ಜಾಮಿಯಾ ಮಿಲ್ಲಿಯಾ ನಡೆಸುವ ಕೋಚಿಂಗ್ ಅಕಾಡೆಮಿಯ 20 ವಿದ್ಯಾರ್ಥಿಗಳು ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆ

Update: 2021-09-25 12:21 GMT
File Photo: PTI

ಹೊಸದಿಲ್ಲಿ: ರಾಜಧಾನಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ 20 ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ (ಸಿವಿಲ್ ಸರ್ವಿಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.

"ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಸೆಂಟರ್ ಫಾರ್ ಕೋಚಿಂಗ್ ಎಂಡ್ ಕೆರಿಯರ್ ಪ್ಲಾನಿಂಗ್ ನಡೆಸುವ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ 15 ವಿದ್ಯಾರ್ಥಿಗಳು ದೇಶದ ಅತ್ಯಂತ ಪ್ರತಿಷ್ಠಿತ ಸಿವಿಲ್ ಸರ್ವಿಸಸ್‍ಗೆ ಆಯ್ಕೆಯಾಗಿದ್ದಾರೆ. ಜನವರಿ 2021ರಂದು ನಡೆದ ಮೇನ್ ಪರೀಕ್ಷೆ ಹಾಗೂ ನಂತರ ಆಗಸ್ಟ್ ಸೆಪ್ಟೆಂಬರ್ 2021ರಲ್ಲಿ ನಡೆದ ಪರ್ಸನಾಲಿಟಿ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳು ಹಾಜರಾಗಿದ್ದರು,'' ಎಂದು ಸಂಸ್ಥೆ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ ಎಂದು indianexpress.com ವರದಿ ಮಾಡಿದೆ.

"ಅಕಾಡೆಮಿಯ ಇನ್ನೂ 5 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಅವರಿಗೆ ಇಲ್ಲಿ ಕೇವಲ ಪರ್ಸನಾಲಿಟಿ ಪರೀಕ್ಷೆಗೆ ಕೋಚಿಂಗ್ ನೀಡಲಾಗಿತ್ತು,'' ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ಉಪಕುಲಪತಿ ನಜ್ಮಾ ಅಖ್ತರ್, ವಿದ್ಯಾರ್ಥಿಗಳ ಯಶಸ್ಸಿಗೆ ಸಹಕರಿಸಿದ ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅನುದಾನದೊಂದಿಗೆ ಕಾರ್ಯಾಚರಿಸುವ ಅಕಾಡೆಮಿಯು ಪರಿಶಿಷ್ಟ ಜಾತಿ, ವರ್ಗ, ಮಹಿಳೆಯರು ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ಕೋಚಿಂಗ್ ಒದಗಿಸುತ್ತದೆ.

ಅಖಿಲ ಭಾರತ ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ನಂತರ ಈ ಕೋಚಿಂಗ್‍ಗೆ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗುತ್ತದೆ. 2022 ಸಿವಿಲ್ ಸರ್ವಿಸಸ್ ಕೋಚಿಂಗ್ ಕಾರ್ಯಕ್ರಮಕ್ಕೆ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಅದು ವಿವಿಯ ವೆಬ್‍ಸೈಟ್‍ನಲ್ಲಿ ಲಭ್ಯವಿದೆ((jmicoe.ac.in). ಪರೀಕ್ಷೆಗಳು ಅಕ್ಟೋಬರ್ 20, 2021ರಂದು ಹತ್ತು ಕೇಂದ್ರಗಳಲ್ಲಿ ನಡೆಯಲಿವೆ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನಾಂಕವಾಗಿದೆ ಎಂದು ವಿವಿ ತಿಳಿಸಿದೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ದಿನದ 24 ಗಂಟೆಯೂ ಗ್ರಂಥಾಲಯ ಸೌಲಭ್ಯ, ಸಾಮಾನ್ಯ ವಿಷಯಗಳ ಕೋಚಿಂಗ್, ಕೆಲ ಐಚ್ಛಿಕ ವಿಷಯಗಳ ಕೋಚಿಂಗ್, ತಜ್ಞರಿಂದ ಭಾಷಣಗಳು, ಪರೀಕ್ಷೆಗಳು ಹಾಗು ಅಣಕು ಸಂದರ್ಶನಗಳ ಮೂಲಕ ತರಬೇತಿ ನೀಡಲಾಗುವುದು. ಹೊಸ ವಿದ್ಯಾರ್ಥಿಗಳು ಹಾಗೂ ಈಗಾಗಲೇ ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳ ನಡುವೆ ಸಂವಹನವನ್ನೂ ಏರ್ಪಡಿಸಲಾಗುತ್ತದೆ,'' ಎಂದು ವಿವಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News