ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯತೆಯಿಂದ ಪ್ರಗತಿ ಸಾಧ್ಯ: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

Update: 2021-09-08 13:51 GMT

ಬೆಂಗಳೂರು, ಸೆ.8: ಯುವಕರ ಸಬಲೀಕರಣಕ್ಕಾಗಿ ಅವರಿಗೆ ಜ್ಞಾನ, ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯತೆಗೆ ಆದ್ಯತೆ ನೀಡುವ ಸಮುದಾಯ ಪ್ರಗತಿಪರ ಹಾಗೂ ಬಲಿಷ್ಠವಾಗಿರುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಬುಧವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಖಾದ್ರಿ ಹಾಗೂ ಹಝ್ರತ್ ಮುಹಿಬ್ ಶಾ ಖಾದ್ರಿ ದರ್ಗಾ ಕಾಂಪ್ಲೆಕ್ಸ್ ಆವರಣದಲ್ಲಿ ಆಡಳಿತ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಸ್ಲಿಮ್ ಸಮುದಾಯವು ಕೌಶಲ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ರಾಜ್ಯ ಸರಕಾರವು ಈ ಸಮುದಾಯದಲ್ಲಿರುವ ಕೌಶಲ್ಯತೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತದೆ. ಕೇವಲ ಮಾತನಾಡಿದರೆ ಏನು ಆಗಲ್ಲ, ಈ ಸಮುದಾಯದ ಶ್ರೇಯೋಭಿವೃದ್ಧಿಗೆ ಬೇಕಾದ ನೆರವು ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ನಾವೆಲ್ಲ ಭಾರತೀಯರು, ಕನ್ನಡಿಗರು. ಎಲ್ಲ ಧರ್ಮದವರು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು, ಉತ್ತಮ ಶಿಕ್ಷಣ ಹಾಗೂ ಕೌಶಲ್ಯತೆಯನ್ನು ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಪಣ ತೊಟ್ಟಿದೆ. ನಾವು ಯಾವ ಧರ್ಮದ ವಿರುದ್ಧವೂ ಇಲ್ಲ. ನೀವು ಉತ್ತಮ ಬದುಕು ಕಟ್ಟಿಕೊಳ್ಳಲು ನಮ್ಮಿಂದ ಎಲ್ಲ ರೀತಿಯ ನೆರವು ನೀಡುತ್ತೇವೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ಪ್ರತಿಯೊಬ್ಬರೂ ಅವರನ್ನು ಗುರುತಿಸುತ್ತಾರೆ. ಬಿ.ಎ.ಮೊಯ್ದಿನ್ ಒಬ್ಬ ಅತ್ಯುತ್ತಮ ಶಿಕ್ಷಣ ಸಚಿವರಾಗಿದ್ದರು. ಆದುದರಿಂದ, ಮುಸ್ಲಿಮ್ ಸಮುದಾಯ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕು. ಮುಸ್ಲಿಮ್ ಯುವಕ, ಯುವತಿಯರಿಗೆ ಯಾವ ರೀತಿಯ ಶಿಕ್ಷಣ, ಅವಕಾಶಗಳು ಕಲ್ಪಿಸಬೇಕೋ ಅಂತಹ ಸೌಲಭ್ಯ ಒದಗಿಸಲು ಸರಕಾರ ಬದ್ಧವಾಗಿದೆ. ಯಾರೊಬ್ಬರೂ ಅವಕಾಶಗಳಿಂದ ವಂಚಿತರಾಗಬಾರದು ಎಂದು ಅವರು ಹೇಳಿದರು.

ನಮ್ಮ ರಾಜ್ಯದಲ್ಲಿ ಎರಡು ರಾಜ್ಯಗಳಿಗೆ ಬೇಕಾಗುವಷ್ಟು ಉದ್ಯೋಗ ಅವಕಾಶಗಳಿವೆ. ಪ್ರತಿ ವರ್ಷ ಸುಮಾರು 15 ಲಕ್ಷ ಉದ್ಯೋಗಗಳು ಲಭ್ಯವಾಗುತ್ತಿವೆ. ಆದರೆ, ಬೆಂಗಳೂರಿನವರು ಮಾತ್ರ ಈ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಮುಂದಾಗುತ್ತಿಲ್ಲ. ಬೇರೆ ಜಿಲ್ಲೆ, ಬೇರೆ ರಾಜ್ಯದವರು ಈ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಉದಯ್ ಬಿ.ಗರುಡಾಚಾರ್ ಮಾತನಾಡಿ, ಕೌಶಲ್ಯತೆ ಮುಸ್ಲಿಮರಲ್ಲಿ ಹೆಚ್ಚಿದೆ. ಅದನ್ನು ಅವರು ಮುಂದುವರೆಸಿಕೊಂಡು ಹೋಗಬೇಕು. ಕೌಶಲ್ಯಾಭಿವೃದ್ಧಿ ಇಲಾಖೆಯೂ ಯುವಕರ ಬೆಳವಣಿಗೆಗೆ ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಈ ಕೌಶಲ್ಯ ತರಬೇತಿ ಕಾರ್ಯಕ್ರಮಗಳು ಬಹಳ ಉಪಯೋಗಕರವಾದದ್ದು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ಮಾತನಾಡಿ, ಹಝ್ರತ್ ಹಮೀದ್ ಶಾ ದರ್ಗಾ ಆಡಳಿತ ಸಮಿತಿಯು ಮಾಡುತ್ತಿರುವ ಕಾರ್ಯಗಳು ಇಡೀ ದೇಶಕ್ಕೆ ಮಾದರಿಯಾದದ್ದು. ಉತ್ತಮ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಾವಿರಾರು ವಕ್ಫ್ ಆಸ್ತಿಗಳಿವೆ. ಆದರೆ, ಅವುಗಳ ಅಭಿವೃದ್ಧಿಗೆ ಮಾತ್ರ ಯಾರೊಬ್ಬರೂ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೆಂಟ್ರಲ್ ಮುಸ್ಲಿಮ್ ಅಸೋಸಿಯೇಷನ್ ಅಧ್ಯಕ್ಷ ಝಿಯಾವುಲ್ಲಾ ಶರೀಫ್ ಮಾತನಾಡಿ, ಹಮೀದ್ ಶಾ ದರ್ಗಾ ಆವರಣದಲ್ಲಿ ಜಾಗದ ವ್ಯವಸ್ಥೆ ಕಲ್ಪಿಸಿದರೆ ಒಂದು ಮಾದರಿ ಉರ್ದು ಹಾಲ್ ನಿರ್ಮಿಸಿಕೊಡುವುದಾಗಿ ಹೇಳಿದರು.

ಸ್ವಾಗತ ಭಾಷಣ ಮಾಡಿದ ಹಝ್ರತ್ ಹಮೀದ್ ಶಾ ದರ್ಗಾ ಆಡಳಿತ ಸಮಿತಿ ಅಧ್ಯಕ್ಷ ಜಿ.ಎ.ಬಾವಾ, ದರ್ಗಾ ಆವರಣದಲ್ಲಿರುವ ಐಟಿಐಗೆ ಮಾನ್ಯತೆ ಸಿಕ್ಕಿದೆ. ಇದನ್ನು ರಾಜ್ಯ ಸರಕಾರದ ಅನುದಾನಕ್ಕೆ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಆರ್. ಶಿವಕುಮಾರ್, ಎನ್‍ಆರ್‍ಐ ಫೋರಂ ಕರ್ನಾಟಕದ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಮೌಲಾನ ಮಕ್ಸೂದ್ ಇಮ್ರಾನ್, ಬೆಂಗಳೂರು ಜಿಲ್ಲಾ ವಕ್ಫ್ ಅಧಿಕಾರಿ ರಝಿಯಾ ಸುಲ್ತಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News