲರ ತಂಡವೊಂದರ ಮೂಲಕ ದೀರ್ಘಸಮಯದಿಂದ ಜೈಲುಗಳಲ್ಲಿ ಕೊಳೆಯುತ್ತಿರುವ ಆತಿರ್ ಮತ್ತು ಇತರ ಹಲವಾರು ಜನರಿಗೆ ಉಚಿತ ಕಾನೂನು ನೆರವನ್ನು ಒದಗಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News