ಕಲಬುರಗಿಯಲ್ಲಿ ಬಿಜೆಪಿ ಮೇಯರ್‌: ಸಿಎಂ ಬೊಮ್ಮಾಯಿ ವಿಶ್ವಾಸ

Update: 2021-09-09 07:10 GMT

ಬೆಂಗಳೂರು, ಸೆ.9: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಬಗ್ಗೆ ಆರಂಭಿಕ ಹಂತದ ಚರ್ಚೆ ನಡೆದಿದೆ ಅಷ್ಟೆ. ಆದರೆ, ಬಿಜೆಪಿ ಮೇಯರ್ ಗದ್ದುಗೆಯನ್ನು ಏರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್‌.ಟಿ. ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಮೇಯರ್ ಸ್ಥಾನ ಯಾರೇ ನೀಡಿದರೂ ಅವರನ್ನು ಬೆಂಬಲಿಸುವುದಾಗಿ ಜೆಡಿಎಸ್ ಹೇಳಿದ್ದು, ಈ ಬಗ್ಗೆ ಬಿಜೆಪಿ ನಿಲುವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ದಿಲ್ಲಿ ಪ್ರವಾಸ ಫಲಪ್ರದ

ತನ್ನ ಎರಡು ದಿನಗಳ ದಿಲ್ಲಿ ಪ್ರವಾಸ ಬಹಳ ಫಲಪ್ರದವಾಗಿದೆ. ರಾಜ್ಯದಲ್ಲಿ ಬಾಕಿ ಇರುವ ಹಲವು ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವ ವಿಚಾರವಾಗಿ ಕೇಂದ್ರ ಸರಕಾರ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

‘ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಸ್ಯಾಟಿಲೈಟ್‌ ಟೌನ್‌ ರಿಂಗ್‌ ರೋಡ್‌ (ಎಸ್‌ಟಿಆರ್‌ಆರ್, ದಾಬಸ್‌ ಪೇಟೆಯಿಂದ ಮೈಸೂರು ರಸ್ತೆವರೆಗೆ) 2–3 ವರ್ಷಗಳಿಂದ ನನೆಗುದಿಯಲ್ಲಿತ್ತು. ಅದನ್ನು ಮುಂದುವರಿಸಲಿದ್ದು, 5–6 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ. ಅದೇರೀತಿ  ಉತ್ತರ ಕರ್ನಾಟಕ ಭಾಗದಲ್ಲಿ, ವಿಜಯಪುರ–ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೂ ಒಪ್ಪಿದ್ದು, ಡಿಪಿಆರ್‌ ಆಗಿದೆ. ಅಲ್ಲದೆ, ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ಭಾರತ್ ರಸ್ತೆ ಮಾಲಾದಲ್ಲಿ ಎರಡನೇ ಹಂತದಲ್ಲಿ ತೆಗೆದುಕೊಳ್ಳಲು ಕೂಡಾ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ  ಎಂದರು.

ಸಚಿವ ರಾಜೀವ್‌ ಚಂದ್ರಶೇಖರ್‌ ಜೊತೆ ಗ್ರಾಮೀಣ ಕನೆಕ್ಟಿವಿಟಿಗೆ ವಿಶೇಷ ಕಾರ್ಯಕ್ರಮ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ತಂಡ ಚರ್ಚೆ ಮಾಡಿ ಮುಂದುವರಿಯಲು ತೀರ್ಮಾನಿಸಲಾಗಿದೆ ಎಂದರು.

‘ಬೆಂಗಳೂರು–ಕೋಲಾರ ಮಧ್ಯೆ ಹಾರ್ಡ್‌ ವೇರ್ ಪಾರ್ಕ್‌ ಮಾಡಲು ತೀರ್ಮಾನ ಆಗಿದೆ. ಸ್ಕಿಲ್‌ ವಿಶ್ವವಿದ್ಯಾಲಯ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಅದನ್ನೂ ಪರಿಶೀಲಿಸುತ್ತೇವೆ ಎಂದಿದ್ದೇವೆ. ಸಚಿವ ಹರದೀಪ್‌ ಸಿಂಗ್‌ ಪುರಿ ಅವರು ಪಿಎಂಎಎವೈ ನಗರ ಆವಾಸ್‌ ಯೋಜನೆಗೆ 400 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇನ್ನು 1,500 ಕೋಟಿ ರೂ. ಬಿಡುಗಡೆ ಮಾಡಬೇಕು. ನಮ್ಮ ಕೆಲವು ಪ್ರಕ್ರಿಯೆಗಳು ಬಾಕಿ ಇದ್ದು ಅದನ್ನು ಪೂರ್ಣಗೊಳಿಸಿದ ಬಳಿಕ ಬಾಕಿ ಹಣ ಬಿಡುಗಡೆ ಮಾಡಲಿದ್ದಾರೆ  ಎಂದೂ ಮುಖ್ಯಮಂತ್ರಿ ವಿವರಿಸಿದರು.

ಶಿರಾಡಿ ಘಾಟ್‌ ಚತುಷ್ಪಥ ರಸ್ತೆ ಕಾಮಗಾರಿಯನ್ನು ಶೀಘ್ರ ಮುಗಿಸಲು ಕೂಡಾ ತೀರ್ಮಾನ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ, ನಡ್ಡಾ ಜೊತೆ ಹೆಚ್ಚು ಸಮಯ ಚರ್ಚೆ ಮಾಡಲು ಆಗಿಲ್ಲ. ಆದರೂ ಪಕ್ಷ ಸಂಘಟನೆ, ಮುಂಬರುವ ಚುನಾವಣೆಗೆ ಸಿದ್ಧತೆ ಬಗ್ಗೆ ಅವರು ಹೇಳಿದ್ದಾರೆ. ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News