ಈಜಿಪ್ಟ್: ಭೂಮಿ ಮೇಲೆಯೂ ಜೀವಿಸಬಲ್ಲ ತಿಮಿಂಗಿಲದ ಅವಶೇಷ ಪತ್ತೆ

Update: 2021-09-15 17:51 GMT
photo: twitter.com/AJEnglish

 ಕೈರೊ, ಸೆ.15: 43 ಮಿಲಿಯನ್ ವರ್ಷದ ಹಿಂದೆ ಜೀವಿಸುತ್ತಿದ್ದ, ಭೂಮಿ ಮತ್ತು ಸಮುದ್ರ ಎರಡರಲ್ಲೂ ಜೀವಿಸಬಲ್ಲ ಪ್ರಾಚೀನಯುಗದ 4 ಕಾಲಿನ ತಿಮಿಂಗಿಲದ ಅವಶೇಷವನ್ನು ಪಶ್ಚಿಮ ಮರುಭೂಮಿಯಲ್ಲಿ 10 ವರ್ಷದ ಹಿಂದೆ ಪತ್ತೆಹಚ್ಚಲಾಗಿದೆ ಎಂದು ಈಜಿಪ್ಟ್ ನ ವಿಜ್ಞಾನಿಗಳು ಹೇಳಿದ್ದಾರೆ.

 ಭೂಮಿ ಮತ್ತು ಸಮುದ್ರವೆರಡರಲ್ಲೂ ಜೀವಿಸುತ್ತಿದ್ದ ಈ ಬೃಹತ್ ಜೀವಿ ಅರೆಜಲವಾಸಿ ನಿಪುಣ ಭೇಟೆಗಾರನಾಗಿತ್ತು ಎಂದು ಖ್ಯಾತ ಜೀವಿಶಾಸ್ತ್ರಜ್ಞ , ವಿಜ್ಞಾನಿಗಳ ತಂಡದ ಮುಖ್ಯಸ್ಥ ಹೆಶಾಮ್ ಸಲಾಮ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಪ್ರಾಚೀನ ಯುಗದಲ್ಲಿ ಸಮುದ್ರದ ಭಾಗವಾಗಿದ್ದ, ಈಗ ಮರುಭೂಮಿಯಾಗಿರುವ ಪ್ರದೇಶದಲ್ಲಿ 2008ರಲ್ಲಿ ಪರಿಸರ ಕಾರ್ಯಕರ್ತರಿಗೆ ಈ ಅವಶೇಷ ಕಂಡುಬಂದಿತ್ತು. ಅತ್ಯುತ್ತಮ, ತಜ್ಞ ವಿಜ್ಞಾನಿಗಳ ತಂಡವನ್ನು ರಚಿಸಿ 2017ರಲ್ಲಿ ವಿಸ್ತತ ಅಧ್ಯಯನ ಆರಂಭಿಸಿದ್ದು ಇದೊಂದು ಅಪರೂಪದ ತಳಿ ಎಂದು ದೃಢಪಟ್ಟ ಬಳಿಕ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ. ಈ ಅವಶೇಷಕ್ಕೆ ಪ್ರಾಚೀನ ಈಜಿಪ್ಟ್ ನ ‘ಸಾವಿನ ದೇವತೆ’ಯ ನೆನಪಿಗೆ ಫಿಯೊಮಿಸೆಟಸ್ ಅನೂಬಿಸ್ ಎಂದು ಹೆಸರಿಸಲಾಗಿದೆ.

ಈ ತಿಮಿಂಗಿಲ ಬಲವಾಗಿ ಕಚ್ಚಿದರೆ ಸಾವು ಖಚಿತವಾಗಿತ್ತು. ತನ್ನ ಬಲಿಷ್ಟ ಹಲ್ಲುಗಳಿಂದ ಇದು ಬೇಟೆಯಾಡುತ್ತಿತ್ತು. ಪ್ರೊಟೆಸೆಟಿಡಿಸ್ ಎಂಬ ವಿಶಿಷ್ಟ ಅರೆಜಲವಾಸಿ ಪ್ರಭೇದಕ್ಕೆ ಸೇರಿದ್ದ ಈ ತಿಮಿಂಗಿಲ ನೆಲದ ಮೇಲೆಯೂ ನಡೆಯುತ್ತಿತ್ತು. ಆದರೆ ನೀರಿನಲ್ಲಿ ಹೆಚ್ಚಾಗಿ ಬೇಟೆಯಾಡುತ್ತಿತ್ತು ಎಂದವರು ಹೇಳಿದ್ದಾರೆ. ತಿಮಿಂಗಿಲ ಕಣಿವೆ ಎಂದೇ ಹೆಸರಾಗಿರುವ ಈಜಿಪ್ಟ್ ನ ಪಶ್ಚಿಮದ ಮರುಭೂಮಿ ಪ್ರಸಿದ್ಧ ಪ್ರವಾಸೀ ತಾಣವಾಗಿದೆ.

ವಿಶ್ವದಲ್ಲಿ ಕಂಡು ಬಂದ ಅತ್ಯಂತ ಪುರಾತನ ತಿಮಿಂಗಿಲವೆಂದರೆ ಸುಮಾರು 50 ಮಿಲಿಯನ್ ವರ್ಷದ ಹಿಂದೆ , ಈಗಿರುವ ಭಾರತ-ಪಾಕ್ ಪ್ರದೇಶದಲ್ಲಿ ಜೀವಿಸಿದ್ದ ತಿಮಿಂಗಿಲಗಳಾಗಿವೆ. ಆದರೆ ಇವು ಈ ಪ್ರದೇಶದಿಂದ ಮುಂದೆ ಸಾಗಿ ವಿಶ್ವದೆಲ್ಲೆಡೆಯ ಸಮುದ್ರ ಸೇರಿಕೊಂಡ ರೀತಿ ಮತ್ತು ಅವಧಿಯ ಬಗ್ಗೆ ಇನ್ನೂ ಸಂಶೋಧಕರು ಪೂರ್ಣ ಬೆಳಕು ಚೆಲ್ಲಲು ಸಾಧ್ಯವಾಗಿಲ್ಲ. ಈಗ ಈಜಿಪ್ಟ್ ನಲ್ಲಿ ಪತ್ತೆಯಾಗಿರುವ ತಿಮಿಂಗಿಲದ ನೂತನ ಪ್ರಭೇದವು ಭಾರತ-ಪಾಕ್ ಪ್ರದೇಶ ಮತ್ತು ಉತ್ತರ ಅಮೆರಿಕನ್ ವಲಯದ ನಡುವಿದ್ದ ಸಂಪರ್ಕಕೊಂಡಿಯ ಕುರಿತ ಕುರುಹು ಆಗಿರುವ ಸಾಧ್ಯತೆಯಿದೆ ಎಂದು ನ್ಯೂಯಾರ್ಕ್ ಐಐಟಿಯ ಪ್ರೊಫೆಸರ್ ಜೊನಾಥನ್ ಗೆಸ್ಲರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News