ಬೆಂಗಳೂರು: ಬೇಹುಗಾರಿಕೆ ಪ್ರಕರಣ; ಬಂಧಿತ ಜಿತೇಂದರ್ ವಿಚಾರಣೆ ತೀವ್ರ

Update: 2021-09-21 15:18 GMT
ಜಿತೇಂದರ್

ಬೆಂಗಳೂರು, ಸೆ.21: ಭಾರತೀಯ ಸೇನಾಧಿಕಾರಿಯ ವೇಷ ಧರಿಸಿ ಓಡಾಡುತ್ತಾ ಸೇನೆಗೆ ಸಂಬಂಧಪಟ್ಟ ಸ್ಥಳಗಳ ಫೋಟೊ ಸಮೇತ ರಹಸ್ಯ ಮಾಹಿತಿಯನ್ನು ವಿದೇಶಿ ಬೇಹುಗಾರಿಕಾ ಸಂಸ್ಥೆಗಳಿಗೆ ಕಳುಹಿಸುತ್ತಿದ್ದ ಆರೋಪಿ ಜಿತೇಂದರ್ ಸಿಂಗ್‍ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬಟ್ಟೆ ವ್ಯಾಪಾರವನ್ನೇ ವೃತ್ತಿ ಮಾಡಿಕೊಂಡಿದ್ದ ಜಿತೇಂದರ್ ಸಿಂಗ್, ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಖಾತೆ ತೆರೆದಿದ್ದಾನೆ. ಕೆಲ ತಿಂಗಳ ಹಿಂದಷ್ಟೇ ಪಾಕ್ ಐಎಸ್‍ಐ ಅಧಿಕಾರಿಯೊಬ್ಬ, ವಿದೇಶಿ ಯುವತಿ ಹೆಸರಿನಲ್ಲಿ `ನೇಹಾಯಾನೆಪೂಜಾಜಿ' ನಕಲಿ ಖಾತೆ ತೆರೆದು ಜಿತೇಂದರ್ ಸಿಂಗ್‍ಗೆ ರಿಕ್ವೆಸ್ಟ್ ಕಳುಹಿಸಿದ್ದು, ಇದನ್ನು ಸ್ವೀಕರಿಸಿದ್ದ. ನಂತರ, ಮಾತುಕತೆ ಆರಂಭವಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

ಭಾರತವನ್ನು ಹೊಗಳಿದ್ದ ಯುವತಿ, ಭಾರತ ಎಂದರೆ ನನಗೆ ತುಂಬಾ ಇಷ್ಟ. ಸದ್ಯದಲ್ಲೇ ನಾನು ಭಾರತಕ್ಕೆ ಬಂದು ನಿನ್ನನ್ನು ಭೇಟಿಯಾಗುತ್ತೇನೆ. ಈಗ ನಾನು, ಭಾರತೀಯ ಸೇನಾ ನೆಲೆ ಹಾಗೂ ವಾಹನಗಳನ್ನು ನೋಡಬೇಕು. ದಯವಿಟ್ಟು, ಸೇನೆ ಬಳಿ ಹೋಗಿ ಫೋಟೊ ತೆಗೆದು ಕಳುಹಿಸು ಎಂದು ಕೇಳಿದ್ದಳು. ಅದಕ್ಕೆ ಒಪ್ಪಿದ್ದ ಜಿತೇಂದರ್, ಸೇನಾಧಿಕಾರಿ ವೇಷ ತೊಟ್ಟು ಸೇನಾ ನೆಲೆ ಹಾಗೂ ಸೇನೆ ವಾಹನಗಳ ಫೋಟೊ ತೆಗೆದು ಕಳುಹಿಸಿದ್ದ ಎಂದು ತಿಳಿದುಬಂದಿದೆ.

ಆರೋಪಿ ಜಿತೇಂದರ ಸಿಂಗ್ ವಿರುದ್ಧ ಸಿಸಿಬಿ ಇನ್ಸ್‍ಪೆಕ್ಟರ್ ಜಿ. ಶಿವಪ್ರಸಾದ್ ದೂರು ನೀಡಿದ ಹಿನ್ನೆಲೆಯಲ್ಲಿ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ 120(ಬಿ), ಮತ್ತು ಅಫಿಷಿಯಲ್ ಸಿಕ್ರೇಟ್ ಆಕ್ಟ್ 3, 6, 9 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News