ಕೊರೋನ ಕಾಲದಲ್ಲಿ ಹೆಚ್ಚಿದ ಬಾಲ್ಯವಿವಾಹ

Update: 2021-09-18 04:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಡ್ ಸಾಂಕ್ರಾಮಿಕ ಸಾಮಾಜಿಕ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಕೈಗಾರಿಕೆಗಳು ಮುಚ್ಚಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಬೆಲೆ ಏರಿಕೆ ಬಡವರ ಬದುಕನ್ನು ಕಿತ್ತು ತಿನ್ನುತ್ತಿದೆ. ಇವೆಲ್ಲದರ ಜೊತೆಗೆ ಇನ್ನೊಂದು ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ. ವಿಶೇಷವಾಗಿ ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ, ಇಲ್ಲವೇ ಪ್ರಭಾವೀ ಶಕ್ತಿಗಳ ಕೈವಾಡದಿಂದಾಗಿ ಶಾಲೆಗೆ ಹೋಗಬೇಕಾದ ಮಕ್ಕಳು ಹಸೆಮಣೆ ಏರಿವೆ. ಇದನ್ನು ತಡೆಯಬೇಕಾದ ಸರಕಾರಿ ಇಲಾಖೆಗಳು ನಿಷ್ಕ್ರಿಯವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಪ್ರತಿಷ್ಠಿತ ಕುಟುಂಬಗಳ ಪ್ರಭಾವಿಗಳ ಆಸರೆಯಲ್ಲೇ ಇಂತಹ ಬಾಲ್ಯವಿವಾಹಗಳು ನಡೆಯುತ್ತಿವೆ. ಲಾಕ್‌ಡೌನ್ ಕಾಲದಲ್ಲಿ ಶಾಲೆಗಳನ್ನು ಮುಚ್ಚಿರುವುದು ಕೂಡ ಬಾಲ್ಯವಿವಾಹ ಹೆಚ್ಚಾಗಲು ಕಾರಣ. ಇಂತಹ ಘಟನೆಗಳು ನಡೆದಾಗ ತಪ್ಪಿತಸ್ಥರೆಂದು ಕಂಡುಬಂದವರನ್ನು ಶಿಕ್ಷೆಗೆ ಗುರಿಪಡಿಸದೆ ರಾಜಿ ಪಂಚಾಯತಿ ಮೂಲಕ ಮುಚ್ಚಿ ಹಾಕಲಾಗುತ್ತಿದೆ. ಬಾಲ್ಯವಿವಾಹ ತಡೆಗೆ ಇರುವ ಕಾನೂನು ಕೇವಲ ಕಾಗದದಲ್ಲಿ ಉಳಿದಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಯುನಿಸೆಫ್ ಅಧ್ಯಯನ ವರದಿಯ ಪ್ರಕಾರ ಕೋವಿಡ್ ಕಾಲದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಬಾಲ್ಯವಿವಾಹಗಳ ಪೈಕಿ ಶೇಕಡಾ 50ರಷ್ಟು ಬಾಲ್ಯವಿವಾಹಗಳು ಭಾರತ ಸೇರಿದಂತೆ ಐದು ದೇಶಗಳಲ್ಲಿ ನಡೆಯುತ್ತಿವೆ. ಭಾರತ ಬಿಟ್ಟರೆ ಬಾಂಗ್ಲಾದೇಶ, ಇಥಿಯೋಪಿಯ, ಬ್ರೆಝಿಲ್ ಮತ್ತು ನೈಜೀರಿಯಾದಲ್ಲಿ ಬಾಲ್ಯವಿವಾಹಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿವೆ. ಜಗತ್ತಿನಲ್ಲಿ ಈಗ 65 ಕೋಟಿ ಬಾಲ್ಯ ವಿವಾಹಿತರು ಬದುಕು ಸಾಗಿಸುತ್ತಿದ್ದಾರೆ. ಉಳಿದ ದೇಶಗಳ ಸ್ಥಿತಿ ಏನೇ ಆಗಿರಲಿ ‘ವಿಶ್ವ ಗುರು’ವಾಗಲು ಹೊರಟ ಭಾರತದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ನಾವೆಲ್ಲ ನಾಚಿಕೆ ಪಡಬೇಕಾದ ಸಂಗತಿಯಾಗಿದೆ. ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ. ಶೇಕಡ 27ರಷ್ಟು ಹೆಣ್ಣು ಮಕ್ಕಳು ಹದಿನೆಂಟು ವಯಸ್ಸು ತುಂಬುವ ಮೊದಲೇ ವೈವಾಹಿಕ ಜೀವನವನ್ನು ಪ್ರವೇಶಿಸುತ್ತಿದ್ದಾರೆ. ಅದರಲ್ಲೂ ಶೇಕಡ 70ರಷ್ಟು ಹೆಣ್ಣು ಮಕ್ಕಳು ಹದಿನೈದು ವರ್ಷ ತುಂಬುವ ಮೊದಲೇ ವೈವಾಹಿಕ ಬದುಕಿಗೆ ನೂಕಲ್ಪಡುತ್ತಿದ್ದಾರೆ. ಅಧಿಕೃತ ಅಂಕಿ- ಅಂಶಗಳ ಪ್ರಕಾರ ಜಾರ್ಖಂಡ್‌ನಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬಾಲ್ಯವಿವಾಹ ಗಳು ನಡೆಯುತ್ತಿವೆ. ಸಾಮಂತಶಾಹಿ, ಪಾಳೇಗಾರಿಕೆ ಸಾಮಾಜಿಕ ಮೌಲ್ಯಗಳು ಇನ್ನೂ ಬಲವಾಗಿ ಬೇರು ಬಿಟ್ಟಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ನಡೆಯುತ್ತಿರುವ ಬಾಲ್ಯವಿವಾಹಗಳಿಗೆ ಕಡಿವಾಣ ಹಾಕುವವರೇ ಇಲ್ಲ. ಉತ್ತರ ಪ್ರದೇಶದಲ್ಲಂತೂ ಪ್ರತಿ ಐವರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಬಾಲ್ಯವಿವಾಹಕ್ಕೆ ಕೊರಳೊಡ್ಡುತ್ತಿದ್ದಾಳೆ. ಆದರೂ ಆ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಆದಿತ್ಯನಾಥ್ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುತ್ತಾ ಮತ್ತೆ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. ಇವರಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಸರ್ಟಿಫಿಕೇಟ್ ಕೂಡ ಸಿಕ್ಕಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕಡು ಬಡತನ, ನಿರಕ್ಷರತೆ, ಮೂಢ ನಂಬಿಕೆ, ಕಂದಾಚಾರಗಳು ವಿಶೇಷವಾಗಿ ಧಾರ್ಮಿಕ ಅಂಧ ಶ್ರದ್ಧೆಗಳು ಬಾಲ್ಯವಿವಾಹಕ್ಕೆ ಮುಖ್ಯ ಕಾರಣಗಳಾಗಿವೆ. ಬಾಲ್ಯವಿವಾಹದಿಂದಾಗಿ ಹೆಣ್ಣು ಮಕ್ಕಳ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಮೊದಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಾಲಕಿಯರ ಬದುಕು ನರಕವಾಗುತ್ತದೆ. ಇದನ್ನು ತಡೆಯಲು ಒಕ್ಕೂಟ ಮತ್ತು ರಾಜ್ಯ ಸರಕಾರಗಳು ಕೈಗೊಂಡ ಕಾಟಾಚಾರದ ಕ್ರಮಗಳಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಇದು ಬರೀ ಸರಕಾರ ಮಾಡುವ ಕೆಲಸವಲ್ಲ. ದೇವರ ಹೆಸರು ಹೇಳಿಕೊಂಡು ಧರ್ಮವನ್ನು ಬಂಡವಾಳ ಮಾಡಿಕೊಂಡ ಮಠಾಧೀಶರು, ಜಗದ್ಗುರುಗಳು, ಧಾರ್ಮಿಕ ಮುಖಂಡರು ನಮ್ಮ ದೇಶದಲ್ಲಿ ಸಾಕಷ್ಟಿದ್ದಾರೆ. ಇಂತಹವರು ಬಾಲ್ಯವಿವಾಹ ತಡೆಯಲು ಮುಂದಾಗಬೇಕು. ಕೋಟಿ ಕೋಟಿ ರೂಪಾಯಿ ನಿಧಿ ಸಂಗ್ರಹಿಸುವ ಧಾರ್ಮಿಕ ಸಂಘಟನೆಗಳು ಬಾಲ್ಯವಿವಾಹ ತಡೆಗೆ ಮುಂದಾದರೆ ಈ ಸಾಮಾಜಿಕ ಅನಿಷ್ಟವನ್ನು ನಿವಾರಿಸಲು ಅನುಕೂಲವಾಗಬಹುದು.

ಬಾಲ್ಯವಿವಾಹ ತಡೆಗೆ ಒಂದಲ್ಲ ಎರಡಲ್ಲ ಹಲವಾರು ಇಲಾಖೆಗಳಿಗೆ ಜವಾಬ್ದಾರಿ ನೀಡಿರುವುದು ನಿಜ. ಆದರೂ ಇದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ ಏಕೆ? ಈ ಅನಿಷ್ಟವನ್ನು ತಡೆಯಲು, ತಳಮಟ್ಟದಿಂದ ನಿಗ್ರಹಿಸಲು ಒಂದು ಪ್ರತ್ಯೇಕ ಆಯೋಗದ ಅಗತ್ಯವಿದೆ ಹಾಗೂ ಬಾಲ್ಯವಿವಾಹ ನಿಷೇಧ ಕಾನೂನು ಇನ್ನಷ್ಟು ಬಿಗಿಯಾಗಬೇಕಾಗಿದೆ. ಈಗಿರುವ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ನೀಡಲಾಗುತ್ತದೆ. ಇದು ಸಾಲದು. ಶಿಕ್ಷೆಯ ಪ್ರಮಾಣವನ್ನು 5 ರಿಂದ 10 ವರ್ಷಗಳಿಗೆ ಹೆಚ್ಚಿಸಬೇಕು. ಬರೀ ದಂಡನಾ ಕ್ರಮಗಳನ್ನು ಮಾತ್ರ ಕೈಗೊಳ್ಳದೆ ಬಾಲ್ಯವಿವಾಹದ ದುಷ್ಪರಿಣಾಮದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸರಕಾರ ಮಾತ್ರವಲ್ಲ ಸ್ವಯಂ ಸೇವಾ ಸಂಸ್ಥೆಗಳು ಮುಂದಾಗಬೇಕಾಗಿದೆ.

ಅನೇಕ ಬಾರಿ ಅಧಿಕಾರದಲ್ಲಿರುವ ರಾಜಕಾರಣಿಗಳು ಮತ್ತು ಪ್ರಭಾವೀ ಧಾರ್ಮಿಕ ಗುರುಗಳು ಮತ್ತು ಮಠಾಧೀಶರು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮ ಗಳಲ್ಲಿ ಸರಕಾರದ ಕಣ್ಣು ತಪ್ಪಿಸಿ, ಇಲ್ಲವೇ ರಾಜಕೀಯ ಪ್ರಭಾವ ಬೀರಿ ಬಾಲ್ಯವಿವಾಹ ನಡೆದ ಉದಾಹರಣೆಗಳು ಸಾಕಷ್ಟಿವೆ. ಇವುಗಳನ್ನು ತಡೆಯಲು ದೃಢವಾದ ಸಂಕಲ್ಪವನ್ನು ಕೈಗೊಳ್ಳಬೇಕಾಗಿದೆ. ವಿಶೇಷವಾಗಿ ಮಹಿಳಾ ಸಂಘಟನೆಗಳು ಮತ್ತು ಮಕ್ಕಳ ಹಿತರಕ್ಷಣೆಗಾಗಿ ಇರುವ ಸ್ವಯಂ ಸೇವಾ ಸಂಘಟನೆಗಳನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡು ಬಾಲ್ಯವಿವಾಹ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಇದರೊಂದಿಗೆ ಹರ್ಯಾಣ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚಾಗಿ ಅಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯಾಬಲದ ನಡುವೆ ಅಸಮತೋಲನ ಹೆಚ್ಚಾಗಿದೆ. ಅಲ್ಲಿನ ಕೆಲ ಸಿರಿವಂತರು ಮತ್ತು ಭೂಮಾಲಕರು ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಪ್ರದೇಶಕ್ಕೆ ಬಂದು ಆಟ ಆಡುವ ವಯಸ್ಸಿನ ಬಡವರ ಹೆಣ್ಣು ಮಕ್ಕಳನ್ನು ಹಣದ ಆಮಿಷವೊಡ್ಡಿ ಮದುವೆಯಾಗಿ ಕರೆದುಕೊಂಡು ಹೋಗುತ್ತಾರೆಂಬ ದೂರುಗಳಿವೆ. ಇವುಗಳನ್ನು ತಡೆಯಲು ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವರಿದ್ದಾರೆ.ಅವರೇನು ಮಾಡುತ್ತಿದ್ದಾರೋ ತಿಳಿಯದು. ಇಂತಹ ಘಟನೆಗಳು ನಡೆದಾಗ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು ಬಾಲ್ಯವಿವಾಹ ತಡೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಕಾಟಾಚಾರದ ಹೇಳಿಕೆಯನ್ನು ನೀಡಿ ಕೈ ತೊಳೆದುಕೊಳ್ಳುತ್ತಾರೆ. ಇನ್ನು ಮುಂದೆ ಹೀಗಾಗಬಾರದು. ನಮ್ಮ ಸಮಾಜಕ್ಕೆ ದೇಶಕ್ಕೆ ಕಳಂಕವಾಗಿರುವ ಬಾಲ್ಯವಿವಾಹ ತಡೆಗೆ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News