ನಮ್ಮ ವೈವಿಧ್ಯತೆಯು ನಮ್ಮ ಬಲಿಷ್ಠ ಪ್ರಜಾಪ್ರಭುತ್ವದ ಗುರುತು :ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರಧಾನಿ ಮೋದಿ

Update: 2021-09-25 17:50 GMT

ನ್ಯೂಯಾರ್ಕ್,ಸೆ.25: ವಿಶ್ವದಲ್ಲಿಂದು ಪ್ರತಿಗಾಮಿ ಚಿಂತನೆ ಮತ್ತು ಉಗ್ರವಾದದ ಅಪಾಯ ಹೆಚ್ಚುತ್ತಿದೆ ಎಂದು ಶನಿವಾರ ಇಲ್ಲಿ ಬೆಟ್ಟು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು,ಭೀತಿವಾದವನ್ನು ಹರಡಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಅಪ್ಘಾನಿಸ್ತಾನದ ನೆಲವು ಬಳಕೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಿದ ಮೋದಿ,ಪ್ರತಿಗಾಮಿ ಚಿಂತನೆ ಮತ್ತು ಉಗ್ರವಾದದ ಅಪಾಯ ಹೆಚ್ಚುತ್ತಿರುವ ಇಂದಿನ ಸ್ಥಿತಿಯಲ್ಲಿ ಇಡೀ ವಿಶ್ವವು ವಿಜ್ಞಾನಾಧಾರಿತ,ತಾರ್ಕಿಕ ಮತ್ತು ಪ್ರಗತಿಪರ ಚಿಂತನೆಯನ್ನು ಅಭಿವೃದ್ಧಿಯ ಬುನಾದಿಯನ್ನಾಗಿಸಬೇಕಿದೆ ಎಂದರು.

ಅಫ್ಘಾನಿಸ್ತಾನದಲ್ಲಿಯ ಸೂಕ್ಷ್ಮ ಪರಿಸ್ಥಿಯ ಲಾಭವನ್ನೆತ್ತಲು ಮತ್ತು ಅದನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯಾವುದೇ ರಾಷ್ಟ್ರವು ಪ್ರಯತ್ನಿಸದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಅವರು,ಮಹಿಳೆಯರು,ಮಕ್ಕಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅಫ್ಘಾನಿಸ್ತಾನದ ಜನರಿಗೆ ಅಗತ್ಯವಾಗಿರುವ ನೆರವನ್ನು ಒದಗಿಸುವ ಮೂಲಕ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿದೆ ಎಂದರು.

ಕಳೆದ 100 ವರ್ಷಗಳಲ್ಲಿಯೇ ಅತ್ಯಂತ ಭೀಕರ ಸಾಂಕ್ರಾಮಿಕವನ್ನು ವಿಶ್ವವು ಕಳೆದ ಒಂದೂವರೆ ವರ್ಷಗಳಿಂದ ಎದುರಿಸುತ್ತಿದೆ ಎಂದು ಹೇಳಿದ ಮೋದಿ,ಕೋವಿಡ್‌ಗೆ ಬಲಿಯಾದವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು ಮತ್ತು ಅವರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸಿದರು.

‘ಪ್ರಜಾಪ್ರಭುತ್ವದ ಮಾತೆ ’ಎಂಬ ಖ್ಯಾತಿಯ ಹೆಮ್ಮೆಯನ್ನು ಹೊಂದಿರುವ ದೇಶವನ್ನು ತಾನು ಪ್ರತಿನಿಧಿಸುತ್ತಿದ್ದೇನೆ ಎಂದು ಹೇಳಿದ ಅವರು,ಭಾರತದ ಪ್ರಜಾಪ್ರಭುತ್ವದ ಶಕ್ತಿಯನ್ನು ಬಿಂಬಿಸಲು ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟಗಾರನಾಗಿದ್ದ ತಾನು ದೇಶದ ಪ್ರಧಾನಿ ಹುದ್ದೆಗೆ ಏರಿದ್ದನ್ನು ಉಲ್ಲೇಖಿಸಿದರು.

‘ನಾವು ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರಜಾಪ್ರಭುತ್ವದ ಮಹಾನ್ ಸಂಪ್ರದಾಯವನ್ನು ಹೊಂದಿದ್ದೇವೆ ’ ಎಂದ ಮೋದಿ,‘ನಮ್ಮ ವೈವಿಧ್ಯತೆಯೇ ನಮ್ಮ ಬಲಿಷ್ಠ ಪ್ರಜಾಪ್ರಭುತ್ವದ ಗುರುತಾಗಿದೆ. ನಮ್ಮದು ಡಝನ್‌ಗಟ್ಟಲೆ ಭಾಷೆಗಳು,ನೂರಾರು ಉಪಭಾಷೆಗಳು,ವಿವಿಧ ಜೀವನಶೈಲಿಗಳು ಮತ್ತು ಆಹಾರಗಳನ್ನು ಹೊಂದಿರುವ ದೇಶವಾಗಿದೆ. ಅದು ಉಜ್ವಲ ಪ್ರಜಾಪ್ರಭುತ್ವದ ಅತ್ಯುತ್ತಮ ಉದಾಹರಣೆಯಾಗಿದೆ ’ಎಂದರು.

‘ಒಂದು ಕಾಲದಲ್ಲಿ ರೈಲ್ವೆ ನಿಲ್ದಾಣದಲ್ಲಿ ತನ್ನ ತಂದೆಗೆ ಚಹಾ ಮಾರಾಟದಲ್ಲಿ ನೆರವಾಗುತ್ತಿದ್ದ ಪುಟ್ಟ ಬಾಲಕ ಇಂದು ಭಾರತದ ಪ್ರಧಾನಿಯಾಗಿ ನಾಲ್ಕನೇ ಸಲ ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾತನಾಡುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ತಾಕತ್ತನ್ನು ತೋರಿಸುತ್ತಿದೆ ’ ಎಂದ ಮೋದಿ,‘ಗುಜರಾತ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾಗಿ ಹೀಗೆ ಸರಕಾರದ ಮುಖ್ಯಸ್ಥನಾಗಿ ನನ್ನ ದೇಶದ ಜನರಿಗೆ ಸೇವೆಯ 20 ವರ್ಷಗಳನ್ನು ಶೀಘ್ರವೇ ಪೂರ್ಣಗೊಳಿಸಲಿದ್ದೇನೆ ’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News