ಗೋವಾದಲ್ಲಿ ಬಿಜೆಪಿ ಸೋಲಿಸಲು ಬಿರುಸಿನ ಪ್ರಚಾರ ಮಾಡಿ: ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ

Update: 2021-09-25 07:34 GMT

ಹೊಸದಿಲ್ಲಿ:ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾದಲ್ಲಿ ಆಡಳಿತಾರೂಢ ಬಿಜೆಪಿಯ ಸೋಲನ್ನು ಖಚಿತಪಡಿಸಿಕೊಳ್ಳಲು ಬಿರುಸಿನ ಪ್ರಚಾರ ಆರಂಭಿಸಲು ತಮ್ಮ ಪಕ್ಷದ ನಾಯಕರಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ.

ಶುಕ್ರವಾರ ಹೊಸದಿಲ್ಲಿಯಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಈ ನಿರ್ದೇಶನ ನೀಡಿದರು ಎಂದು ಕಾಂಗ್ರೆಸ್‌ನ ಗೋವಾ ರಾಜ್ಯದ ಉಸ್ತುವಾರಿ ದಿನೇಶ್ ಗುಂಡೂ ರಾವ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಗೋವಾ ವಿಧಾನಸಭಾ ಚುನಾವಣೆಗೆ ಪಕ್ಷದ ಹಿರಿಯ ಚುನಾವಣಾ ವೀಕ್ಷಕ ಪಿ. ಚಿದಂಬರಂ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ. ಸಿ. ವೇಣುಗೋಪಾಲ್, ಜಿಪಿಸಿಸಿ ಅಧ್ಯಕ್ಷ ಗಿರೀಶ್ ಚೋಡಂಕರ್ ಹಾಗೂ  ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ದಿಗಂಬರ್ ಕಾಮತ್ ಸಭೆಯಲ್ಲಿ ಭಾಗವಹಿಸಿದ್ದರು.

"ಗೋವಾದಲ್ಲಿ ಕಾಂಗ್ರೆಸ್ ಪಕ್ಷವು ಆಕಾಂಕ್ಷೆಗಳನ್ನು ಪೂರೈಸಬೇಕು ಹಾಗೂ ಗೋವಾ ಜನರ ಭಾವನೆಗಳನ್ನು ಗೌರವಿಸಬೇಕು ಎಂದು ನಮ್ಮ ನಾಯಕ ರಾಹುಲ್ ಗಾಂಧಿ  ಬಯಸುತ್ತಾರೆ’’ ಎಂದು ಸಭೆಯಲ್ಲಿ ಭಾಗವಹಿಸಿದ್ದ ದಿನೇಶ್ ಗುಂಡೂರಾವ್ ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿರುಸಿನ ಅಭಿಯಾನವನ್ನು ಆರಂಭಿಸಲು ಹಾಗೂ  ಬಿಜೆಪಿ ಸೋಲನ್ನು ಖಾತ್ರಿಪಡಿಸಿಕೊಳ್ಳಲು ರಾಹುಲ್ ಗಾಂಧಿ ಪಕ್ಷದ ನಾಯಕರನ್ನು ಆಗ್ರಹಿಸಿದರು.

2017 ರ   ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸದಸ್ಯರ ಸದನದಲ್ಲಿ 17 ಸ್ಥಾನಗಳನ್ನು ಗೆದ್ದುಕೊಂಡು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿಯನ್ನು 13 ಕ್ಕೆ ಸೀಮಿತಗೊಳಿಸಿತ್ತು. ಆದಾಗ್ಯೂ, ಕಾಂಗ್ರೆಸ್ ಅನ್ನು ಅಚ್ಚರಿಗೆ ಕೆಡವಿದ ಬಿಜೆಪಿ ಪಕ್ಷವು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತು. ಆ ನಂತರ ಕಾಂಗ್ರೆಸ್ ನ ಹಲವು ಶಾಸಕರು ಪಕ್ಷ ಬದಲಿಸಿ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News