ಅನುದಾನ ಬಿಡುಗಡೆ: ರಾಜ್ಯಕ್ಕೆ ಅನ್ಯಾಯ

Update: 2021-09-10 05:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ವಕ್ಕರಿಸಿದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ರಾಜ್ಯ ಸರಕಾರದ ವರಮಾನದ ಮೂಲಗಳಿಂದ ನಿರೀಕ್ಷಿತ ಸಂಪನ್ಮೂಲ ಲಭ್ಯವಾಗುತ್ತಿಲ್ಲ. ತೆರಿಗೆ ಮೂಲಗಳಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ವರಮಾನ ಸಂಗ್ರಹ ವಾಗುತ್ತಿಲ್ಲ. ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರಕಾರ ಪರದಾಡುತ್ತಿದೆ. ಅಭಿವೃದ್ಧಿ ಯೋಜನೆಗಳು ಕುಂಠಿತಗೊಂಡಿವೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಣಗಾಡಬೇಕಾಗಿದೆ. ವೃದ್ಧಾಪ್ಯ ವೇತನ, ಪಿಂಚಣಿ ಹಣವನ್ನೂ ಒದಗಿಸಲು ಕಷ್ಟವಾಗುತ್ತಿದೆ. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಕೇಂದ್ರ ಸರಕಾರ ನೆರವಿಗೆ ಬರಬೇಕು. ಅಂದರೆ, ರಾಜ್ಯಕ್ಕೆ ದಾನದ ರೂಪದಲ್ಲಿ ಹಣ ನೀಡಬೇಕೆಂದಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರ, ಹಣಕಾಸು ಆಯೋಗದ ಅನುದಾನಗಳನ್ನು ಸಕಾಲದಲ್ಲಿ ಸರಿಯಾಗಿ ನೀಡಿದರೆ ರಾಜ್ಯದ ಆರ್ಥಿಕ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರೆತಂತಾಗುತ್ತದೆ.

ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ, ತೋಟಗಾರಿಕೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇತ್ಯಾದಿ ವಲಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳಿಗೆ ಕೂಡ 2021-22ನೇ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಒಂದೇ ಒಂದು ಪೈಸೆ ಕೂಡ ಬಿಡುಗಡೆಯಾಗಿಲ್ಲ ಅಂದರೆ ಏನು ಅರ್ಥ? ಇದು ಯಾರೋ ಪ್ರತಿಪಕ್ಷ ನಾಯಕರು ಮಾಡಿರುವ ಟೀಕೆಯಲ್ಲ.ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಸಭೆಯ ಮುಂದಿಟ್ಟಿರುವ ಅಂಕಿ-ಅಂಶಗಳಿಂದ ಬಯಲಿಗೆ ಬಂದಿದೆ.

ಪ್ರಧಾನ ಮಂತ್ರಿಗಳ ಆವಾಸ್ ಯೋಜನೆ, ಆಹಾರ ಭದ್ರತಾ ಅಭಿಯಾನ, ಗ್ರಾಮ ಸಡಕ್ ಸೇರಿದಂತೆ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ರೂಪಿಸಲಾದ ಯೋಜನೆಗಳಿಗೂ ಕೇಂದ್ರ ಸರಕಾರ ಅನುದಾನ ನೀಡಿಲ್ಲ. ಹೀಗಾಗಿ ಈ ಯೋಜನೆಗಳ ಜಾರಿಯಲ್ಲಿ ವಿಳಂಬವಾಗಿದೆ. 3,890.59 ಕೋಟಿ ರೂ. ಮೊತ್ತದ ಹತ್ತು ಪ್ರಮುಖ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಸರಕಾರ ರೂ. 2,410.81 ಕೋಟಿ ಮೊತ್ತವನ್ನು ಬಾಕಿ ನೀಡಬೇಕಾಗಿದೆ. ಈ ಯೋಜನೆಗಳಿಗೆ ರಾಜ್ಯ ಸರಕಾರವು 1,489.78 ಕೋಟಿ ರೂ. ಹೊಂದಾಣಿಕೆ ಅನುದಾನವನ್ನು ನೀಡಬೇಕಿದೆ. ಕೇಂದ್ರದ ಅನುದಾನ ಬಂದಿಲ್ಲ. ರಾಜ್ಯದ ಹೊಂದಾಣಿಕೆ ಅನುದಾನವೂ ನಿಂತು ಹೋಗಿದೆ. ಹೀಗಾಗಿ ಈ ಯೋಜನೆಗಳು ಕಾರ್ಯಗತವಾಗಿಲ್ಲ. ಕೇಂದ್ರದ ಈ ವರ್ತನೆ ಖಂಡನೀಯವಾಗಿದೆ. ಬೇರೆ ಪಕ್ಷದ ಮುಖ್ಯಮಂತ್ರಿಯಾಗಿದ್ದರೆ ಪ್ರತಿಭಟನೆಯ ಧ್ವನಿಯನ್ನಾದರೂ ಎತ್ತುತ್ತಿದ್ದರು. ಈಗ ತಮ್ಮದೇ ಪಕ್ಷದ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾರದಷ್ಟು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕರಾಗಿದ್ದಾರೆ.

 ರಾಜ್ಯ ಸರಕಾರಕ್ಕೆ ಸಂಬಂಧಿಸಿದ 22 ಇಲಾಖೆಗಳಲ್ಲಿ ಕೇಂದ್ರ ಸರಕಾರದ 89 ಯೋಜನೆಗಳು ಅನುಷ್ಠಾನದಲ್ಲಿವೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರ ಪ್ರಸಕ್ತ ವರ್ಷ 17,643 ಕೋಟಿ ರೂ. ಅನುದಾನವನ್ನು ನೀಡಬೇಕಾಗಿದೆ. ಪದೇ ಪದೇ ಮನವಿ ಮಾಡಿಕೊಂಡ ಆನಂತರ ಕೆಲ ಯೋಜನೆಗಳಿಗೆ ಕೇಂದ್ರ ಸರಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ ಇನ್ನೂ ಹಲವಾರು ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಬಂದಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ನಿರ್ಮಾಣ, ಬಯಲು ಬಹಿರ್ದೆಸೆ ಕೊನೆಗೊಳಿಸುವುದು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಟ್ಟಡಗಳ ನಿರ್ವಹಣೆ, ಹೊಸ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಶಿಷ್ಯ ವೇತನ ಯೋಜನೆಗಳಿಗೆ ಹೊಸ ಆರ್ಥಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳಾದರೂ ಅನುದಾನ ಬಿಡುಗಡೆಯಾಗದಿರುವುದು ಕೇಂದ್ರ ಸರಕಾರದ ಅಸಡ್ಡೆಯ ಧೋರಣೆಗೆ ಉದಾಹರಣೆಯಾಗಿದೆ.

 ಇದಷ್ಟೇ ಅಲ್ಲ, ಕೃಷಿ ಮತ್ತು ವಸತಿ ಯೋಜನೆಗಳಿಗೂ ಹಣ ಬಿಡುಗಡೆಯಾಗಿಲ್ಲ. ಜನಕಲ್ಯಾಣ ಯೋಜನೆಗಳಿಗೆ ಆರಂಭಿಕ ಹಂತದ ಅನುದಾನ ಬಿಡುಗಡೆಯಾಗದಿದ್ದರೆ ವರ್ಷಾಂತ್ಯದಲ್ಲಿ ಪೂರ್ಣ ಪ್ರಮಾಣದ ಗುರಿಯನ್ನು ಸಾಧಿಸಲು ಆಗುವುದಿಲ್ಲ. ರಾಜ್ಯದ ಹಿತಾಸಕ್ತಿಯ ಇಂತಹ ಪ್ರಶ್ನೆಯಲ್ಲಿ ರಾಜ್ಯ ಸರಕಾರದ ಮೌನ ಸರಿಯಲ್ಲ. ಮಾತ್ರವಲ್ಲ ನಮ್ಮ ಅನೇಕ ಮಂತ್ರಿಗಳು ವಾಸ್ತವ ಸಂಗತಿಯನ್ನು ಮುಚ್ಚಿಡುವುದೂ ಸರಿಯಲ್ಲ. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು. ಕೇಂದ್ರದಲ್ಲಿ ತಮ್ಮ ಪಕ್ಷದ ಸರಕಾರವಿದೆಯೆಂದು ರಾಜ್ಯಕ್ಕೆ ಅನ್ಯಾಯ ಮಾಡುವ ತಪ್ಪನ್ನು ರಾಜ್ಯ ಸರಕಾರ ಮತ್ತು ಸಂಸದರು ಮಾಡಬಾರದು.

ದಿಲ್ಲಿಯಲ್ಲಿ ಕರ್ನಾಟಕದ ಲಾಬಿ ಪ್ರಭಾವಿಯಾಗಿಲ್ಲ. ತಮಿಳುನಾಡು, ಕೇರಳ ಸೇರಿದಂತೆ ಇತರ ರಾಜ್ಯಗಳ ಸಂಸದರು ತಮ್ಮ ರಾಜ್ಯದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಭೇದ ಮರೆತು ಒಗ್ಗೂಡಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ತಮ್ಮ ರಾಜ್ಯಕ್ಕೆ ಬರಬೇಕಾದ ಅನುದಾನ ಇತ್ಯಾದಿಗಳಲ್ಲಿ ಅನ್ಯಾಯವಾಗದಂತೆ ಎಚ್ಚರ ವಹಿಸುತ್ತಾರೆ.ಆದರೆ ಕರ್ನಾಟಕದ ಸಂಸದರಲ್ಲಿ ಅಂತಹ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಅನುದಾನ ಮಾತ್ರವಲ್ಲ ಕಾವೇರಿ ನದಿ ನೀರು ಹಂಚಿಕೆ ವಿವಾದದ ಪ್ರಶ್ನೆಯಲ್ಲಿ, ಮಹಾದಾಯಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ತಾರತಮ್ಯದ ನೀತಿ ಅನುಸರಿಸುತ್ತಲೇ ಬಂದಿದೆ. ರಾಜ್ಯದ ಪರವಾಗಿ ಧ್ವನಿಯೆತ್ತಿದರೆ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿ ಕೋಪಿಸಿಕೊಳ್ಳುತ್ತಾರೋ ಎಂದು ರಾಜ್ಯದ ಸಂಸದರು ವಿಶೇಷವಾಗಿ ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯವಾದರೂ ತೆಪ್ಪಗಿರುತ್ತಾರೆ.

ಉಳಿದುದೇನೇ ಇರಲಿ ಜನ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ವಿಳಂಬವಾಗದಂತೆ ಬರಬೇಕು, ಬರುವಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಮತ್ತು ಸಂಸದರ ಕರ್ತವ್ಯವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News