​ರಾಜ್ಯ ವಿಧಾನಮಂಡಲದಲ್ಲಿ ಇಂದು ಲೋಕಸಭೆ ಸ್ಪೀಕರ್ ಭಾಷಣ; ಕಾಂಗ್ರೆಸ್ ಬಹಿಷ್ಕಾರ

Update: 2021-09-24 03:48 GMT
ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Photo source: PTI)

ಹೊಸದಿಲ್ಲಿ, ಸೆ.24: ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಭಾಷಣ ಮಾಡುವರು. 'ಪ್ರಜಾಪ್ರಭುತ್ವ- ಸಂಸದೀಯ ಮೌಲ್ಯಗಳ ಸಂರಕ್ಷಣೆ' ಎಂಬ ವಿಷಯದ ಬಗ್ಗೆ ಅಪರಾಹ್ನ 2:30ಕ್ಕೆ ಬಿರ್ಲಾ ಮಾತನಾಡುವರು ಎಂದು ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಮಾತನಾಡುತ್ತಿರುವುದು ಇದೇ ಮೊದಲು. ಸೆಪ್ಟಂಬರ್ 13ರಂದು ಆರಂಭವಾಗಿರುವ ರಾಜ್ಯ ವಿಧಾನಮಂಡಲದ 10 ದಿನಗಳ ಅಧಿವೇಶನ ಶುಕ್ರವಾರ ಮುಕ್ತಾಯವಾಗಲಿದೆ.

ಲೋಕಸಭೆ ಸ್ಪೀಕರ್ ಭಾಷಣದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯದ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಇತರ ಗಣ್ಯರು ಭಾಗವಹಿಸುವರು.

ಆದಾಗ್ಯೂ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಬಿರ್ಲಾ ಭಾಷಣವನ್ನು ಬಹಿಷ್ಕರಿಸಲಿದೆ. ''ವಿಧಾನ ಮಂಡಲದಲ್ಲಿ ಲೋಕಸಭೆಯ ಸ್ಪೀಕರ್ ಮಾತನಾಡುವುದು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಭಾರತದ ರಾಷ್ಟ್ರಪತಿ ಮತ್ತು ಕರ್ನಾಟಕ ರಾಜ್ಯಪಾಲರನ್ನು ಹೊರತುಪಡಿಸಿ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಬೇರೆಯವರು ಮಾತನಾಡಿದ ನಿದರ್ಶನ ಇಲ್ಲ'' ಎಂದು ಕಾಂಗ್ರೆಸ್ ಹೇಳಿದೆ.

''ಇದು ಹೊಸ ಸಂಪ್ರದಾಯ ಮಾತ್ರವಲ್ಲದೇ, ಸಂವಿಧಾನದಲ್ಲಿ ಕೂಡಾ ಇಂಥ ಭಾಷಣಕ್ಕೆ ಅವಕಾಶವಿಲ್ಲ'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ''ನಮ್ಮ ಸಂಸದೀಯ ವ್ಯವಸ್ಥೆಯ ಪ್ರಕಾರ ವಿಧಾನಮಂಡಲ ಸದನದ ಒಳಗೆ ಲೋಕಸಭೆ ಸ್ಪೀಕರ್ ಮಾತನಾಡಲು ಅವಕಾಶವಿಲ್ಲ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News