ಬೆಂಗಳೂರು: ಮೂರು ದಿನಕ್ಕೆ ಗಣೇಶೋತ್ಸವ ಸೀಮಿತ; ಬಿಬಿಎಂಪಿ ಆದೇಶ

Update: 2021-09-07 13:34 GMT

ಬೆಂಗಳೂರು, ಸೆ.7: ಸಂಭಾವ್ಯ ಕೋವಿಡ್ ಮೂರನೆ ಅಲೆ ಭೀತಿ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಮೂರು ದಿನಕ್ಕೆ ಗಣೇಶೋತ್ಸವ ಸೀಮಿತಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದ್ದು, ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಕುರಿತು ಪ್ರಕಟನೆ ಹೊರಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಗರದಲ್ಲಿ ಗರಿಷ್ಠ ಮೂರು ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಲು ಅನುಮತಿಸಲಾಗಿದೆ. ಗಣೇಶ ಮೂರ್ತಿಗಳನ್ನು ತರುವಾಗ, ಪೂಜೆ ಮಾಡುವ ಸಮಯ  ಹಾಗೂ ವಿಸರ್ಜಿಸುವಾಗ ಯಾವುದೇ ಮೆರವಣಿಗೆ ಮಾಡುವಂತಿಲ್ಲ. ಈ ಸಂಬಂಧ ಸ್ಥಳೀಯ ಪೊಲೀಸರು ಕಟ್ಟುನಿಟ್ಟಿನ ನಿಗಾ ಇರಿಸುವಂತೆ ಸೂಚಿಸಿದ್ದಾರೆ.

ಲಸಿಕೆ ಕಡ್ಡಾಯ: ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ, ನೃತ್ಯ, ಡಿಜೆ ಸೆಟ್ ಹಾಗೂ ಇನ್ನಿತರೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ ಎಂದು ಹೇಳಿರುವ ಆಯುಕ್ತರು, ಆಯೋಜಕರು ಕೋವಿಡ್-19ರ ನೆಗೆಟಿವ್ ವರದಿ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿರಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರತಿಷ್ಠಾಪನಾ ಸ್ಥಳದಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು. 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು. ಜತೆಗೆ ಗಣೇಶ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಕೋವಿಡ್ ನಿಯಮಗಳ ಅನುಸರಣೆ ಮಾಡುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಹೋಂ ಗಾರ್ಡ್‍ಗಳನ್ನು ನಿಯೋಜಿಸಬೇಕು ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು. ಒಂದು ವೇಳೆ, ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News