ವಿಧಾನಸಭೆಯಲ್ಲಿ ಕೋಲಾಹಲ: ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್

Update: 2021-09-24 13:29 GMT

ಬೆಂಗಳೂರು, ಸೆ. 24: `ರಾಷ್ಟ್ರೀಯ ಶಿಕ್ಷಣ ನೀತಿ'(ಎನ್‍ಇಪಿ) ಸೇರಿದಂತೆ ರಾಜ್ಯದ ಜನರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು' ಎಂದು ಕೋರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯ ಬಳಿಕ ಕಾಂಗ್ರೆಸ್ ಸದಸ್ಯ ಡಾ.ರಂಗನಾಥ್, ಕಂಪ್ಲಿ ಗಣೇಶ್, ಪ್ರಿಯಾಂಕ್ ಖರ್ಗೆ, ಈ.ತುಕರಾಮ್ ಸೇರಿದಂತೆ ಇನ್ನಿತರ ಸಮಸ್ಯೆ ಚರ್ಚೆಗೆ ಅವಕಾಶ ಕೋರಿದರು. ಆದರೆ, ಸ್ಪೀಕರ್ ಕಾಗೇರಿ, `ಸಯಮವಿಲ್ಲ' ಎಂದು ನಿರಾಕರಿಸಿದರು. ಇದರಿಂದ ಆಕ್ರೋಶಿತರರಾದ ಕಾಂಗ್ರೆಸ್ ಸದಸ್ಯರು `ಕುಣಿಗಲ್ ಲಿಂಕ್ ಕೆನಾಲ್, ದಲಿತ, ಶೂದ್ರ, ಬುಡಕಟ್ಟು ಜನರ ಮಕ್ಕಳನ್ನು ಎನ್‍ಇಪಿ ಮೂಲಕ ಮನುವಾದಿ ಗುಲಾಮರನ್ನಾಗಿಸಲು ಹೊರಟಿರುವ ಬಿಜೆಪಿ ಸರಕಾರಕ್ಕೆ ಧಿಕ್ಕಾರ' ಎಂಬ ಫಲಕವನ್ನು ಹಿಡಿದು ಸ್ಪೀಕರ್ ಪೀಠದ ಮುಂದಿನ ಬಾವಿಗೆ ಧಾವಿಸಿದರು.

ಈ ವೇಳೆ ಎದ್ದು ನಿಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, `ಈ ಬಾರಿಯ ಅಧಿವೇಶನದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಬಾರದು ಎಂದು ಪಕ್ಷ ತೀರ್ಮಾನಿಸಿತ್ತು. ಸದನದ ಸಂಪೂರ್ಣ ಸಮಯವನ್ನು ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿನಿಯೋಗವಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ಆಡಳಿತ ಪಕ್ಷಕ್ಕೆ ಚರ್ಚೆಯೇ ಬೇಕಾಗಿಲ್ಲ' ಎಂದು ಟೀಕಿಸಿದರು. 

`ನಮ್ಮ ಪಕ್ಷದ ಶಾಸಕರು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ, ಅವರ ಪ್ರಶ್ನೆಗಳಿಗೆ ಬಿಜೆಪಿ ಸರಕಾರದಿಂದ ಸಮರ್ಪಕ ಉತ್ತರವೇ ಬಂದಿಲ್ಲ. ಹೀಗೆ ಆತುರಾತುರದಲ್ಲಿ ಇಂದೇ ಸದನ ಮುಗಿಸಬೇಕು ಎಂದರೆ ನಮಗೆ ಪ್ರತಿಭಟನೆ ಬಿಟ್ಟು ಬೇರೆ ಯಾವ ದಾರಿ ಇದೆ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

`ಸದನವನ್ನು ಇನ್ನೂ ಒಂದು ವಾರ ಮುಂದುವರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸ್ಪೀಕರ್ ಅವರೇ ತಮಗೂ ನಾನು ಹಲವು ಬಾರಿ ಮನವಿ ಮಾಡಿದ್ದೇನೆ, ಪತ್ರವನ್ನೂ ಬರೆದಿದ್ದೇನೆ. ವಿರೋಧಪಕ್ಷವನ್ನು ಎದುರಿಸುವ ಧೈರ್ಯ ಬಿಜೆಪಿ ಸರಕಾರಕ್ಕಿಲ್ಲ. ಇದಕ್ಕಾಗಿ ಚರ್ಚೆಗೆ ಹೆದರಿ ಓಡಿಹೋಗುತ್ತಿದೆ' ಎಂದು ಸಿದ್ದರಾಮಯ್ಯ ಟೀಕಿಸಿದರು.

`ರಾಜ್ಯ ಬಿಜೆಪಿ ಸರಕಾರಕ್ಕೆ ಚರ್ಚೆ ಬೇಕಾಗಿಲ್ಲ. ತಮ್ಮ ಪಕ್ಷದ ಅಜೆಂಡಾಗಳಿಗೆ ಪೂರಕವಾದ ಜನವಿರೋಧಿ ಮಸೂದೆಗಳಿಗೆ ಅನುಮೋದನೆ ಪಡೆದುಕೊಳ್ಳುವುದಷ್ಟೇ ಬೇಕಾಗಿದೆ. ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ನಡೆ. ನಮಗೆ ಉಳಿದಿರುವುದು ಬೀದಿ ಹೋರಾಟ ಅಷ್ಟೇ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಗದ್ದಲ ಸೃಷ್ಟಿಸಿದರು. ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಏರಿದ ಧ್ವನಿಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ, ಧಿಕ್ಕಾರದ ಘೋಷಣೆಗಳು ಮೊಳಗಿದವು. ಯಾರು ಏನು ಮಾತನಾಡುತ್ತಿದ್ದಾರೆಂಬುದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಕೋವಿಡ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಉತ್ತರ ಮಂಡಿಸಿದರು.

`ಆರು ತಿಂಗಳ ಬಳಿಕ ಸದನ ಸೇರಿದೆ. ಜನರ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಬೇಕು, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡಬೇಕು. ಸಮಯವೇ ಇಲ್ಲ. ಎನ್‍ಇಪಿ ಎಂದರೆ ಅದು `ನಾಗಪುರ ಶಿಕ್ಷಣ ನೀತಿ' ಎಂದು ಸಿದ್ದರಾಮಯ್ಯ ಟೀಕಿಸಿದರು.

`ನಾಗಪುರ ಶಿಕ್ಷಣ ನೀತಿ ಒಳ್ಳೆಯದು ಇದ್ದರೆ ತಪ್ಪೇನಿದೆ. ಆರೆಸೆಸ್ಸ್ ವಿಚಾರಧಾರೆಗಳಲ್ಲಿ ಒಳ್ಳೆಯದು ಇದ್ದರೆ ಅನುಸರಿಸುವುದಲ್ಲಿ ತಪ್ಪೇನಿದೆ' ಎಂದು ಸ್ಪೀಕರ್ ಕಾಗೇರಿ ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ, `ನೀವು ಸ್ಪೀಕರ್ ಪೀಠದಲ್ಲಿ ಕೂತು ಆರೆಸೆಸ್ಸ್ ಶಿಕ್ಷಣ ನೀತಿಯ ಕುರಿತು ಮಾತನಾಡಬಾರದು. ನೀವು ಆ ಬಗ್ಗೆ ಮಾತನಾಡುವಂತಿದ್ದರೆ ಕೆಳಗೆ ಬನ್ನಿ' ಎಂದು ಆಹ್ವಾನಿಸಿದರು.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ರಾಷ್ಟ್ರೀಯ ಶಿಕ್ಷಣ ನೀತಿ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸುವ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗುತ್ತಿದೆ' ಎಂದು ಸಮರ್ಥಿಸಿಕೊಂಡರು.

`ಆರೆಸೆಸ್ಸ್ ಶಿಕ್ಷಣ ನೀತಿ ಎಂದು ಕರೆದರೂ ನಾವು ಚಿಂತೆ ಮಾಡುವುದಿಲ್ಲ. ಖ್ಯಾತ ವಿಜ್ಞಾನಿ ಡಾ.ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಶಿಕ್ಷಣ ನೀತಿ ಕರಡು ರೂಪಿಸಿದೆ. ಇದೊಂದು ಉತ್ತಮ ಶಿಕ್ಷಣ ನೀತಿ. ಆರೆಸೆಸ್ಸ್ ಎಂದರೆ ರಾಷ್ಟ್ರೀಯತೆ. ಭಾರತೀಯರಿಗಾಗಿ, ಭಾರತೀಯರಿಗೋಸ್ಕರ, ಭಾರತೀಯ ಭವಿಷ್ಯ ಮತ್ತು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಇದಾಗಿದೆ' ಎಂದು ಬೊಮ್ಮಾಯಿ ಹೇಳಿದರು.

`ಕಾಂಗ್ರೆಸ್‍ನವರದ್ದು ಮೆಕಾಲೆ ಶಿಕ್ಷಣ ನೀತಿ. ಅದು ವಿದೇಶಿ ಪ್ರೇರಿತ. ಗುಲಾಮಗಿರಿಯ ಶಿಕ್ಷಣ ನೀತಿಯಾಗಿದೆ. ದೇಶದ ಅಸ್ಮಿತೆ, ಸ್ವಾಭಿಮಾನ ಮತ್ತು ಆಧುನಿಕ ತಾಂತ್ರಿಕತೆ ಒಳಗೊಂಡ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ರೂಪಿಸಿರುವ ಶಿಕ್ಷಣ ನೀತಿ ನಮ್ಮದು' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಗದ್ದಲದ ಮಧ್ಯೆ ಆರೆಸೆಸ್ಸ್ ಪರ-ವಿರೋಧ ಧಿಕ್ಕಾರದ ಘೋಷಣೆಗಳು ಏರಿದ ಧ್ವನಿಯಲ್ಲಿ ಅಬ್ಬರಿಸಿದವು. ಆಡಳಿತ ಪಕ್ಷದ ಸದಸ್ಯರೇ ಸ್ಪೀಕರ್ ಮತ್ತು ಮುಖ್ಯಮಂತ್ರಿ ಮಾತನಾಡುತ್ತಿದ್ದ ವೇಳೆ ಎಲ್ಲರೂ ಒಟ್ಟಾಗಿ ನಿಂತು ಏರಿದ ಧ್ವನಿಯಲ್ಲಿ `ಗಲೀ ಗಲೀಮೆ ಶೋರ್ ಹೇ ಕಾಂಗ್ರೆಸ್ ವಾಲೆ ಚೋರ್ ಹೇ' ಎಂದು ಘೋಷಣೆ ಕೂಗಿದರು. ಇತ್ತ ಕಾಂಗ್ರೆಸ್ ಸದಸ್ಯರು ನಾಗಪುರ ಶಿಕ್ಷಣ ನೀತಿ, ಆರೆಸೆಸ್ಸ್ ವಿರುದ್ಧ ಪ್ರತಿಯಾಗಿ ಧಿಕ್ಕಾರ ಕೂಗಿದರು.

ಈ ಗದ್ದಲ, ಗೊಂದಲದ ಮಧ್ಯೆ ಗಮನ ಸೆಳೆಯುವ ಸೂಚನೆಗಳಿಗೆ ಉತ್ತರ, ವಿಧಾನ ಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ, ಹಕ್ಕುಬಾಧ್ಯತೆಗಳ ಸಮಿತಿ ವರದಿಗಳನ್ನು ಮಂಡಿಸಲಾಯಿತು. ಆ ಬಳಿಕ ಸ್ಪೀಕರ್ ಕಾಗೇರಿ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿ ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News