ಶಾಲೆಗೆ ತೆರಳಬೇಕಾದ ಮಕ್ಕಳನ್ನು ಜೀತಕ್ಕೆ ಹಚ್ಚುತ್ತಿದೆಯೇ ಸರಕಾರ?

Update: 2021-09-09 04:34 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಆಹಾರ ಮತ್ತು ಆರೋಗ್ಯದಷ್ಟೇ ಗಂಭೀರ ವಿಷಯವಾಗಿ ಶಿಕ್ಷಣವನ್ನೂ ಸರಕಾರ ಪರಿಗಣಿಸಬೇಕಾಗಿದೆ. ಆಹಾರ, ಆರೋಗ್ಯ, ಉದ್ಯೋಗಗಳಿಗಾಗಿ ಕೇಳಿ ಬರುತ್ತಿರುವ ಹಾಹಾಕಾರ ಶಿಕ್ಷಣಕ್ಕಾಗಿ ಕೇಳಿ ಬರುತ್ತಿಲ್ಲ ಎನ್ನುವ ಕಾರಣದಿಂದಲೋ ಏನೋ, ದೇಶಾದ್ಯಂತ ಶಾಲೆ ಆರಂಭದ ಬಗ್ಗೆ ಸರಕಾರ ಇನ್ನೂ ಗಾಢ ನಿರ್ಲಕ್ಷವನ್ನು ಹೊಂದಿದೆ. ಆದರೆ ಬರೇ ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಬಡ ಕುಟುಂಬಗಳೂ ತಮ್ಮ ಮಕ್ಕಳ ಭವಿಷ್ಯದ ಕುರಿತಂತೆ ತೀವ್ರ ಆತಂಕದಲ್ಲಿವೆ ಎನ್ನುವ ಅಂಶ ಈಗಾಗಲೇ ಸಮೀಕ್ಷೆಗಳಿಂದ ಹೊರ ಬಂದಿದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬಗಳು ಕೊರೋನಕ್ಕಾಗಿ ಹೆದರುತ್ತಿಲ್ಲ. ಶಾಲೆ ಆರಂಭವಾದರೆ ಸಾಕು ಎನ್ನುವಂತಹ ತಹತಹಿಕೆಯಲಿವೆ. ಆದರೆ ಸರಕಾರ ಈ ದೇಶದ ಶೇಕಡಾ ಎರಡರಷ್ಟಿರುವ ಶ್ರೀಮಂತ ಕುಟುಂಬಗಳ ಆತಂಕಗಳಿಗಷ್ಟೇ ಕಿವಿಯಾಗುತ್ತಿದೆ. ಈ ಕುಟುಂಬಗಳು ಶಾಲೆ ಮುಚ್ಚಿದರೂ ತಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣವನ್ನು ನೀಡುವ ಶಕ್ತಿ ಇರುವಂತಹವುಗಳು. ಆದರೆ ಬಡ ಕುಟುಂಬಗಳು ಶಾಲೆಯೊಂದಿಗೆ ಬೇರೆ ಬೇರೆ ರೀತಿಯ ಅವಿನಾಭಾವ ಸಂಬಂಧಗಳನ್ನು ಹೊಂದಿವೆ.

ಶಾಲೆಯ ಬಾಗಿಲು ಮುಚ್ಚಿಯೇ ಇದ್ದರೆ ಮಕ್ಕಳ ಶಿಕ್ಷಣ ಮಾತ್ರವಲ್ಲ, ಇನ್ನಿತರ ಸೌಲಭ್ಯಗಳಿಂದಲೂ ಅವರು ವಂಚಿತರಾಗಬೇಕಾಗುತ್ತದೆ. ಆದುದರಿಂದಲೇ ಗ್ರಾಮೀಣ ಪ್ರದೇಶದ ಬಡಮಕ್ಕಳ ಶೇ. 97ರಷ್ಟು ಪೋಷಕರು ಶಾಲೆ ಮರು ಆರಂಭಕ್ಕೆ ಒತ್ತಾಯಿಸುತ್ತಿದ್ದಾರೆ. ಈ ದೇಶ ಸಂಪೂರ್ಣ ಸಾಕ್ಷರತೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಈಗಾಗಲೇ ವ್ಯಯ ಮಾಡಿದೆ. ಸಂಪೂರ್ಣ ಸಾಕ್ಷರತೆಯಲ್ಲಿ ಯಶಸ್ವಿಯಾಗದೇ ಇದ್ದರೂ, ಇಂದು ಭಾರತ ಈ ಪ್ರಮಾಣದಲ್ಲಾದರೂ ಸಾಕ್ಷರರನ್ನು ಹೊಂದಿದ್ದರೆ ಅದಕ್ಕೆ ಆಂದೋಲನದ ಕೊಡುಗೆಗಳಿವೆ. ಹಾಗೆಯೇ ಭಾರತದ ಯೋಜನೆಗಳು ತಳಸ್ತರದ ವರೆಗೆ ತಲುಪುವಲ್ಲಿ ಸಾಕ್ಷರತೆಯ ಪಾತ್ರವೂ ಇದೆ. ದೇಶ ಹಂತಹಂತವಾಗಿ ಸಂಪೂರ್ಣ ಸಾಕ್ಷರವಾಗುತ್ತಾ ಹೋದಂತೆಯೇ ಸರಕಾರದ ಯೋಜನೆಗಳು ಜನರನ್ನು ಹೆಚ್ಚು ಹೆಚ್ಚು ತಲುಪತೊಡಗಿದವು. ಮುಖ್ಯವಾಗಿ ಕೆಲವೇ ಕೆಲವು ಶಕ್ತಿಗಳು ಸರಕಾರದ ಸವಲತ್ತುಗಳ ಫಲಾನುಭವಿಗಳಾಗಿದ್ದಾಗ, ಅವರಿಂದ ಅವುಗಳನ್ನು ಕಿತ್ತು ಬಡವರಿಗೆ ಹಂಚಿದ್ದು ಶಿಕ್ಷಣ. ಗ್ರಾಮೀಣ ಪ್ರದೇಶಗಳು ಶಾಲೆಗಳ ಜೊತೆಗೆ ಸಂಪರ್ಕ ಸಾಧಿಸಿದಂತೆಯೇ, ಕೆಳಜಾತಿಯ ಜನರು, ಬಡವರು ದೇಶದ ಮುಖ್ಯವಾಹಿನಿಗೆ ಸೇರಿಕೊಂಡರು. ಗ್ರಾಮೀಣ ಪ್ರದೇಶಕ್ಕೆ ದೇಶವನ್ನು ತೆರೆದುಕೊಟ್ಟದ್ದು ಶಾಲೆಗಳೇ ಆಗಿವೆ.

ಶಾಲೆಗಳ ಮೂಲಕ ಗ್ರಾಮೀಣ ಪ್ರದೇಶದ ಬಡವರ ಮಕ್ಕಳು ಶಿಕ್ಷಣ ಮಾತ್ರ ಪಡೆಯಲಿಲ್ಲ, ಸರಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವುದಕ್ಕೂ ಈ ಶಾಲೆಗಳನ್ನು ಬಳಸಲಾಯಿತು. ಮಧ್ಯಾಹ್ನದ ಊಟ, ಆರೋಗ್ಯದ ಕುರಿತ ಜಾಗೃತಿ, ವಿವಿಧ ಸವಲತ್ತುಗಳ ಮಾಹಿತಿಗಳು ಹೀಗೆ ಶಾಲೆಗಳು ಬಡ ಕುಟುಂಬಗಳಿಗೆ ಕೊಟ್ಟ ಕೊಡುಗೆ ಬಹುದೊಡ್ಡದು. ಇಂದು ಶಾಲೆಗಳು ಮುಚ್ಚಿದ ಪರಿಣಾಮವಾಗಿ, ಬಡವರ ಪಾಲಿಗೆ ಹತ್ತು ಹಲವು ರೀತಿಯಲ್ಲಿ ತೊಂದರೆಯಾಗಿವೆ. ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಸರಕಾರ ಈವರೆಗೆ ಚೆಲ್ಲಿದ ಹಣವೆಲ್ಲವೂ ಲಾಕ್‌ಡೌನ್‌ನಿಂದಾಗಿ ವ್ಯರ್ಥವಾಗಲಿದೆ. ಲಾಕ್‌ಡೌನ್‌ನಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ನಿರುದ್ಯೋಗ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿ ವ್ಯರ್ಥವಾಗಿ ಕಾಲ ಕಳೆಯಲು ಯಾವ ಪೋಷಕರು ಅವಕಾಶ ನೀಡುತ್ತಾರೆ? ಹೆಚ್ಚಿನ ಪಾಲಕರು ಮಕ್ಕಳನ್ನು ಈಗಾಗಲೇ ದುಡಿಮೆಗೆ ಹಚ್ಚಿದ್ದಾರೆ.

ಸಾಲ ಸೋಲದ ಪರಿಣಾಮವಾಗಿ ನೂರಾರು ಮಕ್ಕಳು ಮತ್ತೆ ಜಮೀನ್ದಾರರ ಕೊಟ್ಟಿಗೆಯ ಜೀತಕ್ಕೆ ಬಲಿಯಾಗಿದ್ದಾರೆ ಎನ್ನುವ ಅಂಶಗಳೂ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿವೆ. 'ಬಾಲ ಕಾರ್ಮಿಕ ವ್ಯವಸ್ಥೆ' ನಿವಾರಣೆಗಾಗಿ ಸರಕಾರ ವ್ಯಯಿಸಿದ ಹಣವೂ ಈ ಮೂಲಕ ವ್ಯರ್ಥವಾದಂತಾಗಿದೆ. ನಗರದಲ್ಲಿ ಹೊಟೇಲ್ ಮೊದಲಾದೆಡೆ ಕೆಲಸ ಮಾಡುವ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು 'ದುಡಿಮೆಯಿಂದ ಬಿಡುಗಡೆ' ಮಾಡುವ ಸರಕಾರ, ಇದೀಗ ತಾನೇ ಮುಂದೆ ನಿಂತು ಮಕ್ಕಳನ್ನು ಧಣಿಗಳ ತೋಟದ ಜೀತಕ್ಕೆ ಹಚ್ಚಿದಂತಾಗಿದೆ. ಲಾಕ್‌ಡೌನ್‌ನ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಅದೆಷ್ಟು ಭೀಕರವಾಗಿದೆಯೆಂದರೆ ಈ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು ಅಷ್ಟು ಸುಲಭವಿಲ್ಲ. ಅದಕ್ಕಾಗಿ ಹೊಸದಾಗಿಯೇ ಆಂದೋಲನವೊಂದನ್ನು ರೂಪಿಸಬೇಕಾಗದ ಅಗತ್ಯವಿದೆ. ಶಾಲೆ ಆರಂಭ ನಿಧಾನವಾದಷ್ಟು ಮಕ್ಕಳು ಇಂತಹ ಬಾಲ ದುಡಿಮೆಗೆ ಹೆಚ್ಚು ಹೆಚ್ಚು ಅಂಟುತ್ತಾ ಹೋಗುತ್ತಾರೆ. ಕೊನೆಗೆ ಶಾಲೆಗೆ ಸೇರುವುದು ಅವರ ಪಾಲಿಗೆ ತೀರಾ ಕಷ್ಟವಾಗಬಹುದು.

ಆದರೆ ಗ್ರಾಮೀಣ ಪ್ರದೇಶದ ಜನರಿಗೆ ಈಗ ಶಿಕ್ಷಣದ ಮಹತ್ವ ಅರಿವಾಗಿದೆ. ತಮ್ಮ ಮಕ್ಕಳು ಶಿಕ್ಷಣ ಕಲಿತರೆ ಮಾತ್ರ ಸಮಾಜದಲ್ಲಿ ಯೋಗ್ಯ ಜೀವನವನ್ನು ನಡೆಸಲು ಸಾಧ್ಯ ಎನ್ನುವುದನ್ನು ದಲಿತರಾದಿಯಾಗಿ ದೊಡ್ಡ ಸಂಖ್ಯೆಯ ಬಡ ಕುಟುಂಬಗಳು ಈಗಾಗಲೇ ಅರಿತುಕೊಂಡಿವೆ. ಆದುದರಿಂದಲೇ, ಸಾಲ ಸೋಲ ಮಾಡಿಯಾದರೂ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಸರಕಾರಿ ಶಾಲೆಗಳಿಲ್ಲದೇ ಇರುವಲ್ಲಿ, ಖಾಸಗಿ ಶಾಲೆಗೂ ಕಳುಹಿಸುತ್ತಿದ್ದಾರೆ. ಆದರೆ ಇಂದು ಸರಕಾರವೇ ಈ ಬಡವರ ಮಕ್ಕಳು ಶಾಲೆಗೆ ಹೋಗುವುದನ್ನು ತಡೆಯುತ್ತಿದೆೆ. 'ಆನ್ ಲೈನ್ ತರಗತಿ'ಯ ಕುರಿತಂತೆ ಸರಕಾರ ಮಾತನಾಡುತ್ತಿದೆಯಾದರೂ, ದೇಶದ ಗ್ರಾಮೀಣ ಪ್ರದೇಶದಲ್ಲಿ ಆನ್‌ಲೈನ್ ಮೂಲಕ ಕೇವಲ ಶೇ. 8ರಷ್ಟು ವಿದ್ಯಾರ್ಥಿಗಳಷ್ಟೇ ಕಲಿಯುತ್ತಿದ್ದಾರೆ ಎನ್ನುವುದು ಈಗಾಗಲೇ ಸಮೀಕ್ಷೆಯ ಮೂಲಕ ಬಹಿರಂಗವಾಗಿದೆ. ಹೆಚ್ಚಿನ ಬಡವರಿಗೆ ಸ್ಮಾರ್ಟ್‌ಫೋನ್ ಕೊಂಡು ಕೊಳ್ಳುವ ಶಕ್ತಿಯೇ ಇಲ್ಲ. ಒಂದು ಫೋನ್ ಇದ್ದರೂ, ಮೂರು ಅಥವಾ ನಾಲ್ಕು ಮಕ್ಕಳಿದ್ದರೆ ಅವರೆಲ್ಲರೂ ಆ ಫೋನ್ ಬಳಸಿ ಕಲಿಯುವುದು ಕಷ್ಟ ಎನ್ನುವ ಪರಿಸ್ಥಿತಿಯಿದೆ.

ಗ್ರಾಮೀಣ ಪ್ರದೇಶದಲ್ಲಿ ಶೇ. 51 ಮನೆಗಳಲ್ಲಿ ಸ್ಮಾರ್ಟ್‌ಫೋನ್‌ಗಳಿವೆ. ಇದೇ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿ ಶೇ. 77 ಮನೆಗಳಲ್ಲಿ ಸ್ಮಾರ್ಟ್ ಫೋನ್‌ಗಳಿವೆ. ಆದರೆ ಶೇ. 24ರಷ್ಟು ಮಕ್ಕಳು ಮಾತ್ರ ದಿನನಿತ್ಯ ಆನ್‌ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ ಎಂದು ಅಧ್ಯಯನ ತಿಳಿಸುತ್ತದೆ. ಇಷ್ಟಕ್ಕೂ ಆನ್‌ಲೈನ್ ಕಲಿಕೆಯ ಗುಣಮಟ್ಟ ತೀರಾ ಕಳಪೆ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈಗಾಗಲೇ ಒಟ್ಟಾರೆ ನಮ್ಮ ಶಿಕ್ಷಣ ಪದ್ಧತಿ ಕೇವಲ ಅಂಕಕ್ಕೆ ಸೀಮಿತವಾಗಿದೆ ಎಂಬ ಟೀಕೆಗಳಿವೆ. ಇದರ ಬೆನ್ನಿಗೇ ಆನ್‌ಲೈನ್ ಶಿಕ್ಷಣ, ಅದನ್ನು ಇನ್ನಷ್ಟು ಕೆಡಿಸಿದೆ. ಮಕ್ಕಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗುತ್ತಾರಾದರೂ, ಹೆಚ್ಚಿನ ಬಡವರ್ಗದ ಮಕ್ಕಳ ಓದುವ ಕೌಶಲ ಸಂಪೂರ್ಣ ಕುಂಠಿತಗೊಂಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಶಾಲೆಗಳು ಕಾಟಾಚಾರಕ್ಕಾಗಿಯಷ್ಟೇ ಆನ್‌ಲೈನ್ ತರಗತಿಗಳನ್ನು ತೆರೆದಿವೆ. ಮಕ್ಕಳ ಹಾಜರಾತಿ ಸಿಕ್ಕಿದರೆ ಸಾಕು, ಕಲಿಯದೇ ಇದ್ದರೂ ಪರವಾಗಿಲ್ಲ ಎಂಬ ಮನೋಭಾವ ಶಿಕ್ಷಕರಲ್ಲೂ ಇದೆ. ಯಾಕೆಂದರೆ ಶಿಕ್ಷಕರೂ ಲಾಕ್‌ಡೌನ್‌ನ ಸಂತ್ರಸ್ತರೇ ಆಗಿದ್ದಾರೆ. ತಮ್ಮ ಕೆಲಸ ಉಳಿದರೆ ಸಾಕು, ತಮ್ಮ ವೇತನ ದೊರಕಿದರೆ ಸಾಕು ಎಂಬ ಸ್ಥಿತಿ ಅವರದ್ದೂ ಆಗಿರುವಾಗ, ಅವರೇಕೆ ಮಕ್ಕಳ ಭವಿಷ್ಯದ ಕುರಿತಂತೆ ಗಂಭೀರವಾಗಿ ತಲೆಕೆಡಿಸಿಕೊಳ್ಳುತ್ತಾರೆ?.

ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ರಾಜ್ಯಗಳು ಅಕ್ಕಿ, ಬೇಳೆಯಂತಹ ಅಗತ್ಯ ಆಹಾರಗಳನ್ನು ಬಡವರಿಗೆ ಪೂರೈಸಿವೆ. ಆದರೆ ಶಿಕ್ಷಣದ ಕುರಿತಂತೆ ಯಾವುದೇ ರಾಜ್ಯಗಳೂ ಗಂಭೀರವಾಗಿ ಯೋಚಿಸಿಲ್ಲ. ಕಳೆದೆರಡು ವರ್ಷಗಳ ಸರಣಿ ಲಾಕ್‌ಡೌನ್ ಪರಿಣಾಮದಿಂದ ಶಿಕ್ಷಣ ವಂಚಿತರಾಗಿರುವ ಬಡವರ್ಗವನ್ನು ಮೇಲೆತ್ತಲು ಸರಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದರಲ್ಲಿ ಬಹುಮುಖ್ಯವಾದ ನಡೆಯೆಂದರೆ, ಎಲ್ಲ ಶಾಲೆಗಳನ್ನು ಮರು ಆರಂಭ ಮಾಡುವುದು. ಜೊತೆಗೆ, ಎಲ್ಲ ವಿದ್ಯಾರ್ಥಿಗಳ ಆರೋಗ್ಯದ ಹೊಣೆಯನ್ನು ಮುಂದಿನ ಎರಡು ವರ್ಷಗಳ ಕಾಲ ಸಂಪೂರ್ಣ ಸರಕಾರವೇ ವಹಿಸಿಕೊಳ್ಳಬೇಕು. ಮಕ್ಕಳ ಶಾಲಾ ಶುಲ್ಕದ ದೊಡ್ಡ ಭಾಗವನ್ನು ಸರಕಾರವೇ ಭರಿಸಬೇಕು. ಹಾಗೆಯೇ, ಮರಳಿ ಶಾಲೆಗೆ ಆಂದೋಲನಕ್ಕೆ ಮರು ಜೀವ ನೀಡಿ, ಶಾಲೆಯಿಂದ ಸಂಪೂರ್ಣ ದೂರವಾದವರನ್ನು ಮತ್ತೆ ಶಾಲೆಗೆ ಸೇರಿಸುವ ಕೆಲಸವನ್ನು ಭರದಿಂದ ಆರಂಭಿಸಬೇಕು. ಕೊರೋನ ವೈರಸ್‌ಗಿಂತಲೂ ಅಪಾಯಕಾರಿ, ಅನಕ್ಷರತೆ. ಅದನ್ನು ಮತ್ತೆ ಈ ದೇಶದ ತಾನಾಗಿಯೇ ಆಹ್ವಾನಿಸುವಂತಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News