ನಮ್ಮ ವರದಿಯು ಶೇ.100ರಷ್ಟು ರೈತರ ಪರವಾಗಿದೆ: ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯ ಸದಸ್ಯ

Update: 2021-09-08 15:57 GMT

ಹೊಸದಿಲ್ಲಿ,ಸೆ.8: ರೈತರ ಪ್ರತಿಭಟನೆ ವಿಷಯ ಶೀಘ್ರ ಬಗೆಹರಿಯುವ ಆಶಯವನ್ನು ಬುಧವಾರ ವ್ಯಕ್ತಪಡಿಸಿದ ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿದ್ದ ಸಮಿತಿಯ ಪ್ರಮುಖ ಸದಸ್ಯರಾಗಿರುವ ಶೇತ್ಕರಿ ಸಂಘಟನೆಯ ಅಧ್ಯಕ್ಷ ಎ.ಜೆ.ಘನವಟ ಅವರು,ಸಮಿತಿಯು ಸಲ್ಲಿಸಿರುವ ವರದಿಯು ಶೇ.100ರಷ್ಟು ರೈತರ ಪರವಾಗಿದೆ ಮತ್ತು ಸುಪ್ರೀಂ ಕೋರ್ಟ್ ಈ ವಿಷಯವನ್ನು ವಿಳಂಬವಿಲ್ಲದೆ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

 
ವರದಿಯ ಬಿಡುಗಡೆಯಿಂದಾಗಿ ಉದ್ಭವಿಸಬಹುದಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯ ಪರಿಗಣಿಸಬೇಕಿರುವುದರಿಂದ ವರದಿ ಬಿಡುಗಡೆ ಮಾಡಲು ಕಾಲಾವಕಾಶ ಅಗತ್ಯವಾಗಬಹುದು ಎಂದು ಒಪ್ಪಿಕೊಂಡ ಅವರು,ಆದರೆ ಅವರು ವರದಿಯನ್ನು ಮೂಲೆಗುಂಪು ಮಾಡುವಂತಿಲ್ಲ ಮತ್ತು ಅದನ್ನು ಮೂಲೆಗುಂಪು ಮಾಡಲೂಬಾರದು ಎಂದರು.
 
ವರದಿಯನ್ನು ಬಹಿರಂಗಗೊಳಿಸುವಂತೆ ಆಗ್ರಹಿಸಿ ಸೆ.1ರಂದು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿರುವ ಘನವಟ,ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಪ್ರತಿಭಟನಾನಿರತ ರೈತರ ಬೇಡಿಕೆಯನ್ನು ಸಮಿತಿಯು ಬೆಂಬಲಿಸುವುದಿಲ್ಲ,ಆದರೆ ಕಾಯ್ದೆಗಳಲ್ಲಿ ಹಲವಾರು ದೋಷಗಳಿವೆ ಎನ್ನುವುದು ತನ್ನ ಮತ್ತು ಸಂಘಟನೆಯ ಖಚಿತ ಅಭಿಪ್ರಾಯವಾಗಿದ್ದು,ಇವುಗಳನ್ನು ನಿವಾರಿಸುವ ಅಗತ್ಯವಿದೆ. ಹೀಗಾಗಿ ರೈತರಲ್ಲಿ ಮನೆಮಾಡಿರುವ ಭೀತಿಯನ್ನು ತೊಲಗಿಸಲು ಸರ್ವೋಚ್ಚ ನ್ಯಾಯಾಲಯವು ಶೀಘ್ರವೇ ವರದಿಯನ್ನು ಬಹಿರಂಗಗೊಳಿಸುವುದು ತುಂಬ ಮುಖ್ಯವಾಗಿದೆ. 

ವರದಿಯು ಬಿಡುಗಡೆಗೊಂಡರೆ ಜನರಿಗೆ ಅದರಲ್ಲಿಯ ವಿಷಯ ಗೊತ್ತಾಗುತ್ತದೆ ಮತ್ತು ಹೊಸ ಕೃಷಿ ಕಾಯ್ದೆಗಳು ರೈತರ ಪರವಾಗಿವೆಯೇ ಅಥವಾ ಇಲ್ಲವೇ ಎನ್ನುವುದನ್ನು ಅವರು ನಿರ್ಧರಿಸುತ್ತಾರೆ ಎಂದು ಹೇಳಿದರು. ಸಮಿತಿಯು ಐದು ತಿಂಗಳ ಹಿಂದೆಯೇ ತನ್ನ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ತಿಳಿಸಿದ ಘನವಟ, ವರದಿಯಲ್ಲಿನ ಶಿಫಾರಸುಗಳು ರೈತರ ಪ್ರತಿಭಟನೆಗೆ ಅಂತ್ಯ ಹಾಡಲು ನೆರವಾಗುತ್ತವೆ ಎಂಬ ವಿಶ್ವಾಸವನ್ನು ಸಮಿತಿಯು ಹೊಂದಿದೆ ಎಂದರು.

ಸರ್ವೋಚ್ಚ ನ್ಯಾಯಾಲಯವು 2021,ಜನವರಿ 12ರಂದು ಮೂರು ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಅಮಾನತುಗೊಳಿಸಿದ ಸಂದರ್ಭದಲ್ಲಿ ಈ ಸಮಿತಿಯನ್ನು ರಚಿಸಿತ್ತು ಮತ್ತು ರೈತ ಸಮುದಾಯದ ಪ್ರತಿನಿಧಿಯಾಗಿ ಘನವಟ ಅವರನ್ನು ನಾಮಕರಣಗೊಳಿಸಲಾಗಿತ್ತು. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ ಗುಲಾಟಿ ಮತ್ತು ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಮೋದ್ ಕುಮಾರ್ ಜೋಶಿ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ.

ರೈತರು ಎತ್ತಿರುವ ವಿಷಯಗಳನ್ನು ಬಗೆಹರಿಸದಿರುವುದು ಮತ್ತು ಪ್ರತಿಭಟನೆಯು ಮುಂದುವರಿದಿರುವುದು ಸಮಿತಿಯ ಸದಸ್ಯನಾಗಿ, ವಿಶೇಷವಾಗಿ ರೈತ ಸಮುದಾಯದ ಪ್ರತಿನಿಧಿಯಾಗಿ ತನಗೆ ನೋವನ್ನುಂಟು ಮಾಡಿದೆ. ಸರ್ವೋಚ್ಚ ನ್ಯಾಯಾಲಯವು ವರದಿಗೆ ಯಾವುದೇ ಗಮನ ನೀಡಿಲ್ಲವೆಂದು ತಾನು ಭಾವಿಸಿದ್ದೇನೆ ಎಂದು ಘನವಟ ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಸುದ್ದಿಸಂಸ್ಥೆಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಪತ್ರದಲ್ಲಿ ತಾನು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸಮಿತಿಯ ಇತರ ಸದಸ್ಯರೂ ಬೆಂಬಲಿಸಿದ್ದಾರೆ. ಆದರೆ ಲಿಖಿತ ರೂಪದಲ್ಲಿ ಹೇಳಲು ಅವರು ಸಿದ್ಧರಿಲ್ಲ. ತಾನು ವಿಷಯವನ್ನು ಪ್ರಸ್ತಾಪಿಸಿರುವುದು ಅವರಿಗೆ ಖುಷಿ ನೀಡಿದೆ ಎಂದರು.

ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಕೈಬಿಡಲಾಗುತ್ತದೆ ಎನ್ನುವುದು ರೈತರ ಮುಖ್ಯ ಕಳವಳವಾಗಿದೆ,ಆದರೆ ಅದು ನಿಜವಲ್ಲ. ನೂತನ ಕೃಷಿ ಕಾಯ್ದೆಗಳು ಎಂಎಸ್ಪಿಯನ್ನು ಪ್ರಸ್ತಾಪಿಸಿಲ್ಲ ಎಂದು ಘನವಟ ಹೇಳಿದರು. ಹೊಸ ಕೃಷಿ ಕಾಯ್ದೆಗಳನ್ನು ಹಂತಹಂತವಾಗಿ ಜಾರಿಗೊಳಿಸುವ ಸಾಧ್ಯತೆಯ ಕುರಿತ ಪ್ರಶ್ನೆಗೆ ಅವರು,ಏಕಾಗಬಾರದು,ಹಾಗೆ ಮಾಡಬಹುದು ಎಂದು ಉತ್ತರಿಸಿದರು. ಆದರೆ ಸಮಿತಿಯ ಶಿಫಾರಸುಗಳಲ್ಲಿ ಇದು ಸೇರಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಬಂಧಿತ ಸಚಿವರಿಗೂ ಇಂತಹುದೇ ಪತ್ರವನ್ನು ಬರೆಯಲಿದ್ದೀರಾ ಎಂಬ ಪ್ರಶ್ನೆಗೆ ಅವರು,‘ಇಲ್ಲ. ನಮಗೆ ಆದೇಶ ನೀಡಿದ್ದು ಸರ್ವೋಚ್ಚ ನ್ಯಾಯಾಲಯ ಮತ್ತು ನಾವು ಅದರೊಂದಿಗೆ ಮಾತ್ರ ವ್ಯವಹರಿಸುತೇವೆ ’ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News