ಭಾರತದ ಹಲವು ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ಸೌಲಭ್ಯದ ಕೊರತೆ: ನಿರ್ಮಲಾ ಕಳವಳ

Update: 2021-09-26 18:34 GMT

ಹೊಸದಿಲ್ಲಿ,ಸೆ. 27: ಉನ್ನತ ಮಟ್ಟದ ಆರ್ಥಿಕ ಚಟುವಟಿಕೆಗಳು ನಡೆಯುತ್ತಿರುವುದರ ಹೊರತಾಗಿಯೂ ಭಾರತದ ಹಲವಾರು ಜಿಲ್ಲೆಗಳು ಬ್ಯಾಂಕಿಂಗ್ ಸೌಲಭ್ಯದ ಕೊರತೆಯನ್ನು ಎದುರಿಸುತ್ತಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸದಿಲ್ಲಿಯಲ್ಲಿ ರವಿವಾರ ಭಾರತೀಯ ಬ್ಯಾಂಕುಗಳ ಸಂಘದ 74ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಬ್ಯಾಂಕಿಂಗ್ನ ಸೌಕರ್ಯಗಳ ಕೊರತೆಯಿರುವ ಸ್ಥಳಗಳಲ್ಲಿ ತಮ್ಮ ಉಪಸ್ಥಿತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆಂದು ಕರೆ ನೀಡಿದರು. ಬ್ಯಾಂಕುಗಳ ಭೌತಿಕ ಉಪಸ್ಥಿತಿಯ ಕೊರೆತೆಯಿರುವ ಸ್ಥಳದಲ್ಲಿ ಡಿಜಿಟಲ್ ವ್ಯವಸ್ಥೆಯ ಮೂಲಕ ಹಣಕಾಸು ವಹಿವಾಟುಗಳನ್ನು ನಡೆಸುವುದಕ್ಕೆ ಒತ್ತು ನೀಡಬೇಕೆಂದು ಅವರು ತಿಳಿಸಿದರು. ಭಾರತದ ಮೂರನೇ ಎರಡಂಶದಷ್ಟು ಗ್ರಾಮಪಂಚಾಯತ್ ಗಳು ಆಪ್ಟಿಕ್ ಫೈಬರ್ ಜಾಲದ ಮೂಲಕ ಸಂಪರ್ಕಿಸಲ್ಪಟ್ಟಿವೆ . ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ತಮ್ಮ ಹಣಕಾಸು ವ್ಯವಹಾರಗಳನ್ನು ಡಿಜಿಟಲೀಕರಣದ ಮೂಲಕ ನಡೆಸುವುದಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದವರು ಹೇಳಿದರು

ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯ ಬಳಿಕ ಭಾರತೀಯ ಹಣಕಾಸು ಸಂಸ್ಥೆಗಳು ಇತರ ಹಲವಾರು ರಾಷ್ಟ್ರಗಳಿಗಿಂತಲೂ ಹೆಚ್ಚು ವೇಗವಾಗಿ ಡಿಜಿಟಲೀಕರಣವನ್ನು ಅಳವಡಿಸಿಕೊಂಡಿವೆಯೆಂದು ಸೀತಾರಾಮನ್ ಅಭಿಪ್ರಾಯಿಸಿದರು. ಆದರೆ ಈ ವಲಯದಲ್ಲಿ ಮುಂದಿರುವ ಸವಾಲುಗಳನ್ನು ಎದುರಿಸಲು ಭಾರತೀಯ ಸ್ಟೇಟ್ ಬ್ಯಾಂಕ್ಗೆ ಸಮಾನವಾದ ಗಾತ್ರದ ಕನಿಷ್ಠ ನಾಲ್ಕೈದು ಬ್ಯಾಂಕುಗಳ ಅಗತ್ಯವಿದೆ ಎಂದವ ಸೀತಾರಾಮನ್ ಅಭಿಪ್ರಾಯಿಸಿದರು.

ಆರ್ಥಿಕತೆ ಹಾಗೂ ಕೈಗಾರಿಕಾ ಕ್ಷೇತ್ರದ ವಾಸ್ತವ ಸನ್ನಿವೇಶಗಳು ಬದಲಾಗುತ್ತಲೇ ಇರುವ ಈ ಸಂದರ್ಭದಲ್ಲಿ ಅವಶ್ಯಕತೆಗಳು ಕೂಡಾ ಬದಲಾಗುತ್ತಿದ್ದು, ಅವುಗಳಿಗೆ ಸ್ಪಂದಿಸಲು ಬ್ಯಾಂಕಿಂಗ್ ಚಟುವಟಿಕೆಯನ್ನು ಹೆಚ್ಚಿಸಬೇಕಾಗಿದೆ ಎಂದು ನಿರ್ಮಲಾ ಅಭಿಪ್ರಾಯಿಸಿದರು.

ಅಮೆರಿಕದಲ್ಲಿರುವಂತೆ ರಾಷ್ಟ್ರೀಯ ಆಸ್ತಿ ಪುನಾರಚನಾ ಕಂಪೆನಿಯನ್ನು ಬ್ಯಾಡ್ ಬ್ಯಾಂಕ್ ಎಂದು ಕರೆಯುವುದು ಸಮಂಜಸವಲ್ಲ. ಯಾಕೆಂದರೆ ಅದೊಂದು ಸಂಪತ್ತು ಕ್ರೋಢೀಕರಣ ಸಂಸ್ಥೆಯಾಗಿದೆ ಎಂದು ಸೀತಾರಾಮನ್ ಹೇಳಿದರು.

ಬ್ಯಾಡ್ ಬ್ಯಾಂಕ್ ಎಂದೇ ಬಣ್ಣಿಸಲ್ಪಡುವ ರಾಷ್ಟ್ರೀಯ ಆಸ್ತಿ ಪುನಾರಚನಾ ಕಂಪೆನಿಯನ್ನು ಸ್ಥಾಪಿಸಲಾಗುವುದೆಂದು ನಿರ್ಮಲಾ ಸೀತಾರಾಮನ್ ಅವರು ಸೆಪ್ಟೆಂಬರ್ 16ರಂದು ಘೋಷಿಸಿದ್ದರು. ದೇಶದ ಬ್ಯಾಂಕುಗಳಿಂದ ವಸೂಲಿಯಾಗದ ಸಾಲಗಳನ್ನು ಖರೀದಿಸುವ ಮೂಲಕ ಬ್ಯಾಂಕುಗಳನ್ನು ನಷ್ಟದಿಂದ ಪಾರು ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News