ಪಿಎಂ ಕೇರ್ಸ್ ನಿಧಿಯ ಲೆಕ್ಕ ಕೇಳುತ್ತಿರುವ ಮೃತದೇಹಗಳು!

Update: 2021-09-25 05:07 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಮತ್ತು ಲಾಕ್‌ಡೌನ್‌ಗಳು ಬಿದ್ದು ಹೋಗಿದ್ದ ದೇಶದ ಆರ್ಥಿಕತೆಯನ್ನು ಇನ್ನಷ್ಟು ಪಾತಾಳಕ್ಕೆ ತಳ್ಳುತ್ತಿದ್ದಾಗ ಜನರು ಮೋದಿ ಸರಕಾರ ಅದೇನೋ ಜಾದು ನಡೆಸಿ ಈ ದೇಶದ ಜನರನ್ನು ರಕ್ಷಿಸುತ್ತದೆ ಎಂದು ಭಾವಿಸಿದ್ದರು. ಲಾಕ್‌ಡೌನ್ ದಿನಗಳಲ್ಲಿ ಪ್ರತಿಬಾರಿ, ಮೋದಿಯವರು ಟಿವಿಯಲ್ಲಿ ಕಾಣಿಸಿಕೊಂಡಾಗಲೂ ‘ಈ ಬಾರಿ ಏನನ್ನಾದರೂ ಘೋಷಿಸುತ್ತಾರೆ’ ಎನ್ನುವ ಆಸೆಗಣ್ಣಿನಿಂದ ಜನಸಾಮಾನ್ಯರು ಟಿವಿ ಮುಂದೆ ನಿಲ್ಲುತ್ತಿದ್ದರು. ಆದರೆ, ಕಂಗೆಟ್ಟ ದೇಶವನ್ನು ತಮ್ಮ ಭಾಷಣಗಳ ಮೂಲಕ ಸಂತೃಪ್ತಿಪಡಿಸಲು ಮೋದಿ ಯತ್ನಿಸಿದರು. ಕ್ಯಾಂಡಲ್ ಹಚ್ಚಿ, ತಟ್ಟೆ ಬಾರಿಸಿ ಎಂಬಿತ್ಯಾದಿ ಟಾಸ್ಕ್‌ಗಳನ್ನು ಕೊಟ್ಟು ದೇಶವನ್ನು ಏಮಾರಿಸಿದರು. ವಲಸೆ ಕಾರ್ಮಿಕರು ಬೀದಿಗೆ ಬಿದ್ದು ವಿಲ ವಿಲ ಒದ್ದಾಡುತ್ತಿದ್ದಾಗ, ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಜನರು ಸರಣಿ ಸಾವುಗಳನ್ನು ಅಪ್ಪುತ್ತಿದ್ದಾಗ, ಉದ್ದಿಮೆಗಳು ಒಂದೊಂದಾಗಿ ಮುಚ್ಚಿ, ಮಾಲಕರು ಆತ್ಮಹತ್ಯೆಗೈಯುತ್ತಿದ್ದಾಗ, ಪ್ರಧಾನಿ ಮೋದಿಯವರು ಏನೂ ಸಂಭವಿಸಿಯೇ ಇಲ್ಲ ಎಂಬಂತಿದ್ದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು, ಸಮಾಜ ಸೇವಕರು ಮುಂದೆ ನಿಂತು ಜನರಿಗೆ ನೆರವಾದರು. ತಮ್ಮಲ್ಲಿದ್ದುದನ್ನು ಹಂಚುವ ಮೂಲಕ ಮಾನವೀಯತೆಯನ್ನು ಮೆರೆದರು. ಸರಕಾರ ಮಾಡಬೇಕಾದ ಕೆಲಸವನ್ನು ಇವರು ಮಾಡಿದರು. ಹಲವು ಸಿನೆಮಾ ನಟರೂ ಮಾನವೀಯತೆಯನ್ನು ಮೆರೆದರು. ಈ ಸಂದರ್ಭದಲ್ಲಿ ನಟ ಸೋನೂ ಸೂದ್ ನೀಡಿದ ನೆರವು ವಿಶ್ವಮಾನ್ಯವಾಯಿತು. ಸೋನ್ ಸೂದ್‌ಗೆ ಋಣಿಯಾಗಿರಬೇಕಾದ ಸರಕಾರ, ಅವರಿಗೆ ಸಿಕ್ಕಿದ ಜನಪ್ರಿಯತೆಗೆ ಅಸೂಯೆಪಟ್ಟು ಅವರಿಗೆ ಕಿರುಕುಳ ನೀಡುವ ಸಣ್ಣ ಮಟ್ಟಕ್ಕೆ ಇಳಿಯಿತು.

ಜನರು ತುತ್ತು ಅನ್ನಕ್ಕೆ ಹಾಹಾಕಾರ ಮಾಡುತ್ತಿರುವ ಸಂದರ್ಭದಲ್ಲೇ ಸರಕಾರ ‘ಪಿಎಂ ಕೇರ್ಸ್ ನಿಧಿ’ಯನ್ನು ಸ್ಥಾಪಿಸಿತು. ಜನರ ಸಂಕಟಗಳನ್ನು ಬಳಸಿಕೊಂಡು ವಿವಿಧ ಉದ್ಯಮಿಗಳಿಂದ, ಸಂಸ್ಥೆಗಳಿಂದ, ಸಿನೆಮಾ ನಟರಿಂದ ಈ ಪಿಎಂ ಕೇರ್ಸ್ ತಿಜೋರಿಯನ್ನು ತುಂಬಿಸತೊಡಗಿತು. ಸರಕಾರದ ಬಳಿ ಹಣವಿಲ್ಲದೆ ಇರುವುದೇ ಕೊರೋನ ನಿರ್ವಹಣೆಯ ವೈಫಲ್ಯಕ್ಕೆ ಕಾರಣವಾಗಿರಬಹುದು ಎಂದು, ದೇಶದ ಮೂಲೆ ಮೂಲೆಗಳಿಂದ ಪಿಎಂ ಕೇರ್ಸ್ ನಿಧಿಗೆ ಜನರು ದೇಣಿಗೆಗಳನ್ನು ನೀಡತೊಡಗಿದರು. ‘ಪಿಎಂ ಕೇರ್ಸ್’ ಹೆಸರಿದ್ದ ಕಾರಣಕ್ಕೆ, ಸರಕಾರದ ನಿಧಿಯೆಂದೇ ಬಗೆದು ಜನರು ಈ ದೇಣಿಗೆಗಳನ್ನು ನೀಡಿದ್ದರು. ಪ್ರಧಾನಿ ಮೋದಿಯವರ ಹೆಸರಿಗೆ ಮಣಿದು ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂದಿ ಈ ನಿಧಿಗೆ ತಮ್ಮ ಒಂದು ದಿನದ ವೇತನವನ್ನು ಕೊಟ್ಟರು. ಉದ್ಯಮಿಗಳೂ ಅನಿವಾರ್ಯವಾಗಿ ತಮ್ಮ ಪಾಲನ್ನು ನೀಡಲೇ ಬೇಕಾಯಿತು. ಒಂದು ರೀತಿಯಲ್ಲಿ, ಇದು ಕೊರೋನವನ್ನು ಮುಂದಿಟ್ಟು ನಡೆದ ‘ಸರಕಾರಿ ಪ್ರಾಯೋಜಕತ್ವದ ವಸೂಲಿ’. ಪಿಎಂ ಕೇರ್ಸ್‌ನ್ನು ಸ್ಥಾಪನೆಗೊಂಡ ಕೆಲವೇ ದಿನಗಳಲ್ಲಿ ಸಂಸ್ಥೆ ದೊಡ್ಡ ಮಟ್ಟದ ಹಣವನ್ನು ತನ್ನದಾಗಿಸಿಕೊಂಡಿತು. ಈ ನಿಧಿಯನ್ನು ಬಳಸಿಕೊಂಡು ದೇಶಾದ್ಯಂತ ಕೊರೋನವನ್ನು ಎದುರಿಸಲು ಸರಕಾರ ನೂತನ ಯೋಜನೆಗಳನ್ನು ಘೋಷಿಸುತ್ತದೆ ಎಂದು ಜನರು ಕಾದದ್ದೇ ಬಂತು. ಸರಕಾರ ಇಂದಿಗೂ ಈ ಪಿಎಂ ಕೇರ್ಸ್‌ನ ನಿಧಿಯನ್ನು ಸರಕಾರದ ಯೋಜನೆಗಳಿಗೆ ಬಳಸಿಕೊಂಡಿಲ್ಲ. ವಿವಿಧ ರಾಜ್ಯಗಳು ಆಕ್ಸಿಜನ್ ಸಿಲಿಂಡರ್‌ಗಳಿಲ್ಲದೆ, ವೆಂಟಿಲೇಟರ್‌ಗಳಿಲ್ಲದೆ ತತ್ತರಿಸುತ್ತಿದ್ದಾಗಲೂ ಈ ಪಿಎಂ ಕೇರ್ಸ್‌ನ ನಿಧಿಯ ಸದುಪಯೋಗವಾಗಲಿಲ್ಲ. ಜಿಎಸ್‌ಟಿ ಪರಿಹಾರ ನೀಡುವಿಕೆಯಲ್ಲಾದ ಮೋಸ, ಕೇಂದ್ರದ ಅನುದಾನಗಳಲ್ಲಿ ಕಡಿತ ಇತ್ಯಾದಿ ಕಾರಣಗಳಿಂದ ಆರ್ಥಿಕವಾಗಿ ತತ್ತರಿಸಿದ ರಾಜ್ಯಗಳು ಕನಿಷ್ಟ ಈ ಪಿಎಂ ಕೇರ್ಸ್ ಹಣವನ್ನಾದರೂ ರಾಜ್ಯಗಳಿಗೆ ಬಿಡುಗಡೆ ಮಾಡಿ, ಆರ್ಥಿಕ ನೆರವು ನೀಡುತ್ತಾರೋ ಎಂದು ಕಾದರೆ, ಇದೀಗ ಸರಕಾರ ಪಿಎಂ ಕೇರ್ಸ್‌ಗೂ ಸರಕಾರಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದೆ.

ಪಿಎಂ ಕೇರ್ಸ್‌ನ ನಿಧಿಯನ್ನು ಕೊರೋನ ನಿರ್ವಹಣೆಗೆ ಯಾವ ರೀತಿಯಲ್ಲಿ ಬಳಸಲಾಗಿದೆ ಎನ್ನುವ ಪ್ರಶ್ನೆಗೆ ಈವರೆಗೆ ಸರಕಾರ ಉತ್ತರವನ್ನು ನೀಡಿಲ್ಲ. ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದ್ದರೂ, ಅವುಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂಬ ನಿಲುವನ್ನು ಪಿಎಂ ಕೇರ್ಸ್ ತಾಳಿದೆ. ಇದೀಗ ಒಂದು ಹಂತ ಮುಂದೆ ಹೋಗಿ, ಪಿಎಂ ಕೇರ್ಸ್ ಸರಕಾರಿ ನಿಧಿಯೇ ಅಲ್ಲ. ಆದುದರಿಂದಾಗಿ ಸರಕಾರಿ ಸಂಚಿತ ನಿಧಿಗೆ ಈ ಹಣವನ್ನು ವರ್ಗಾಯಿಸಲಾಗುವುದಿಲ್ಲ. ಇದೊಂದು ಪ್ರತ್ಯೇಕ ಟ್ರಸ್ಟ್ ಎಂದು ನ್ಯಾಯಾಲಯಕ್ಕೆ ಹೇಳಿದೆ. ಈ ನಿಧಿಯನ್ನು ಸ್ಥಾಪಿಸಲಾಗಿರುವುದೇ ಪ್ರಧಾನ ಮಂತ್ರಿ ಎನ್ನುವ ಹುದ್ದೆಯ ಹೆಸರನ್ನು ಬಳಸಿ. ‘ಪ್ರಧಾನ ಮಂತ್ರಿ’ ಸರಕಾರದ ಭಾಗವಾಗಿದ್ದಾರೆ. ಪ್ರಧಾನಮಂತ್ರಿ ಹುದ್ದೆಯನ್ನು ಮುಂದಿಟ್ಟು ಸರಕಾರೇತರ ನಿಧಿಯೊಂದನ್ನು ಸ್ಥಾಪಿಸುವ ಅವಕಾಶ ಇದೆಯೇ ಎನ್ನುವ ಮುಖ್ಯ ಪ್ರಶ್ನೆ ಈಗ ನ್ಯಾಯಾಲಯದ ಮುಂದಿದೆ. ಪಿಎಂ ಕೇರ್ಸ್ ಮೂಲಕ ಹಣವನ್ನು ಯಾಕೆ ಸಂಗ್ರಹಿಸಲಾಗಿದೆ? ಅದಕ್ಕಾಗಿ ಸರಕಾರದ ಲಾಂಛನಗಳ ಸಹಿತ ಎಲ್ಲ ಅಂಗಗಳನ್ನು ಬಳಸಿಕೊಂಡು ಈಗ ಅದನ್ನು ಸರಕಾರೇತರ ಸಂಸ್ಥೆ ಎಂದು ಕರೆಯುತ್ತಿರುವುದು ಯಾಕೆ? ದತ್ತಿ ಸಂಸ್ಥೆಯೇ ಆಗಿದ್ದರೂ, ಕೊರೋನದಂತಹ ಸಂಕಟದ ಸಮಯದಲ್ಲಿ, ಕೊರೋನದ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ಸದ್ವಿನಿಯೋಗ ಪಡಿಸಿದ ವಿವರಗಳನ್ನು ಯಾಕೆ ನೀಡಬಾರದು? ಪಿಎಂ ಕೇರ್ಸ್‌ನ್ನು ಮಾಹಿತಿ ಹಕ್ಕಿನಿಂದ ಮುಚ್ಚಿಡುವಂತಹ ಅನಿವಾರ್ಯ ಪರಿಸ್ಥಿತಿ ಯಾಕೆ ಬಂದಿದೆ? ಕೊರೋನ ಸಂಕಟ ಕಾಲದಲ್ಲಿ ಈ ದತ್ತಿ ನಿಧಿಯಿಂದಾದ ಒಳಿತುಗಳನ್ನು ಜನರ ಮುಂದಿಟ್ಟರೆ ಅದರಿಂದ ಸರಕಾರಕ್ಕೆ ತಾನೆ ಲಾಭ.

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲಾಗುವುದಿಲ್ಲ ಎಂದು ಸರಕಾರ ಹೇಳಬೇಕಾದರೆ, ಈ ನಿಧಿ ಸದ್‌ಬಳಕೆಯಾಗದೇ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಅಲ್ಲವೇ? ಇದು ಸಹಸ್ರಾರು ಕೋಟಿ ರೂಪಾಯಿಯ ಹಣದ ವಿಷಯ ಮಾತ್ರವಲ್ಲ, ಈ ದೇಶದ ಸಾವಿರಾರು ಜನರ ಬದುಕಿನ ಪ್ರಶ್ನೆಯೂ ಕೂಡ. ಕೊರೋನ ಸಾವುನೋವುಗಳನ್ನು ಮುಂದಿಟ್ಟು ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡಿ ಸಂಗ್ರಹಿಸಿದ ಈ ಹಣದ ವಿವರಗಳನ್ನು ನೀಡುವುದಿಲ್ಲ ಎನ್ನುವುದು ದೇಶಕ್ಕೆ ಎಸಗಿದ ಮಹಾ ವಂಚನೆಯಾಗಿದೆ. ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಮೃತಪಟ್ಟ ಲಕ್ಷಾಂತರ ಭಾರತೀಯರ ಮೃತದೇಹಗಳು, ಗಂಗಾನದಿಯಲ್ಲಿ ತೇಲಿದ ಹೆಣಗಳು, ಗಂಗೆಯ ತಟದಲ್ಲಿ ದಫನಗೈದ ಮೃತದೇಹಗಳು ಇಂದು ಪಿಎಂ ಕೇರ್ಸ್ ನಿಧಿಯ ಲೆಕ್ಕವನ್ನು ಕೇಳುತ್ತಿವೆ. ಅವುಗಳಿಗೆ ಸರಕಾರ ಉತ್ತರ ಹೇಳಲೇಬೇಕಾಗಿದೆ. ಕೊರೋನಾವನ್ನು ಬಳಸಿಕೊಂಡು ಹಲವು ಸಂಸ್ಥೆಗಳು, ಆಸ್ಪತ್ರೆಗಳು ಜನಸಾಮಾನ್ಯರ ಬದುಕನ್ನು ದೋಚಿವೆ ಎಂಬ ಆರೋಪಗಳಿವೆ. ಪಿಎಂಕೇರ್ಸ್ ಮೂಲಕ ಇದೀಗ ನಾನು ಕೂಡ ಆ ದರೋಡೆಕೋರರ ಸಾಲಿನಲ್ಲಿದ್ದೇನೆ ಎಂದು ಸರಕಾರವೇ ಘೋಷಿಸಿದಂತಾಗಿದೆ. ದೇಶ ಸೂತಕದ ಮನೆಯಂತಿದೆ. ಪಿಎಕೇರ್ಸ್ ನಿಧಿ ಈ ಸೂತಕದ ಮನೆಯಿಂದ ದೋಚಿದ ಹಣವೆನ್ನುವ ಸಣ್ಣ ಲಜ್ಜೆಯಾದರೂ ಸರಕಾರಕ್ಕೆ ಇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News