ಬೆಂಗಳೂರು; ಪತ್ನಿಯ ಕೊಲೆ ಪ್ರಕರಣ: ಪತಿ ಸೆರೆ

Update: 2021-09-25 14:13 GMT

ಬೆಂಗಳೂರು, ಸೆ.25:  ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಆರೋಪ ಪ್ರಕರಣ ಸಂಬಂಧ ಪತಿಯನ್ನು ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನ್ನಪೂರ್ಣೇಶ್ವರಿ ನಗರದ ಕಾಂತರಾಜ್ ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಸೆ.22ರ ಸಂಜೆ ಪತ್ನಿ ರೂಪಾ(34) ಅವರ ಮೇಲೆ ಆರೋಪಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿದ್ದ ಎನ್ನಲಾಗಿದೆ. ಈ ಸಂಬಂಧ ದಾಖಲಾದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ವಿಚಾರಣೆಯಲ್ಲಿ ಕಾಂತರಾಜ್ ಪತ್ನಿಯನ್ನು ಕೊಲೆ ಮಾಡಲು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಲು ಸಂಚು ರೂಪಿಸಿರುವುದು ಪತ್ತೆಯಾಗಿದೆ. ಪತ್ನಿ ರೂಪಾ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ತೀವ್ರ ಖಿನ್ನೆತೆಗೆ ಒಳಾಗಾಗಿ ಆಕೆಯನ್ನು ಕೊಲೆ ಮಾಡಲು ಸಿನಿಮೀಯ ರೀತಿಯ ಸಂಚು ರೂಪಿಸಿದ್ದ.

ಅದರಂತೆ ಕೊಲೆ ಮಾಡಲು ಪ್ರವಾಸಕ್ಕೆ ಪತ್ನಿಯನ್ನು ಕರಾವಳಿ ಭಾಗಕ್ಕೆ ಕರೆದುಕೊಂಡು ಹೋಗಿದ್ದ. ಪ್ರಕೃತಿ ಸೌಂದರ್ಯ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದುಕೊಂಡು ಹೋಗಿ ನಂತರ ಕೆಳಗೆ ತಳ್ಳಿ ಕೊಲೆ ಮಾಡಲು ಮೂರು ದಿನಗಳ ಕಾಲ ಸಂಚು ಮಾಡಿದ್ದನಾದರೂ ಅದು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

ಬಳಿಕ ಸೆ.22ರಂದು ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಮನೆಪಾಠಕ್ಕಾಗಿ ಹೊರಹೋಗಿದ್ದ ಮಗ ಮನೆಗೆ ವಾಪಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಅನ್ನಪೂಣೇಶ್ವರಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ತಲೆಮರೆಸಿಕೊಂಡಿದ್ದ ಕಾಂತರಾಜ್ ನನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News