ಚಾಮರಾಜಪೇಟೆಯ ಸಾಕ್ಷಿ ಸಾಧನೆ ಸ್ಫೂರ್ತಿದಾಯಕ: ಶಾಸಕ ಝಮೀರ್ ಅಹ್ಮದ್ ಖಾನ್

Update: 2021-09-25 11:58 GMT

ಬೆಂಗಳೂರು, ಸೆ.25: ಅಖಿಲ ಭಾರತ ಚಾರ್ಟೆಡ್ ಅಕೌಂಟೆಂಟ್(ಸಿಎ) ಅಂತಿಮ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿ ಮೂರನೆ ರ್‍ಯಾಂಕ್ ಪಡೆಯುವ ಮೂಲಕ ಚಾಮರಾಜಪೇಟೆಯ ಯುವತಿ ಸಾಕ್ಷಿ ಮಾಡಿರುವ ಸಾಧನೆಯೂ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಶನಿವಾರ ಚಾಮರಾಜಪೇಟೆಯಲ್ಲಿರುವ ಶಾಸಕರ ಕಚೇರಿ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಕ್ಷಿ ಅವರನ್ನು ಸನ್ಮಾನಿಸಿ, ವೈಯಕ್ತಿಕವಾಗಿ ಒಂದು ದ್ವಿಚಕ್ರ ವಾಹನವನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಂತೂ ಅವರ ಸಾಧನೆ ಅಪ್ರತಿಮವಾದದ್ದು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಸಮಾಜದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ. ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ಪೋಷಕರು ಹಾಗೂ ನೆರೆಹೊರೆಯವರು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಸಾಕ್ಷಿ ಮಾಡಿರುವ ಸಾಧನೆಯಿಂದ ನಮ್ಮ ಇಡೀ ರಾಜ್ಯಕ್ಕೆ ಗೌರವ ಬಂದಿದೆ. ಭವಿಷ್ಯದಲ್ಲಿ ಈಕೆ ಮತ್ತಷ್ಟು ಉತ್ತಮ ಸಾಧನೆಗಳನ್ನು ಮಾಡಲಿ. ಈ ಸಾಧನೆಯನ್ನು ನೋಡಿ ನನ್ನ ಕ್ಷೇತ್ರದ ಅಷ್ಟೇ ಅಲ್ಲ, ನಮ್ಮ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಸಾಧಕರಾಗಲಿ ಎಂದು ಝಮೀರ್ ಅಹ್ಮದ್ ಖಾನ್ ಹಾರೈಸಿದರು.

ಇದೇ ವೇಳೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.97 ಅಂಕಗಳನ್ನು ಪಡೆದ ಇಬ್ಬರು ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕ್ರಮವಾಗಿ 50 ಸಾವಿರ ರೂ. ಹಾಗೂ 30 ಸಾವಿರ ರೂ.ಗಳನ್ನು ಕೊಡುಗೆಯಾಗಿ ನೀಡಿದರು. ಅಲ್ಲದೆ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕ್ಷೇತ್ರದ ಇಬ್ಬರು ವಿಕಲಚೇತನರಿಗೆ ತ್ರಿಚಕ್ರ ವಾಹನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಅಯ್ಯೂಬ್ ಖಾನ್, ಕಾಂಗ್ರೆಸ್ ಮುಖಂಡರಾದ ಶಕೀಲ್ ನವಾಝ್, ಬಿ.ಕೆ.ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News