ನ್ಯಾಯಾಲಯ ಇ-ಮೇಲ್‌ಗಳಿಂದ ಮೋದಿ ಚಿತ್ರ ಕಿತ್ತುಹಾಕಿ: ಸುಪ್ರೀಂ ಆದೇಶ

Update: 2021-09-25 04:11 GMT
Photo source: PTI

ಹೊಸದಿಲ್ಲಿ, ಸೆ.25: ಸುಪ್ರೀಂಕೋರ್ಟ್‌ನ ಅಧಿಕೃತ ಇ-ಮೇಲ್‌ಗಳ ಫೂಟರ್ (ಕೆಳಭಾಗದಲ್ಲಿ)ನಿಂದ 'ಸಬ್‌ಕಾ ಸಾತ್ ಸಬ್‌ಕಾ ವಿಕಾಸ್' ಎಂಬ ಘೋಷಣೆಯೊಂದಿಗೆ ಮೋದಿ ಅವರ ಭಾವಚಿತ್ರವನ್ನು ತಕ್ಷಣ ಕಿತ್ತುಹಾಕುವಂತೆ ಸುಪ್ರೀಂ ಕೋರ್ಟ್, ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ (ಎನ್‌ಐಸಿ)ಗೆ ಆದೇಶ ನೀಡಿದೆ. ಇದರ ಬದಲಾಗಿ ದೇಶದ ಅತ್ಯುನ್ನತ ಕೋರ್ಟ್‌ನ ಚಿತ್ರವನ್ನು ಅಳವಡಿಸುವಂತೆ ಸೂಚಿಸಿದೆ.

ದೇಶದ ಸರ್ವೋಚ್ಚ ನ್ಯಾಯಾಲಯದ ಇ-ಮೇಲ್ ಸೇವೆಗಳನ್ನು ನಿರ್ವಹಿಸುತ್ತಿರುವ ಎನ್‌ಐಸಿ, ಕೋರ್ಟ್‌ನ ಗಮನಕ್ಕೆ ಬಾರದೇ ಈ ಸ್ಲೋಗನ್ ಮತ್ತು ಚಿತ್ರವನ್ನು ಇ-ಮೇಲ್‌ನ ತಳಭಾಗದಲ್ಲಿ ಬರುವಂತೆ ಸೇರಿಸಿತ್ತು ಎಂದು ಕೋರ್ಟ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

"ನಿನ್ನೆ ಸಂಜೆ ಭಾರತದ ಸುಪ್ರೀಂಕೋರ್ಟ್‌ನ ಅಧಿಕೃತ ಇ-ಮೇಲ್‌ಗಳ ಫೂಟರ್‌ನಲ್ಲಿ ನ್ಯಾಯಾಲಯದ ಕಾರ್ಯನಿರ್ವಹಣೆಗೆ ಸಂಬಂಧವೇ ಇಲ್ಲದ ಚಿತ್ರ ಇರುವುದು ಸುಪ್ರೀಂಕೋರ್ಟ್ ರಿಜಿಸ್ಟ್ರಿ ಗಮನಕ್ಕೆ ಬಂದಿದೆ" ಎಂದು ಅಧಿಕೃತ ಮೂಲಗಳು ಹೇಳಿವೆ.

ಸುಪ್ರೀಂಕೋರ್ಟ್‌ನಿಂದ ಮಾಡಲಾಗುವ ಇ-ಮೇಲ್‌ಗಳಲ್ಲಿ ಈ ಫೂಟರ್ ಅನ್ನು ತಕ್ಷಣವೇ ಕೈಬಿಡುವಂತೆ ಎನ್‌ಐಸಿಗೆ ಸೂಚನೆ ನೀಡಲಾಗಿದೆ. ಇದರ ಬದಲಿಗೆ ದೇಶದ ಅತ್ಯುನ್ನತ ಕೋರ್ಟ್‌ನ ಚಿತ್ರವನ್ನು ಹಾಕುವಂತೆ ಸೂಚಿಸಲಾಗಿದೆ. ಆ ಬಳಿಕ ಮೋದಿಯ ಚಿತ್ರವನ್ನು ಕಿತ್ತುಹಾಕಿ ಸುಪ್ರೀಂಕೋರ್ಟ್‌ನ ಚಿತ್ರವನ್ನು ಅಳವಡಿಸಿರುವ @sci.nic.in ಇ-ಮೇಲ್‌ನ ಸ್ಕ್ರೀನ್ ಶಾಟ್ ಅನ್ನು ಕೂಡಾ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News