ನ್ಯಾಯಾಲಯದೊಳಗೆ ನ್ಯಾಯ ಲಯವಾಗದಿರಲಿ

Update: 2021-09-29 05:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬೀದಿಯಲ್ಲಿ ನಡೆದ ಗ್ಯಾಂಗ್‌ವಾರ್‌ಗಳ ಗತಿಯನ್ನು ನ್ಯಾಯಾಲಯ ಇತ್ಯರ್ಥ ಪಡಿಸುವ ಕಾಲವೊಂದಿತ್ತು. ದುರದೃಷ್ಟವಶಾತ್ ಇಂದು ಬೀದಿಯಲ್ಲಿ ನಡೆಯಬೇಕಾದ ಗ್ಯಾಂಗ್‌ವಾರ್‌ಗಳು ನ್ಯಾಯಾಲಯದೊಳಗೇ ನಡೆಯುತ್ತಿವೆ. ಎಲ್ಲ ಭದ್ರತೆಗಳನ್ನು ಮೀರಿ ನ್ಯಾಯಾಲಯದೊಳಗೇ ನುಗ್ಗಿ ರೌಡಿಗಳು ತಮ್ಮ ಎದುರಾಳಿಗಳಿಗೆ ಗತಿ ಕಾಣಿಸುತ್ತಿದ್ದಾರೆ. ಹೀಗಾದಲ್ಲಿ, ಬೀದಿಯಲ್ಲಿರುವ ಜನಸಾಮಾನ್ಯರ ಬದುಕಿಗೆ ನಮ್ಮ ನ್ಯಾಯ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಎಷ್ಟರಮಟ್ಟಿಗೆ ಭದ್ರತೆಯನ್ನು ನೀಡಬಹುದು? ಉತ್ತರ ದಿಲ್ಲಿಯ ರೋಹಿಣಿ ನ್ಯಾಯಾಲಯದಲ್ಲಿ ನಡೆದ ಗ್ಯಾಂಗ್‌ವಾರ್ ಮತ್ತು ಮೂವರು ರೌಡಿಗಳ ಕಗ್ಗೊಲೆಗಳು ಶ್ರೀಸಾಮಾನ್ಯರನ್ನು ಈ ಪ್ರಶ್ನೆ ಕೇಳುವಂತೆ ಮಾಡಿವೆೆ. ಕಳೆದ ಶುಕ್ರವಾರ ನ್ಯಾಯಾಲಯದೊಳಗೆಯೇ ಕುಖ್ಯಾತ ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿ ಎಂಬಾತನನ್ನು ಆತನ ಎದುರಾಳಿ ತಂಡದ ಗೂಂಡಾಗಳು ಕೊಂದು ಹಾಕಿದರು. ಇಬ್ಬರು ಹಂತಕರು ಬಳಿಕ ಪೊಲೀಸ್ ಗುಂಡಿಗೆ ಬಲಿಯಾದರು. ಭದ್ರತೆಯ ಲೋಪವನ್ನು ಬಳಸಿಕೊಂಡು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ಪ್ರಕರಣವನ್ನು ವಿಶ್ಲೇಷಿಸಲಾಯಿತು. ಸತ್ತವನು ಕುಖ್ಯಾತ ಗೂಂಡಾ ಆಗಿದ್ದುದರಿಂದ, ಕೊಂದು ಪೊಲೀಸರ ಕೈಯಿಂದ ಹತರಾದವರೂ ರೌಡಿಗಳಾಗಿರುವುದರಿಂದ ಮಾಧ್ಯಮಗಳು ಮೃತರ ಕುರಿತಂತೆ ವಿಶೇಷ ಕಾಳಜಿಯನ್ನೇನೂ ವ್ಯಕ್ತಪಡಿಸಲಿಲ್ಲ. ‘ದುಷ್ಟರಿಗೆ ಸರಿಯಾದ ಶಾಸ್ತಿಯಾಯಿತು’ ಎಂಬಂತೆ ಸಾರ್ವಜನಿಕರು ಈ ಪ್ರಕರಣವನ್ನೂ ಸ್ವೀಕರಿಸಿದ್ದಾರೆ.

ಜಿತೇಂದ್ರ ಗೋಗಿಯ ಪ್ರಕರಣಗಳನ್ನು ವಿಚಾರಣೆ ನಡೆಸಿ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕಾದ ಹೊಣೆಗಾರಿಕೆ ನ್ಯಾಯಾಧೀಶರಿಗೆ ಸೇರಿದ್ದು. ಆದರೆ, ಇಂದು ನ್ಯಾಯಾಲಯದೊಳಗೇ ಪೊಲೀಸರ ಸಮ್ಮುಖದಲ್ಲೇ ಗ್ಯಾಂಗ್‌ಸ್ಟರ್‌ಗಳು ನ್ಯಾಯಾಧೀಶರ ಪಾತ್ರವನ್ನು ವಹಿಸುತ್ತಿದ್ದಾರೆ. ಸತ್ತಿರುವುದು ರೌಡಿಗಳೆಂದು ನಾವು ಸುಮ್ಮನೆ ಇದ್ದಲ್ಲಿ, ನಾವು ತೀರ್ಪು ನೀಡುವ ಹೊಣೆಗಾರಿಕೆಯನ್ನೂ ರೌಡಿಗಳಿಗೇ ಬಿಟ್ಟಂತಾಗುತ್ತದೆ. ಇಂದು ನ್ಯಾಯಾಲಯಕ್ಕೆ ನುಗ್ಗಿ ರೌಡಿಯನ್ನು ಕೊಂದವರು ನಾಳೆ, ಸಜ್ಜನರನ್ನೂ ಕೊಲ್ಲಬಹುದು. ಆದುದರಿಂದಲೇ ಆ ಕಗ್ಗೊಲೆಯನ್ನು ನಾವು ಒಕ್ಕೊರಲಲ್ಲಿ ಖಂಡಿಸಬೇಕು ಮಾತ್ರವಲ್ಲ, ನ್ಯಾಯಾಲಯದೊಳಗೆ ಇಂತಹದೊಂದು ದುರಂತಕ್ಕೆ ಕಾರಣವಾದ ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ಪ್ರಶ್ನಿಸಬೇಕಾಗಿದೆ. ಹಾಗೆಯೇ ಈ ಪ್ರಕರಣದಲ್ಲಿ ಪೊಲೀಸರು ಮತ್ತು ವಕೀಲರ ಪಾತ್ರಗಳೇನು ಎನ್ನುವುದನ್ನು ಗಂಭೀರವಾಗಿ ತನಿಖೆಗೊಳಪಡಿಸಬೇಕಾಗಿದೆ. ನ್ಯಾಯಾಲಯದೊಳಗೆ ನುಗ್ಗಿ ಗ್ಯಾಂಗ್‌ಸ್ಟರ್‌ನನ್ನು ಕೊಂದು ಹಾಕಬೇಕಾದರೆ ಅದಕ್ಕಾಗಿ ಸಾಕಷ್ಟು ತಯಾರಿ ನಡೆದಿರಬೇಕಾಗುತ್ತದೆ. ಒಳಗಿನವರ ಸಹಕಾರವಿಲ್ಲದೆ, ಹೊರಗಿನಿಂದ ಗೂಂಡಾಗಳು, ವಕೀಲರ ವೇಷದಲ್ಲಿ ಬಂದು ದಾಳಿ ನಡೆಸುವುದು ಕಷ್ಟ. ಇಂದಿನ ದಿನಗಳಲ್ಲಿ ಕ್ರಿಮಿನಲ್‌ಗಳ ಜೊತೆಗೆ ಲಾಯರ್‌ಗಳಿಗೆ ಮತ್ತು ಪೊಲೀಸರಿಗೆ ಇರುವ ಸಂಬಂಧ ಗುಟ್ಟಾಗಿಯೇನೂ ಇಲ್ಲ. ಈ ಕಾರಣದಿಂದ, ಅಂದು ನ್ಯಾಯಾಲಯದೊಳಗೆ ನಡೆದ ಕೃತ್ಯಕ್ಕೆ ಪೊಲೀಸ್ ಇಲಾಖೆಯಿಂದ ಅಥವಾ ನ್ಯಾಯವಾದಿಗಳಿಂದ ದುಷ್ಕರ್ಮಿಗಳಿಗೆ ಸಹಕಾರ ದೊರಕಿದೆಯೇ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಯಬೇಕು. ನ್ಯಾಯ ವ್ಯವಸ್ಥೆಯ ಭದ್ರತೆಯ ದೃಷ್ಟಿಯಿಂದ ಸ್ವತಂತ್ರ ತನಿಖಾ ಸಂಸ್ಥೆಯೊಂದು ಈ ತನಿಖೆಯನ್ನು ನಡೆಸುವ ಅಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿ ಜನಸಾಮಾನ್ಯರಲ್ಲಿ ಮಾತ್ರವಲ್ಲ, ನ್ಯಾಯವಾದಿಗಳಲ್ಲಿ ಮತ್ತು ಪೊಲೀಸರಲ್ಲೂ ಕಾಣಿಸಿಕೊಳ್ಳುತ್ತಿದೆ. ಕನ್ಹಯ್ಯ ಕುಮಾರ್ ಪ್ರಕರಣದಲ್ಲಿ ನ್ಯಾಯವಾದಿಗಳೆಂದು ಕರೆಸಿಕೊಂಡು ಕೋರ್ಟ್ ಆವರಣದಲ್ಲೇ ಅವರ ಮೇಲೆ ಹೇಗೆ ದಾಳಿ ನಡೆಸಿದರು ಎನ್ನುವ ಉದಾಹರಣೆ ನಮ್ಮ ಮುಂದಿದೆ. ಧಾರ್ಮಿಕ ನಿಂದನೆಯ ಆರೋಪ ಹೊತ್ತ ಪ್ರಗತಿಪರ ಚಿಂತಕರೊಬ್ಬರ ಮೇಲೆ ನ್ಯಾಯವಾದಿಯೊಬ್ಬರು ನ್ಯಾಯಾಲಯದ ಆವರಣದಲ್ಲೇ ದಾಳಿ ನಡೆಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆಯಿತು ಮತ್ತು ನ್ಯಾಯವಾದಿ ಅದನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಂಡರು. ಕರಾವಳಿಯಲ್ಲಿ ಗೋ ಸಾಗಣೆಯ ಆರೋಪದಲ್ಲಿ ವ್ಯಾಪಾರಿಯೊಬ್ಬರನ್ನು ಥಳಿಸಿ ಕೊಂದ ಪ್ರಕರಣದಲ್ಲಿ ಸಂಘಪರಿವಾರದ ಜೊತೆಗೆ ಪೊಲೀಸರೂ ಸೇರಿಕೊಂಡದ್ದು ನಮ್ಮ ಮುಂದೆ ಹಸಿಯಾಗಿಯೇ ಇದೆ. 2012ರಲ್ಲಿ ಬೆಂಗಳೂರಿನ ನ್ಯಾಯಾಲಯದಲ್ಲಿ ನ್ಯಾಯವಾದಿಗಳೇ ಗೂಂಡಾಗಳಂತೆ ಕಾನೂನು ಕೈಗೆತ್ತಿಕೊಂಡದ್ದು, ಪೊಲೀಸರು ಮತ್ತು ಪತ್ರಕರ್ತರ ಮೇಲೆ ಎರಗಿದ್ದನ್ನೂ ಇಲ್ಲಿ ನಾವು ಸ್ಮರಿಸಬಹುದು. ಕ್ರಿಮಿನಲ್‌ಗಳ ಜೊತೆಗಿನ ಸಹವಾಸ ನಿಧಾನಕ್ಕೆ ನ್ಯಾಯವಾದಿಗಳನ್ನು ಕ್ರಿಮಿನಲ್ ಮನಸ್ಥಿತಿಗೆ ದೂಡುತ್ತಿದೆಯೇ? ಎನ್ನುವ ಆತಂಕ ಸಂವಿಧಾನ ತಜ್ಞರನ್ನು ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ತೀರ್ಪು ನೀಡುವುದಕ್ಕಾಗಿ ನ್ಯಾಯಾಧೀಶರನ್ನು ಹೊರಗಿಟ್ಟು ನ್ಯಾಯವಾದಿಗಳು ಮತ್ತು ಪೊಲೀಸರು ಪರಸ್ಪರ ಕೈಜೋಡಿಸುವ ಉದಾಹರಣೆಗಳೂ ಇವೆ. ಹೆಚ್ಚಿನ ಎನ್‌ಕೌಂಟರ್‌ಗಳು ನಡೆಯುವುದು ಇಂತಹ ಅನೈತಿಕ ಸಮಾಗಮದಲ್ಲೇ.

ಹುಬ್ಬಳ್ಳಿಯ ನ್ಯಾಯಾಲಯದ ಮೇಲೆ ದುಷ್ಕರ್ಮಿಗಳು ಸ್ಫೋಟಕಗಳನ್ನು ಎಸೆದ ಪ್ರಕರಣವನ್ನು ನೆನಪಿಸಿಕೊಳ್ಳೋಣ. ಆರಂಭದಲ್ಲಿ ಈ ಪ್ರಕರಣದ ಹಿಂದೆ ಮುಸ್ಲಿಮ್ ಉಗ್ರ ಸಂಘಟನೆಗಳಿವೆ ಎಂದು ಪತ್ರಿಕೆಗಳು ವ್ಯಾಪಕವಾಗಿ ಪ್ರಚಾರ ನಡೆಸಿದವು. ಆದರೆ ಬಳಿಕ ರಾಮಸೇನೆಯಲ್ಲಿ ಕಾರ್ಯಕರ್ತರಾಗಿದ್ದರು ಎನ್ನಲಾದ ಹಲವರನ್ನು ಪೊಲೀಸರು ಬಂಧಿಸಿದರು. ಇವರು ನ್ಯಾಯಾಲಯದೊಳಗೆ ಸ್ಫೋಟಕ ಎಸೆದಿರುವುದು ಮಾತ್ರವಲ್ಲ, ಹಲವು ಹೆದ್ದಾರಿ ದರೋಡೆ, ಕೊಲೆ ಪ್ರಕರಣದಲ್ಲೂ ಗುರುತಿಸಿಕೊಂಡಿದ್ದರು. ಇವರಲ್ಲೊಬ್ಬ ಪ್ರಮುಖ ಆರೋಪಿ ಜಂಬಗಿ. ಈತನ ಕೂಲಂಕಷ ವಿಚಾರಣೆ ನಡೆದಿದ್ದೇ ಆಗಿದ್ದರೆ ಹಲವು ಉಗ್ರ ಚಟುವಟಿಕೆಗಳು ಹೊರಬರುತ್ತಿದ್ದವು. ಜೊತೆಗೆ ಅದರ ಹಿಂದಿದ್ದ ಸಂಘಪರಿವಾರದ ಒಬ್ಬ ಕುಖ್ಯಾತ ಮುಖಂಡನೂ ಜೈಲು ಸೇರಬೇಕಾಗುತ್ತಿತ್ತೇನೋ. ಜೈಲು ಪಾಲಾದ ಕೆಲವೇ ತಿಂಗಳಲ್ಲಿ ಸಹವರ್ತಿಗಳೇ ಜಂಬಗಿಯನ್ನು ಕೊಂದು ಹಾಕಿದರು. ಇಲ್ಲಿ, ಕೊಂದು ಹಾಕಿದವರಿಗೆ ಶಿಕ್ಷೆಯಾಯಿತೇ ಹೊರತು, ಜೈಲಿನೊಳಗೆ ಒಬ್ಬ ಅಪರಾಧಿಯನ್ನು ಕೊಲ್ಲುವುದಕ್ಕೆ ವಾತಾವರಣ ನಿರ್ಮಾಣ ಮಾಡಿಕೊಟ್ಟವರು ಬಚಾವಾದರು.

ರಾಜ್ಯದಲ್ಲಿ ಮಾತ್ರವಲ್ಲ, ದೇಶಾದ್ಯಂತ ಗ್ಯಾಂಗ್ ಸ್ಟರ್‌ಗಳು ತಮ್ಮ ಎದುರಾಳಿಯನ್ನು ಕೊಂದು ಹಾಕಲು ಜೈಲುಗಳನ್ನೇ ಬಳಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಈಗ ನ್ಯಾಯಾಲಯವನ್ನೂ ಬಳಸುವ ಧೈರ್ಯವನ್ನು ತೋರಿಸುವ ಹಂತಕ್ಕೆ ಪಾತಕಿಗಳು ಬಂದಿದ್ದಾರೆ. ಹಾಗೆಯೇ ತಮಗಾಗದ ಭೂಗತಪಾತಕಿಗಳನ್ನು ಕೊಂದು ಹಾಕಲು ಭೂಗತ ಪಾತಕಿಗಳು ಪೊಲೀಸರನ್ನೇ ಬಳಸಿದ್ದ ಉದಾಹರಣೆಗಳಿವೆ. ಗ್ಯಾಂಗ್‌ವಾರ್‌ಗಳ ಬದಲಿಗೆ ಪೊಲೀಸ್ ಎನ್‌ಕೌಂಟರ್‌ಗಳ ಮೂಲಕವೇ ಎದುರಾಳಿಯನ್ನು ಮುಗಿಸುವ ಯೋಜನೆಗಳನ್ನು ಭೂಗತ ಪಾತಕಿಗಳು ರೂಪಿಸಿದ್ದು ಬೆಳಕಿಗೆ ಬಂದಿವೆ. ದಾಖಲೆ ಎನ್‌ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನೂ ಎದುರಿಸಿದ್ದಾರೆ. ಸಾರ್ವಜನಿಕ ಅಥವಾ ರಾಜಕೀಯ ಒತ್ತಡಗಳಿದ್ದಾಗಲೂ ಪೊಲೀಸರಿಂದ ಇಂತಹ ನಕಲಿ ಎನ್‌ಕೌಂಟರ್ ನಡೆಯುವುದಿದೆ. ಪೊಲೀಸರು ಸಾರ್ವಜನಿಕವಾಗಿ ಹೀರೋ ಆಗುತ್ತಾರೆ. ಆದರೆ ಇಂತಹ ‘ನ್ಯಾಯ’ ಸಮಾಜದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಇಂದು ರೌಡಿಯನ್ನು ಕೊಂದ ಪೊಲೀಸರು, ನಾಳೆ ಒಬ್ಬ ಶ್ರೀಸಾಮಾನ್ಯನನ್ನು ಕೊಂದು ಹಾಕಿ ಆತನ ತಲೆಗೆ ಕ್ರಿಮಿನಲ್ ಪಟ್ಟವನ್ನು ಹೊರಿಸಬಹುದು. ಹಾಗೆಯೇ, ಜೈಲು, ನ್ಯಾಯಾಲಯಕ್ಕೆ ನುಗ್ಗಲು ಧೈರ್ಯ ತೋರಿದ ಕ್ರಿಮಿನಲ್‌ಗಳು ನಾಳೆ ಸಂಸತ್ತಿನೊಳಗೂ ನುಗ್ಗಿ ಕೊಲೆಯನ್ನು ಮಾಡಬಹುದು. ಯಾಕೆಂದರೆ, ಈಗಾಗಲೇ ಸಂಸತ್ತಿನೊಳಗೆ ಕ್ರಿಮಿನಲ್ ಆರೋಪಗಳನ್ನು ಹೊತ್ತ ಹಲವು ನಾಯಕರುಗಳಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ಸಂಸ್ಥೆಗಳನ್ನು ಬಳಸಿಕೊಂಡು ರೌಡಿಗಳು, ಭೂಗತ ಪಾತಕಿಗಳು ಕೃತ್ಯವೆಸಗುವ ಪ್ರವೃತ್ತಿ ಹೆಚ್ಚುತ್ತಿರುವುದು, ಪ್ರಜಾಸತ್ತೆಯ ವೈಫಲ್ಯವಾಗಿದೆ. ಇದನ್ನು ಇನ್ನಾದರೂ ಗಂಭೀರವಾಗಿ ತೆಗೆದುಕೊಳ್ಳದೇ ಇದ್ದರೆ, ಮುಂದಿನ ದಿನಗಳಲ್ಲಿ ನ್ಯಾಯಪೀಠದಲ್ಲಿ ಕೂತು ನ್ಯಾಯಾಧೀಶರೊಬ್ಬರು ಸಂವಿಧಾನ ಬದ್ಧವಾಗಿ ತೀರ್ಪು ನೀಡುವುದು ಕಷ್ಟವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News