ಉತ್ತರ ಪ್ರದೇಶದಲ್ಲಿ ಎರಡು ವರ್ಷ ಹಿಂದೆ ನಿರ್ಮಾಣಗೊಂಡ ಸೇತುವೆ ಇನ್ನೂ ಬಳಕೆಯಾಗಿಲ್ಲ; ಅದಕ್ಕೆ ಸಂಪರ್ಕ ರಸ್ತೆಯೇ ಇಲ್ಲ

Update: 2021-09-09 10:38 GMT
Photo: Jagran

ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್‍ನಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ಆಧುನಿಕ ಸೇತುವೆಯೊಂದು ಹರ್ಯಾಣ, ಉತ್ತರಾಖಂಡ ಮತ್ತು ಪಂಜಾಬ್- ಹೀಗೆ ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ ಈ ಸೇತುವೆ ಇನ್ನೂ ಉಪಯೋಗವಾಗುತ್ತಿಲ್ಲ. ಕಾರಣ ಈ ಸೇತುವೆಗೊಂದು ಸಂಪರ್ಕ ರಸ್ತೆಯೇ ಇಲ್ಲ.

ಗಂಗಾ ನದಿಗೆ ಅಡ್ಡಲಾಗಿ ಈ ಸೇತುವೆಯು ಬಾಲವಲಿ ಸಮೀಪ ನಿರ್ಮಾಣಗೊಂಡಿತ್ತು. ಭೂವಿವಾದಗಳು ಹಾಗೂ  ಹಣಕಾಸಿನ ಕೊರತೆಯಿಂದಾಗಿ ಸಂಪರ್ಕ ರಸ್ತೆ ನಿರ್ಮಾಣಗೊಳ್ಳದೇ ಇದ್ದುದರಿಂದ ಸೇತುವೆ ಬಳಕೆಯಾಗಿಲ್ಲ.

ಈ ಸೇತುವೆಗೆ 2015ರಲ್ಲಿಯೇ ಮಂಜೂರಾತಿ ದೊರಕಿತ್ತು ಹಾಗೂ ಮುಂದಿನ ವರ್ಷ ಅದರ ನಿರ್ಮಾಣಕ್ಕೆ ಬಜೆಟಿನಲ್ಲಿ ರೂ. 40 ಕೋಟಿ ಮೀಸಲಿರಿಸಲಾಗಿತ್ತು. ಹತ್ತಿರದ ಸ್ಥಳಗಳು ಹಾಗೂ ರಾಜ್ಯಗಳನ್ನು ತಲುಪುವ ಸಮಯವನ್ನು ಕಡಿಮೆಗೊಳಿಸುವ ಉದ್ದೇಶ ಈ ಸೇತುವೆ ನಿರ್ಮಾಣದ ಹಿಂದಿತ್ತು. ಉದಾಹರಣೆಗೆ ಹರಿದ್ವಾರಕ್ಕೆ ಈ ಸೇತುವೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ 119 ಹಾಗೂ 74 ಮೂಲಕ ಕ್ರಮಿಸುವ ಅಗತ್ಯವಿಲ್ಲದೆ ಮುಝಫ್ಫರನಗರ ತಲುಪಬಹುದಾಗಿತ್ತು.

ಈ ಸೇತುವೆಗೆ ಸಂಪರ್ಕ ರಸ್ತೆಗೆಂದು ಗುರುತಿಸಲಾಗಿದ್ದು 200 ಮೀಟರ್ ಹಾದಿಯೊಂದು ಸರಕಾರಿ ಜಮೀನೆಂದು ತಪ್ಪಾಗಿ ಗುರುತಿಸಲಾಗಿತ್ತು. ವಾಸ್ತವವಾಗಿ ಈ ಜಮೀನು ರೈತರೊಬ್ಬರಿಗೆ ಸೇರಿತ್ತಲ್ಲದೆ ಆತ ಸಂಪರ್ಕ ರಸ್ತೆಗೆ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಈ ವಿವಾದ ಇತ್ಯರ್ಥಪಡಿಸಲಾಗಿದೆಯಾದರೂ ಸಂಪರ್ಕ ರಸ್ತೆ ಸೇರಿದಂತೆ ಯೋಜನಾ ವೆಚ್ಚ ರೂ. 55 ಕೋಟಿಗೆ ಏರಿಕೆಯಾಗಿದೆ. ಪರಿಷ್ಕೃತ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು ಅನುದಾನ ಬಿಡುಗಡೆಗೊಂಡ ಕೂಡಲೇ ಸಂಪರ್ಕ ರಸ್ತೆ ನಿರ್ಮಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News