'ಭವಿಷ್ಯದ ಆಸ್ತಿ' ಎಂದು ಹೈಕೋರ್ಟ್ ಜಾಮೀನು ನೀಡಿದ್ದ ಅತ್ಯಾಚಾರ ಆರೋಪಿ ವಿದ್ಯಾರ್ಥಿಯನ್ನು ಉಚ್ಚಾಟಿಸಿದ ಐಐಟಿ

Update: 2021-09-25 13:03 GMT
Photo: The new indian express

ಗುವಾಹಟಿ: ಸಹ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿದ್ಯಾರ್ಥಿಯನ್ನು ಐಐಟಿ-ಗುವಾಹಟಿ (ಐಐಟಿ-ಜಿ) ಉಚ್ಚಾಟಿಸಿದೆ ಎಂದು Times of India ವರದಿ ಮಾಡಿದೆ.

ಆರೋಪಿ ವಿರುದ್ಧ ಮಾದರಿ ಶಿಕ್ಷೆಯನ್ನು ನೀಡುವ ವಿಚಾರದಲ್ಲಿ ಐಐಟಿ-ಜಿ ಸೆನೆಟ್ ಸರ್ವಾನುಮತ ನಿರ್ಧಾರ ತೆಗೆದುಕೊಂಡಿದ್ದು,  ಸಂಸ್ಥೆಯು ಕ್ಯಾಂಪಸ್‌ನಲ್ಲಿ ಮಹಿಳೆಯರ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದೆ.

 ಮಾರ್ಚ್ 28 ರಂದು ಸಂಸ್ಥೆಯ ಸಮಕಾಲೀನ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ  ಎಪ್ರಿಲ್ 3 ರಂದು 21 ವರ್ಷದ ಐಐಟಿ-ಜಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದರು. ತರುವಾಯ ಆರೋಪಿಯನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದರು.

ಆತ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ರಾಜ್ಯದ 'ಭವಿಷ್ಯದ ಆಸ್ತಿ' ಎಂದು ಉಲ್ಲೇಖಿಸಿದ ಗುವಾಹಟಿ ಹೈಕೋರ್ಟ್ ಈ ಹಿಂದೆ ಆರೋಪಿಗೆ ಜಾಮೀನು ನೀಡಿತ್ತು ಹಾಗೂ ಆತ ಸಾಕ್ಷ್ಯವನ್ನು ಹಾಳು ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿತ್ತು. ಅದೇ ಸಮಯದಲ್ಲಿ ಮೇಲ್ನೋಟಕ್ಕೆ ವಿದ್ಯಾರ್ಥಿ ಆರೋಪಿಯಾಗಿದ್ದಾನೆ ಎಂದು ನ್ಯಾಯಾಲಯ ಹೇಳಿತ್ತು.

ಸೆಪ್ಟೆಂಬರ್ 6 ರಂದು, ಐಐಟಿ-ಜಿ ನಿರ್ದೇಶಕರಾದ ಟಿಜಿ ಸೀತಾರಾಮ್ ಅವರ ಸಮ್ಮುಖದಲ್ಲಿ, ಸೆನೆಟ್ ನ ವಿಶೇಷ ಸಭೆಯನ್ನು ನಡೆಸಲಾಯಿತು. ಅಲ್ಲಿ ವಿದ್ಯಾರ್ಥಿಗಳ ಶಿಸ್ತಿನ ಸಮಿತಿ (ಎಸ್‌ಡಿಸಿ) ಸಭೆಯ ಅಂತಿಮ ಶಿಫಾರಸಿನಂತೆ ತಕ್ಷಣದಿಂದ ಜಾರಿಗೆ ಬರುವಂತೆ ಆರೋಪಿತ ವಿದ್ಯಾರ್ಥಿಯನ್ನು ಉಚ್ಚಾಟಿಸಲು ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News