2020ರಲ್ಲಿ ಅಸ್ಸಾಮಿನಲ್ಲಿ ಮಹಿಳೆಯರ ವಿರುದ್ಧ ಅತ್ಯಧಿಕ ಅಪರಾಧ ದರ, ಎಸ್ ಸಿಗಳ ವಿರುದ್ಧ ದೌರ್ಜನ್ಯದಲ್ಲಿ ಮ.ಪ್ರ.ಮುಂದೆ

Update: 2021-09-15 17:28 GMT

ಹೊಸದಿಲ್ಲಿ,ಸೆ.15: ದೇಶದಲ್ಲಿ ಮಹಿಳೆಯರ ವಿರುದ್ಧ ಅತ್ಯಧಿಕ ಅಪರಾಧ ದರವನ್ನು ಅಸ್ಸಾಂ ದಾಖಲಿಸಿದೆ ಎಂದು ಬುಧವಾರ ಬಿಡುಗಡೆಗೊಂಡ ರಾಷ್ಟ್ರೀಯ ಅಪರಾಧ ದಾಖಲೆ ಘಟಕ (ಎನ್ ಸಿ ಆರ್ ಬಿ)ದ ‘ಭಾರತದಲ್ಲಿ ಅಪರಾಧ 2020’ ವರದಿಯು ಹೇಳಿದೆ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ದಾಖಲಾಗಿರುವ ಅಪರಾಧಗಳ ಸಂಖ್ಯೆಗೆ ಅನುಗುಣವಾಗಿ ಅಪರಾಧ ದರವನ್ನು ನಿರ್ಧರಿಸಲಾಗುತ್ತದೆ.


ದೇಶದಲ್ಲಿ 2019ರಲ್ಲಿ 4,05,326ರಷ್ಟಿದ್ದ ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆ ಕಳೆದ ವರ್ಷ 3,71,503ಕ್ಕೆ ಇಳಿದಿದೆ.
ದಾಖಲಾಗಿರುವ ಪ್ರಕರಣಗಳಲ್ಲಿ ಹೆಚ್ಚಿನವು (ಶೇ.30) ಪತಿ ಅಥವಾ ಆತನ ಬಂಧುಗಳಿಂದ ಕ್ರೌರ್ಯಕ್ಕೆ ಸಂಬಂಧಿಸಿದ್ದರೆ, ಶೇ.23ರಷ್ಟು ಮಹಿಳೆಯ ಗೌರವಕ್ಕೆ ಚ್ಯುತಿಯನ್ನುಂಟು ಮಾಡುವ ಉದ್ದೇಶದಿಂದ ಹಲ್ಲೆಗೆ ಮತ್ತು ಶೇ.7.5ರಷ್ಟು ಪ್ರಕರಣಗಳು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿವೆ.
    
ಒಟ್ಟಾರೆಯಾಗಿ ದೇಶದಲ್ಲಿ ಐಪಿಸಿಯ ವಿವಿಧ ಕಲಮ್ಗಳು,ವಿಶೇಷ ಮತ್ತು ಸ್ಥಳೀಯ ಕಾನೂನುಗಳಡಿ 66,01,285 ಪ್ರಕರಣಗಳು ದಾಖಲಾಗಿದ್ದು,2019ಕ್ಕೆ (51,56,158) ಹೋಲಿಸಿದರೆ ಶೇ.28ರಷ್ಟು ಏರಿಕೆಯನ್ನು ಕಂಡಿದೆ ಎಂದು ವರದಿಯು ತಿಳಿಸಿದೆ.


ಉ.ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಅತ್ಯಂತ ಹೆಚ್ಚು ಅಪರಾಧ ಪ್ರಕರಣಗಳು ದಾಖಲು 


  ಅಸ್ಸಾಂ ಮಹಿಳೆಯರ ವಿರುದ್ಧ ಅತ್ಯಂತ ಹೆಚ್ಚಿನ ಅಪರಾಧ ದರವನ್ನು ದಾಖಲಿಸಿರುವುದು ಇದು ಸತತ ನಾಲ್ಕನೇ ವರ್ಷವಾಗಿದೆ. 2020ರಲ್ಲಿ ಅಸ್ಸಾಮಿನಲ್ಲಿ ಈ ದರ 154.3ರಷ್ಟಿದ್ದರೆ,ನಂತರದ ಸ್ಥಾನಗಳಲ್ಲಿ ಒಡಿಶಾ(112.9) ಮತ್ತು ತೆಲಂಗಾಣ (95.4) ಇವೆ.


ಸಂಖ್ಯೆಗಳ ಲೆಕ್ಕದಲ್ಲಿ ಹೇಳುವುದಾದರೆ ಉ.ಪ್ರದೇಶವು 2019ರಂತೆ 2020ರಲ್ಲಿಯೂ ಮಹಿಳೆಯರ ವಿರುದ್ಧ ಅತ್ಯಂತ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿದೆ. ಆದಾಗ್ಯೂ 2019ರಲ್ಲಿ 59,853ರಷ್ಟಿದ್ದ ಇಂತಹ ಪ್ರಕರಣಗಳ ಸಂಖ್ಯೆ 2020ರಲ್ಲಿ 49,385ಕ್ಕೆ ಇಳಿದಿದೆ.

ದೊಡ್ಡ ರಾಜ್ಯಗಳ ಪೈಕಿ ಮಹಿಳೆಯರ ವಿರುದ್ಧ ಅಪರಾಧಗಳ ಕನಿಷ್ಠ ದರ (17.4)ವನ್ನು ತಮಿಳುನಾಡು ದಾಖಲಿಸಿದೆ.


ಎಸ್ ಸಿ ಮತ್ತು ಎಸ್ಟಿಗಳ ವಿರುದ್ಧ ಅಪರಾಧಗಳು


2020ರಲ್ಲಿ ಉ.ಪ್ರದೇಶದಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ (12,714) ಅಪರಾಧ ಪ್ರಕರಣಗಳು ದಾಖಲಾಗಿದ್ದರೂ, ದರದ ಲೆಕ್ಕದಲ್ಲಿ ಅದು ಎಲ್ಲ ರಾಜ್ಯಗಳಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಎಸ್ಸಿಗಳ ಪ್ರತಿ ಒಂದು ಲಕ್ಷ ಜನಸಂಖ್ಯೆಯ ವಿರುದ್ಧ 30.7 ಅಪರಾಧಗಳು ದಾಖಲಾಗಿವೆ.


ಮಧ್ಯಪ್ರದೇಶವು ಗರಿಷ್ಠ ದರ (60.8)ವನ್ನು ದಾಖಲಿಸಿದ್ದರೆ, ರಾಜಸ್ಥಾನ(57.4) ಮತ್ತು ಬಿಹಾರ (44.5) ನಂತರದ ಸ್ಥಾನಗಳಲ್ಲಿವೆ. 2019ರಲ್ಲಿ 45,961ರಷ್ಟಿದ್ದ ಎಸ್ಸಿಗಳ ವಿರುದ್ಧದ ಅಪರಾಧಗಳ ಒಟ್ಟು ಸಂಖ್ಯೆಯು 2020ರಲ್ಲಿ 50,291ಕ್ಕೆ ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ.
ಪರಿಶಿಷ್ಟ ಪಂಗಡಗಳ ವಿರುದ್ಧ ಅಪರಾಧಗಳಲ್ಲಿ ಕೇರಳ ಗರಿಷ್ಠ ದರ (26.8)ವನ್ನು ದಾಖಲಿಸಿದ್ದರೆ,ರಾಜಸ್ಥಾನ(20.3) ಮತ್ತು ತೆಲಂಗಾಣ (17.4) ನಂತರದ ಸ್ಥಾನಗಳಲ್ಲಿವೆ.


ಮಕ್ಕಳ ವಿರುದ್ಧ ಅಪರಾಧಗಳು


2019ರಲ್ಲಿ 1,48,090 ರಷ್ಟಿದ್ದ ಮಕ್ಕಳ ವಿರುದ್ಧ ಅಪರಾಧಗಳ ಒಟ್ಟು ಸಂಖ್ಯೆಯು 2020ರಲ್ಲಿ 1,28,531ಕ್ಕೆ ಇಳಿದಿದೆ. ಇವುಗಳಲ್ಲಿ ಶೇ.55.3ರಷ್ಟು ಅಪಹರಣಕ್ಕೆ ಮತ್ತು ಶೇ.32.4ರಷ್ಟು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ.
ಸಣ್ಣ ರಾಜ್ಯಗಳ ಪೈಕಿ ಸಿಕ್ಕಿಂ ರಾಜ್ಯ ಮಕ್ಕಳ ವಿರುದ್ಧ ಅಪರಾಧಗಳ ಗರಿಷ್ಠ ದರ (71.4)ವನ್ನು ದಾಖಲಿಸಿದೆ,ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಇಂತಹ ಅಪರಾಧಗಳ ಪ್ರಮಾಣ ತುಂಬ ಸಣ್ಣದಾಗಿದೆ. ದೊಡ್ಡ ರಾಜ್ಯಗಳ ಪೈಕಿ ಮಧ್ಯಪ್ರದೇಶ(59.1) ಮೊದಲ ಸ್ಥಾನದಲ್ಲಿದ್ದರೆ ಛತ್ತೀಸ್ಗಡ (51.9) ನಂತರದ ಸ್ಥಾನದಲ್ಲಿದೆ.


ಬಾಲಾಪರಾಧಿಗಳ ವಿರುದ್ಧ ಒಟ್ಟು 5,974 ಪ್ರಕರಣಗಳು ದಾಖಲಾಗಿದ್ದು,2019ಕ್ಕೆ ಹೋಲಿಸಿದರೆ ಶೇ.13.2ರಷ್ಟು ಇಳಿಕೆಯಾಗಿದೆ.


ದೇಶದ್ರೋಹ ಮತ್ತು ಯುಎಪಿಎ


ದೊಡ್ಡ ರಾಜ್ಯಗಳ ಪೈಕಿ ಅತ್ಯಂತ ಹೆಚ್ಚಿನ ದೇದ್ರೋಹ ಪ್ರಕರಣಗಳು ಉ.ಪ್ರದೇಶದಲ್ಲಿ ದಾಖಲಾಗಿವೆ. ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಪ್ರಕರಣಗಳಲ್ಲಿ ಜಾರ್ಖಂಡ್ ಅಗ್ರಸ್ಥಾನದಲ್ಲಿದ್ದು,ಉ.ಪ್ರದೇಶ ನಂತರದ ಸ್ಥಾನದಲ್ಲಿದೆ.


ಒಟ್ಟಾರೆಯಾಗಿ ಅತ್ಯಂತ ಹೆಚ್ಚಿನ ದೇಶದ್ರೋಹ ಮತ್ತು ಯುಎಪಿಎ ಪ್ರಕರಣಗಳು ಮಣಿಪುರದಲ್ಲಿ ದಾಖಲಾಗಿವೆ. ಮಹಾನಗರಗಳು 109.9 ಅಪರಾಧ ದರದೊಂದಿಗೆ ಕೋಲ್ಕತಾ ದೇಶದ ಅತ್ಯಂತ ಸುರಕ್ಷಿತ ನಗರವಾಗಿ ಹೊರಹೊಮ್ಮಿದ್ದರೆ,ದಿಲ್ಲಿ ಅತ್ಯಂತ ಹೆಚ್ಚಿನ ಅಪರಾಧ ದರ(1506.9)ವನ್ನು ಹೊಂದಿದೆ.ಚೆನ್ನೈ (1016.4) ನಂತರದ ಸ್ಥಾನದಲ್ಲಿದೆ.


20 ಲ.ಕ್ಕೂ ಅಧಿಕ ಜನಸಂಖ್ಯೆಯ 19 ಮಹಾನಗರಗಳಲ್ಲಿ ಒಟ್ಟು 9,24,016 ಅಪರಾಧಗಳು ದಾಖಲಾಗಿದ್ದು,2019ಕ್ಕೆ ಹೋಲಿಸಿದರೆ ಶೇ.7.6ರಷ್ಟು ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News