ಕೆನಡಾ ಸಂಸತ್ತಿಗೆ ಆಯ್ಕೆಯಾದ ಭಾರತೀಯ ಮೂಲದವರೆಷ್ಟು ಮಂದಿ ಗೊತ್ತೇ ?

Update: 2021-09-22 03:56 GMT
(Photo : solo trips and tips)

ಟೊರಾಂಟೊ: ಎನ್‌ಡಿಪಿ ಮುಖಂಡ ಜಗ್ಮೀತ್ ಸಿಂಗ್ ಮತ್ತು ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಸೇರಿದಂತೆ 17 ಮಂದಿ ಇಂಡೊ-ಕೆನಡಿಯನ್ ಪ್ರಜೆಗಳು ಕೆನಡಾ ಸಂಸತ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಪ್ರಧಾನಿ ಜೆಸ್ಟಿನ್ ಟ್ರುಡೇವ್ ನೇತೃತ್ವದ ಲಿಬರಲ್ ಪಾರ್ಟಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ.

ಲಿಬರಲ್ ಪಕ್ಷ 156 ಸ್ಥಾನಗಳನ್ನು ಗೆದ್ದಿದ್ದು, ಇದು 2019ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಸ್ಥಾನಗಳಿಗಿಂತ ಒಂದು ಕಡಿಮೆ. ಇದರೊಂದಿಗೆ ಈ ಪಕ್ಷಕ್ಕೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತ ಸಾಧಿಸಲು 14 ಸ್ಥಾನಗಳ ಕೊರತೆ ಎದುರಾಗಿದೆ. ಇದು ಟ್ರುದೇವ್ ಅವರಿಗೆ ಮೂರನೇ ಜಯವಾಗಿದ್ದು, ಎರಡನೇ ವರ್ಷಗಳಲ್ಲಿ ಮತ್ತೆ ನಡೆಸಿದ ಚುನಾವಣೆ ಸಮಯ ವ್ಯರ್ಥವಾಗಿಸುವ ಕ್ರಮ ಎಂದು ವಿರೋಧಿಗಳು ಟೀಕಿಸಿದ್ದಾರೆ. ಪ್ರಮುಖ ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಾರ್ಟಿ 122 ಸ್ಥಾನ ಗೆದ್ದಿದೆ.

ವಿಸರ್ಜಿತ ಸಂಪುಟದಲ್ಲಿದ್ದ ಹರ್ಜಿತ್ ಸಜ್ಜನ್, ಅನಿತಾ ಆನಂದ್ ಮತ್ತು ಬರ್ದೀಶ್ ಛಗ್ಗೇರ್ ಹೀಗೆ ಮೂವರು ಮುಖಂಡರೂ ಗೆಲುವು ಸಾಧಿಸಿದ್ದಾರೆ. ಅಂತೆಯೇ 42 ವರ್ಷ ವಯಸ್ಸಿನ ನ್ಯೂ ಡೆಮಾಕ್ರಟಿಕ್ ಪಾರ್ಟಿ ಮುಖಂಡ ಜಗ್ಮೀತ್ ಸಿಂಗ್ ಬುರ್ನಾಬಿ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಜಗ್ಮೀತ್ ಸಿಂಗ್ ಶೇಕಡ 40ರಷ್ಟು ಮತ ಪಡೆದು ಆಯ್ಕೆಯಾಗಿದ್ದಾರೆ.

ರಕ್ಷಣಾ ಸಚಿವ ಹರ್ಜೀತ್ ಸಜ್ಜನ್ ವ್ಯಾಂಕೊವರ್ ದಕ್ಷಿಣ ಕ್ಷೇತ್ರದಲ್ಲಿ ಶೇಕಡ 49 ಮತಗಳನ್ನು ಪಡೆದು ಗೆದ್ದಿದ್ದಾರೆ. ಕೆನಡಾ ಪಡೆಗಳ ದುರ್ನಡತೆ ಮತ್ತು ಸರ್ಕಾರ ಅಫ್ಘಾನಿಸ್ತಾನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯ ಬಗ್ಗೆ ವ್ಯಾಪಕ ಟೀಕೆಗಳ ಹೊರತಾಗಿಯೂ ಸಜ್ಜನ್ ಕಳೆದ ಬಾರಿಗಿಂತ ಹೆಚ್ಚು ಮತ ಪಡೆದು ಮರು ಆಯ್ಕೆಯಾಗಿದ್ದಾರೆ.

ಲಿಬರಲ್ ಪಕ್ಷದ ಅನಿತಾ ಆನಂದ್ ಓಕ್‌ವಿಲ್ಲೆ ಕ್ಷೇತ್ರದಲ್ಲಿ ಶೇಕಡ 46 ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಕೆನಡಾದ ಲಸಿಕೆ ಸಚಿವೆಗೆ ಇದು ಬಹುದೊಡ್ಡ ವಿಜಯವಾಗಿದೆ. ಲಿಬರಲ್ ಪಕ್ಷದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಛಗ್ಗೇರ್ ವಾಟರ್‌ಲೂ ಕ್ಷೇತ್ರದಲ್ಲಿ 44.8 ಶೇಕಡ ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

ಬ್ರಾಂಪ್ಟನ್ ಪಶ್ಚಿಮ ಕ್ಷೇತ್ರದಿಂದ ಕಮಲ್ ಖೇರಾ (ಶೇಕಡ 55), ಬ್ರಾಂಪ್ಟನ್ ಉತ್ತರ ಕ್ಷೇತ್ರದಿಂದ ರೂಬಿ ಸಹೋತಾ (ಶೇಕಡ 54), ಬ್ರಾಂಪ್ಟನ್ ದಕ್ಷಿಣ ಕ್ಷೇತ್ರದಿಂದ ಸೋನಿಯಾ ಸಿಧು (50%), ಬ್ರಾಂಪ್ಟನ್ ಪೂರ್ವ ಕ್ಷೇತ್ರದಿಂದ ಮಣೀಂದರ್ ಸಿಧು (55%) ಮತ್ತು ಸರ್ರೆ ನ್ಯೂಟನ್ ಕ್ಷೇತ್ರದಿಂದ ಸುಖ್ ಧಲಿವಾಲ್ (54%) ಲಿಬರಲ್ ಪಾರ್ಟಿ ಟಿಕೆಟ್‌ನಲ್ಲಿ ಗೆದ್ದ ಇತರ ಭಾರತೀಯ ಮೂಲದ ಅಭ್ಯರ್ಥಿಗಳು.

ಜಾರ್ಜ್ ಚಹಾಲ್ (ಕ್ಲಾರ್ಗಿ ಸ್ಕೈವ್ಯೆ), ಅರೀಫ್ ವಿರಾನಿ (ಪಾರ್ಕ್‌ದಾಲ್-ಹೈಪಾರ್ಕ್), ರಣದೀಪ್ ಸರಾಯ್ (ಸರ್ರೆ ಕೇಂದ್ರ), ಅಂಜು ದಿಲ್ಲಾನ್ (ದೋರ್ವಲ್), ಚಂದ್ರ ಆರ್ಯ (ನೆಪೀನ್) ಮತ್ತು ಮೊದಲ ಬಾರಿ ಸ್ಪರ್ಧಿಸಿದ ಇಕ್ವೀಂದರ್ ಗಹೀರ್ (ಮಿಸ್ಸಿಸಿಗುವಾ ಮಾಲ್ಟನ್) ಜಯ ಸಾಧಿಸಿರುವ ಭಾರತೀಯ ಮೂಲದ ಇತರರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News