ಜಸ್ಟಿಸ್ ಅಕಿಲ್ ಕುರೇಶಿರನ್ನು ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳಿಸಲು ಕೊಲೀಜಿಯಂ ಶಿಫಾರಸು

Update: 2021-09-21 08:18 GMT
Photo: National Herald

ಹೊಸದಿಲ್ಲಿ: ಜಸ್ಟಿಸ್ ಅಕಿಲ್ ಕುರೇಶಿ ಅವರನ್ನು ರಾಜಸ್ಥಾನ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕಗೊಳಿಸಲು ಸುಪ್ರೀಂ ಕೋರ್ಟಿನ ಕೊಲೀಜಿಯಂ ಪ್ರಸ್ತಾಪಿಸಿದೆ. ಸದ್ಯ ಜಸ್ಟಿಸ್ ಕುರೇಶಿ ಅವರು ತ್ರಿಪುರಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

ಜಸ್ಟಿಸ್ ಕುರೇಶಿ ಅವರು ಈ ಹಿಂದೆ ಗುಜರಾತ್ ಹೈಕೋರ್ಟಿನ ನ್ಯಾಯಾಧೀಶರಾಗಿ ಹಾಗೂ ಮುಂದೆ 2018ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಅಕ್ಟೋಬರ್ 2018ರಲ್ಲಿ ಬಾಂಬೆ ಹೈಕೋರ್ಟಿಗೆ ವರ್ಗಾಯಿಸಲಾಗಿತ್ತು. ಮೇ 2019ರಲ್ಲಿಯೇ ಸುಪ್ರೀಂ ಕೋರ್ಟ್ ಕೊಲೀಜಿಯಂ ಜಸ್ಟಿಸ್ ಕುರೇಶಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ   ನೇಮಕಗೊಳಿಸಲು ಶಿಫಾರಸು ಮಾಡಿತ್ತಾದರೂ ಕೇಂದ್ರ ಸರಕಾರ ಇದಕ್ಕೆ ಅನುಮೋದನೆ ತಡೆಹಿಡಿದಿತ್ತು.

ಈ ನಡುವೆ ಗುಜರಾತ್ ಹೈಕೋರ್ಟ್ ವಕೀಲರ ಸಂಘ ಸುಪ್ರೀಂ ಕೋರ್ಟ್ ಕದ ತಟ್ಟಿ  ಕೆಲವೊಂದು ನಿರ್ದಿಷ್ಟ ಕಾರಣಗಳಿಗಾಗಿ ಕೇಂದ್ರ ಸರಕಾರ ಅವರ ಪದೋನ್ನತಿಯನ್ನು ತಡೆಯುತ್ತಿದೆ ಎಂದು ದೂರಿತ್ತು. ಈಗ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರನ್ನು 2010ರಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಸಿಬಿಐ ಕಸ್ಟಡಿಗೆ ಜಸ್ಟಿಸ್ ಕುರೇಶಿ ವಹಿಸಿದ್ದರೆಂಬುದು ಇಲ್ಲಿ ಉಲ್ಲೇಖಾರ್ಹ.

ಮುಂದೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಸೆಪ್ಟೆಂಬರ್ 2019ರಲ್ಲಿ ಅವರನ್ನು ತ್ರಿಪುರಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕಗೊಳಿಸಲು ಶಿಫಾರಸು ಮಾಡಿತ್ತು. ಇದಕ್ಕೆ ಕೇಂದ್ರದ ಅನುಮೋದನೆ ದೊರೆತು ಅವರು ನವೆಂಬರ್ 2019ರಲ್ಲಿ ತ್ರಿಪುರಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News