ಪ.ಬಂಗಾಳ ಬಿಜೆಪಿಯ ಅಧ್ಯಕ್ಷರಾಗಿ ಸುಕಾಂತ ಮಜುಮ್ದಾರ್ ನೇಮಕ

Update: 2021-09-21 15:30 GMT

ಕೋಲ್ಕತಾ,ಸೆ.21: ತೃಣಮೂಲ ಕಾಂಗ್ರೆಸ್ಗೆ ಪಕ್ಷದ ನಾಯಕರ ವಲಸೆಯ ನಡುವೆಯೇ ಮೊದಲ ಬಾರಿಯ ಸಂಸದ ಸುಕಾಂತ ಮಜುಮ್ದಾರ್ (41) ಅವರನ್ನು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ಈವರೆಗೆ ಅಧ್ಯಕ್ಷರಾಗಿದ್ದ ದಿಲೀಪ್ ಘೋಷ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

‌ಮಂಗಳವಾರ ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಮಜುಮ್ದಾರ್,‘ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷವು ಬಹುದೊಡ್ಡ ಹೊಣೆಗಾರಿಕೆಯನ್ನು ನೀಡಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ,ಬೇರೆ ಯಾವುದೇ ರಾಜಕೀಯ ಪಕ್ಷವು ಇಂತಹ ಕ್ರಮವನ್ನು ಕೈಗೊಳ್ಳುವುದಿಲ್ಲ. ಹೈಕಮಾಂಡ್ನ ನಿರೀಕ್ಷೆ ಮತ್ತು ಅವರು ನನ್ನಲ್ಲಿಟ್ಟಿರುವ ವಿಶ್ವಾಸಕ್ಕೆ ಕುಂದು ಬಾರದಂತೆ ಕಾರ್ಯ ನಿರ್ವಹಿಸಲು ಪ್ರಯತ್ನಿಸುತ್ತೇನೆ ’ ಎಂದು ಹೇಳಿದರು.

ಉತ್ತರ ಬಂಗಾಳದಲ್ಲಿ ಪಕ್ಷದ ಉತ್ತಮ ಸಾಧನೆಯನ್ನು ಗಮನಿಸಿ ಮಜುಮ್ದಾರ್ ಅವರನ್ನು ನೇಮಕಗೊಳಿಸಲು ಉನ್ನತ ನಾಯಕತ್ವವು ನಿರ್ಧರಿಸಿದೆ ಎಂದ ಬಿಜೆಪಿಯಲ್ಲಿನ ಮೂಲಗಳು ತಿಳಿಸಿದವು. ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಸುವೇಂದು ಅಧಿಕಾರಿ ದಕ್ಷಿಣ ಬಂಗಾಳದವರಾಗಿದ್ದು,ಇದೀಗ ಉತ್ತರ ಬಂಗಾಳದ ಮಜುಮ್ದಾರ್ ನೇಮಕದೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ವೈಫಲ್ಯದ ಬಳಿಕ ಪಕ್ಷವನ್ನು ಬಲಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿರುವಂತೆ ಕಂಡು ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News