ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಅಪಘಾತ ಪ್ರಕರಣ: ಮೃತಪಟ್ಟ ಇಬ್ಬರು ತಮಿಳುನಾಡು ಮೂಲದ ಟೆಕ್ಕಿಗಳು

Update: 2021-09-15 04:40 GMT

ಆನೇಕಲ್, ಸೆ.15: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಮಂಗಳವಾರ ರಾತ್ರಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ತಮಿಳುನಾಡು ಮೂಲದ ಟೆಕ್ಕಿಗಳೆಂದು ಗುರುತಿಸಲಾಗಿದೆ.

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ನಿವಾಸಿಗಳಾದ ಪ್ರೀತಮ್ (30) ಹಾಗೂ ಕೃತಿಕಾ(28) ಮೃತಪಟ್ಟವರು. ಸ್ನೇಹಿತರಾಗಿದ್ದ ಇವರಿಬ್ಬರು ಕಳೆದ ರಾತ್ರಿ 9:20ರ ಸುಮಾರಿಗೆ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ತಲುಪಿದಾಗ ಪೆಟ್ರೋಲ್ ಖಾಲಿಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಫ್ಲೈಓವರ್ ನ ಪಾರ್ಕಿಂಗ್ ಸ್ಥಳದಲ್ಲಿ ಬೈಕನ್ನು ನಿಲ್ಲಿಸಲು ಮುಂದಾಗುತ್ತಿದ್ದಂತೆ ಅತೀವೇಗದಲ್ಲಿ ಬಂದ ಕಾರೊಂದು ಇವರಿಬ್ಬರಿಗೂ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕಿನಲ್ಲಿದ್ದ ಪ್ರೀತಮ್ ಮತ್ತು ಯುವತಿ ಫ್ಲೈ ಓವರ್ ನಿಂದ ಕೆಳಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಾರನ್ನು ಆನೇಕಲ್ ತಿರುಪಾಳ್ಯದ  ನಿವಾಸಿ ನಿತೇಶ್ (23) ಎಂಬವರು ಚಲಾಯಿಸುತ್ತಿದ್ದರೆನ್ನಲಾಗಿದೆ. ಅವರಿಗೂ  ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಅತೀ ವೇಗ ಹಾಗೂ ನಿರ್ಲಕ್ಷ್ಯದ ಕಾರು ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಆರೋಪಿ ಕಾರು ಚಾಲಕ  ನಿತೇಶ್ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News