ದಿಲ್ಲಿ ಭೇಟಿಯಲ್ಲಿ ಖಾಲಿಯಿರುವ ಸಚಿವ ಸ್ಥಾನಗಳ ಭರ್ತಿ ಬಗ್ಗೆ ಚರ್ಚೆ ಇಲ್ಲ: ಸಿಎಂ ಬೊಮ್ಮಾಯಿ

Update: 2021-09-07 06:07 GMT

ಬೆಂಗಳೂರು, ಸೆ.7: 'ಇಂದಿನ ದಿಲ್ಲಿ ಭೇಟಿಯ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ರಾಜ್ಯ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತಾನಿಂದು ದಿಲ್ಲಿಯಲ್ಲಿ ರಾಜ್ಯದ ವಿವಿಧ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಸಂಬಂಧಿಸಿ ಹಣಕಾಸು, ಲೋಕೋಪಯೋಗಿ  ಸಚಿವರು ಸೇರಿದಂತೆ 3-4 ಸಚಿವರುಗಳನ್ನು ಭೇಟಿಯಾಗಲಿದ್ದೇನೆ. ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ ಎಂದು ತಿಳಿಸಿದ್ದಾರೆ.

 ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮಗಳ ಮದುವೆ ಔತಣ ಕೂಟದಲ್ಲಿ ಭಾಗವಹಿಸುತ್ತಿದ್ದು, ಅಲ್ಲಿ ನಡ್ಡಾ ಸಿಕ್ಕಿದರೆ ಮಾತನಾಡುತ್ತೇನೆ. ಆದರೆ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ  ಎಂದು ಸಿಎಂ ಸ್ಪಷ್ಟಪಡಿಸಿದರು.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವಗಳ ಬಗ್ಗೆ ಚರ್ಚೆ ನಡೆಸಲಿರುವುದಾಗಿ ತಿಳಿಸಿದರು.

  ವಸತಿ ಹಾಗೂ ನಗರಾಭಿವೃದ್ಧಿ ಸಚಿವರನ್ನೂ ಭೇಟಿಯಾಗಲಿದ್ದು, ರಾಜ್ಯದ ವಿವಿಧ ಪ್ರಸ್ತಾವಗಳ ಬಗ್ಗೆ ಚರ್ಚೆ ನಡೆಸಲಿದ್ದೇನೆ.  ಹಣಕಾಸಿನ ಸಚಿವರ ಬಳಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬಿಡುಗಡೆ ಸಲುವಾಗಿ ದಿಲ್ಲಿಗೆ ತೆರಳಲಿರುವುದಾಗಿ ಹೇಳಿದರು.

ವಸತಿ ಮತ್ತು ನಗರಾಭಿವೃದ್ಧಿ ಸಂಬಂಧಿಸಿದಂತೆ ಕೇಂದ್ರ ಸಚಿವರು ಬೆಂಗಳೂರಿಗೆ ಬಂದಾಗ ಹಲವಾರು ಯೋಜನೆಗಳ ಬಗ್ಗೆ ಚರ್ಚೆಯಾಗಿತ್ತು. ನಗರ ವಸತಿ ಹಾಗೂ  ಮೆಟ್ರೋ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ನಿಫಾ ವೈರಾಣು ಕುರಿತು ಸಂಪೂರ್ಣ ಮಾಹಿತಿ ಪಡೆಯಲು ತಜ್ಞರಿಗೆ ಸೂಚಿಸಲಾಗಿದೆ. ಕೇರಳ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಿಗಾ ಇಡಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ  ಗುಂಡಿಗಳನ್ನು ಮುಚ್ಚುವ ಸಂಬಂಧ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News