ಸುಪ್ರೀಂಕೋರ್ಟ್ ಪ್ರಶ್ನಿಸಬೇಕಾದದ್ದು ರೈತರನ್ನಲ್ಲ, ಕೇಂದ್ರ ಸರಕಾರವನ್ನು

Update: 2021-10-02 05:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಲವು ತಂತ್ರಗಳ ಮೂಲಕ ರೈತರ ಪ್ರತಿಭಟನೆಯನ್ನು ದಮನಿಸಲು ಕೇಂದ್ರ ಸರಕಾರ ಯತ್ನಿಸಿ ವಿಫಲವಾಗಿರುವುದು ಇತಿಹಾಸ. ಪೊಲೀಸರ ಲಾಠಿಯನ್ನು ಬಳಸಿತು. ಉಗ್ರಗಾಮಿಗಳು ಎಂದು ಬಿಂಬಿಸಲು ಯತ್ನಿಸಿತು. ಜನಸಾಮಾನ್ಯರನ್ನೇ ಅವರ ವಿರುದ್ಧ ಎತ್ತಿ ಕಟ್ಟಲು ಯತ್ನಿಸಿತು. ರಸ್ತೆಯ ಮಧ್ಯೆ ಮುಳ್ಳುಗಳನ್ನು ನೆಟ್ಟಿತು. ಇವೆಲ್ಲ ಫಲಿಸದೇ ಇದ್ದಾಗ, ಸುಪ್ರೀಂಕೋರ್ಟ್‌ನ್ನು ಬಳಸಿಕೊಂಡು ರೈತರನ್ನು ಎಬ್ಬಿಸುವ ಪ್ರಯತ್ನ ನಡೆಸಿತು. ಆದರೆ ಅದಾಗಲೇ ದೇಶಾದ್ಯಂತ ಆಳವಾಗಿ ಬೇರು ಬಿಟ್ಟಿದ್ದ ರೈತರ ಪ್ರತಿಭಟನೆಯ ವಿರುದ್ಧ ಏಕಾಏಕಿ ತೀರ್ಪನ್ನು ನೀಡುವುದಕ್ಕೆ ಸುಪ್ರೀಂಕೋರ್ಟ್ ಹಿಂದೇಟು ಹಾಕಿತು. ಮೊದಲು ಸರಕಾರಕ್ಕೆ ಬೈದಂತೆ ಮಾಡಿತು. ಆ ಬಳಿಕ, ರ್ವಜನಿಕರಿಗೆ ತೊಂದರೆ ಮಾಡುವುದು ಸಲ್ಲ ಎಂದು ಬುದ್ಧಿ ಮಾತು ಹೇಳಿತು. 'ರಸ್ತೆಯಿಂದ ಎದ್ದೇಳಿ, ನಾನು ವಿಚಾರಿಸಿಕೊಳ್ಳುವೆ' ಎಂದು ಸಲಹೆ ನೀಡಿತು. ಆದರೆ ರೈತರು ಇದಾವುದಕ್ಕೂ ಕಿವಿಕೊಡಲಿಲ್ಲ. ಅಂತಿಮವಾಗಿ ಬಿಕ್ಕಟ್ಟು ಶಮನಕ್ಕೆ ಸುಪ್ರೀಂಕೋರ್ಟ್ ಸಮಿತಿಯೊಂದನ್ನು ನೇಮಿಸಿತು. ಈ ಸಮಿತಿಯ ವಿರುದ್ಧವೂ ರೈತರು ತೀವ್ರ ಅವಿಶ್ವಾಸ ವ್ಯಕ್ತಪಡಿಸಿದರು. ಇದೀಗ ಸಮಿತಿಯು ಒಂದು ವರದಿಯನ್ನು ಸಿದ್ಧ ಪಡಿಸಿ ಸುಪ್ರೀಂಕೋರ್ಟ್‌ಗೆ ನೀಡಿದೆ.

ಸಮಿತಿಯ ವರದಿ ನೂರಕ್ಕೆ ನೂರು ರೈತರ ಪರವಾಗಿದೆ ಎಂಬ ಬೆಣ್ಣೆಯನ್ನು ಸಮಿತಿ ಸದಸ್ಯರೊಬ್ಬರು ಈಗಾಗಲೇ ಸೋರಿಕೆ ಮಾಡಿದ್ದಾರೆ. ಇನ್ನೇನು ಈ ವರದಿಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡುವ ದಿನಗಳು ಹತ್ತಿರ ಬರುತ್ತಿವೆ. ಇಂತಹ ಹೊತ್ತಿನಲ್ಲೇ ಸುಪ್ರೀಂಕೋರ್ಟ್ ದಿಲ್ಲಿಯ ಹೊರಗಡೆ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರತಿಭಟನೆಯಿಂದಾಗಿ ತನಗೆ ಸಮಸ್ಯೆಯಾಗುತ್ತಿದೆ ಎಂದು ನೊಯ್ಡಿ ನಿವಾಸಿಯೊಬ್ಬರು ಮೊರೆ ಹೋದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್, ರೈತರಿಗೆ ಮಾನವೀಯ ಪಾಠವನ್ನು ಮಾಡಲು ಮುಂದಾಗಿದೆ. ಅರ್ಜಿದಾರರು ''ನೊಯ್ಡೆದಿಂದ ದಿಲ್ಲಿಗೆ ಪ್ರಯಾಣಿಸುವಾಗ ಪ್ರತಿಭಟನೆಯಿಂದಾಗಿ ನಾನು ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಕೇವಲ 20 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದ ಮಾರ್ಗವನ್ನು ಕ್ರಮಿಸಲು ಎರಡು ಗಂಟೆ ಬೇಕಾಗುತ್ತಿದೆ'' ಎಂದು ಆರೋಪಿಸಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ಸುಪ್ರೀಂಕೋರ್ಟ್, ಪ್ರತಿಭಟಿಸುತ್ತಿರುವ ರೈತರಿಗೆ, ಹೊಣೆಗಾರಿಕೆಯ ಪಾಠ ಮಾಡಿದೆ. ''ಒಮ್ಮೆ ಕೃಷಿ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಪ್ರತಿಭಟನೆ ಮುಂದುವರಿಸುತ್ತಿರುವುದರ ಅರ್ಥವೇನು? ಯಾವುದೇ ಭೀತಿ ಇಲ್ಲದೆ ಮುಕ್ತವಾಗಿ ಸಂಚರಿಸುವ ಸಮಾನ ಹಕ್ಕು ನಾಗರಿಕರಿಗೂ ಇದೆ'' ಎಂದು ಹೇಳಿದೆ. ಸುಪ್ರೀಂಕೋರ್ಟ್ ಅತ್ಯಂತ ಜಾಣತನದಿಂದ, ಪ್ರತಿಭಟನಾಕಾರರ ವಿರುದ್ಧ ಜನಸಾಮಾನ್ಯರನ್ನು ಎತ್ತಿಕಟ್ಟಿದೆ. ರೈತರು ಕೇಂದ್ರ ಸರಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಇದಾಗಿದ್ದರೂ, ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳದೆ ರೈತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮುಂದಾಗಿದೆ.

 ಒಬ್ಬ ಪ್ರಯಾಣಿಕನಿಗೆ ಮುಕ್ತವಾಗಿ ಸಂಚರಿಸುವ ಹಕ್ಕು ಹೇಗಿದೆಯೋ, ಹಾಗೆಯೇ ಈ ದೇಶದ ರೈತ ತಾನು ಬೆಳೆದ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡುವ ಹಕ್ಕನ್ನೂ ಹೊಂದಿದ್ದಾನೆ. ಈ ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತ, ಕೇಂದ್ರದ ಕೃಷಿ ನೀತಿಯಿಂದಾಗಿ ತನ್ನ ಬದುಕು, ಭವಿಷ್ಯ ಆಪತ್ತಿನಲ್ಲಿದೆ ಎಂದು ಬೀದಿಯಲ್ಲಿ ನಿಂತು ಕಳೆದ 10 ತಿಂಗಳಿನಿಂದ ಸರಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಕೃಷಿ ನೀತಿ ಇಡೀ ದೇಶದ ಕೃಷಿ ವ್ಯವಸ್ಥೆಯ ಭವಿಷ್ಯದ ದಾರಿಯನ್ನೇ ಸಂಪೂರ್ಣ ಮುಚ್ಚಿ ಹಾಕಲಿದೆ ಎಂದು ರೈತ ಭಯ ಪಟ್ಟು ದಿಲ್ಲಿಯ ರಸ್ತೆಯಲ್ಲಿ ಧರಣಿ ನಡೆಸುತ್ತಿರುವಾಗ, ಮೊದಲು ಸುಪ್ರೀಂಕೋರ್ಟ್ ಕಿವಿಯಾಗ ಬೇಕಾದುದು ರೈತರ ಬೇಡಿಕೆಗೆ. ಯಾಕೆಂದರೆ ರೈತರ ಬೇಡಿಕೆಯ ಹಿಂದೆ ಇಡೀ ದೇಶದ ಹಿತಾಸಕ್ತಿ ಅಡಗಿದೆ. ಇದು ವ್ಯಕ್ತಿ ಕೇಂದ್ರಿತ ಬೇಡಿಕೆಯಲ್ಲ. 'ಮೊದಲು 20 ನಿಮಿಷದ ರಸ್ತೆಯನ್ನು ಈಗ ಎರಡು ಗಂಟೆಗಳ ಕಾಲ ಕ್ರಮಿಸಬೇಕಾಗುತ್ತದೆ'' ಎಂಬ ಮಾತು ಸುಪ್ರೀಂಕೋರ್ಟಿಗೆ ಅರ್ಥವಾಗುತ್ತದೆಯಾದರೆ, 'ಕೃಷಿ ನೀತಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರೂ, ಸರಕಾರಕ್ಕೆ ಸ್ಪಷ್ಟ ಆದೇಶ ನೀಡಲು ಸುಪ್ರೀಂಕೋರ್ಟಿಗೆ ಇಷ್ಟು ಸಮಯ ಯಾಕೆ ತಗಲುತ್ತಿದೆ?' ಎಂಬ ರೈತರ ಪ್ರಶ್ನೆಯೂ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ರಸ್ತೆಯಲ್ಲಿ ಅಡ್ಡವಾಗಿ ನಿಂತಿರುವವರು ಯಾರು ಎನ್ನುವುದನ್ನು ಅದು ಸ್ಪಷ್ಟ ಪಡಿಸಬೇಕಾಗುತ್ತದೆ.

'ಪ್ರತಿಭಟನೆಯ ಬಗ್ಗೆ ಸ್ಥಳೀಯರು ಸಂತಸವಾಗಿದ್ದೀರಾ ಎಂದು ನೀವು ಎಂದಾದರೂ ಅವರನ್ನು ಪ್ರಶ್ನಿಸಿದ್ದೀರಾ?' ಎಂಬ ಪ್ರಶ್ನೆಯನ್ನು ಸುಪ್ರೀಂಕೋರ್ಟ್ ರೈತರಿಗೆ ಕೇಳಿದೆ. ಸ್ಥಳೀಯರ ಸಂತೋಷದ ಕುರಿತಂತೆ ಅತಿ ಆಸಕ್ತಿಯನ್ನು ವಹಿಸುವ ಸುಪ್ರೀಂಕೋರ್ಟ್ ಇಡೀ ದೇಶದ ರೈತರ ಜೊತೆಗೆ ಈ ಪ್ರಶ್ನೆಯನ್ನು ಯಾಕೆ ಕೇಳಲು ಮುಂದಾಗುತ್ತಿಲ್ಲ? ನಾವು ಯಾರೂ ಸಂತೋಷವಾಗಿಲ್ಲ ಎನ್ನುವುದನ್ನು ಹೇಳುವುದಕ್ಕಾಗಿ ತಾನೇ ರೈತರು ದಿಲ್ಲಿಯ ಬೀದಿಯಲ್ಲಿ ಕಳೆದ 10 ತಿಂಗಳಿಂದ ಧರಣಿ ಕೂತಿರುವುದು. ಅವರ ಅಸಂತೋಷದ ಕಾರಣವನ್ನು ಕೇಳಿ, ನ್ಯಾಯಾನ್ಯಾಯಗಳನ್ನು ಪರಿಶೀಲಿಸಿ ತೀರ್ಪು ನೀಡಿದರೆ, ರೈತರೂ ಅಲ್ಲಿಂದ ತೆರವುಗೊಳ್ಳುತ್ತಾರೆ. ಸ್ಥಳೀಯರೂ ಸಂತೋಷಗೊಳ್ಳುತ್ತಾರೆ. 'ನಿಮ್ಮ ಕೃಷಿ ನೀತಿಯಿಂದಾಗಿ ಈ ದೇಶದ ರೈತರು ಸಂತೋಷದಿಂದ ಇದ್ದಾರಾ?' ಎನ್ನುವ ಒಂದು ಪ್ರಶ್ನೆಯನ್ನು ಸುಪ್ರೀಂಕೋರ್ಟ್ ಅತ್ಯಂತ ದೊಡ್ಡ ಧ್ವನಿಯಲ್ಲಿ ಕೇಂದ್ರ ಸರಕಾರವನ್ನು ಕೇಳಿದ್ದರೆ, ಇಂದು ರೈತರು ಬೀದಿಯಲ್ಲಿ ರಸ್ತೆ ತಡೆ ಮಾಡುವ ಪ್ರಶ್ನೆಯೇ ಬರುತ್ತಿರಲಿಲ್ಲ. ರೈತರಿಗೆ ಬೇಕಾಗಿಲ್ಲದ ಕೃಷಿ ನೀತಿಯನ್ನು ಅವರ ಮೇಲೆ ನೀವು ಯಾಕಾಗಿ ಹೇರಲು ಮುಂದಾಗಿದ್ದೀರಿ? ನಿಜವಾಗಿಯೂ ಇದರಿಂದ ರೈತರಿಗೆ ಲಾಭವಾಗುತ್ತದೆಯಾದರೆ ಅವರೇಕೆ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ? ಯಾರ ಲಾಭಕ್ಕಾಗಿ, ಯಾರ ಸಂತೋಷಕ್ಕಾಗಿ, ಯಾರನ್ನು ಶ್ರೀಮಂತಗೊಳಿಸಲು ಈ ಕೃಷಿ ನೀತಿ ಜಾರಿಗೆ ತರಲು ಹಟ ಹಿಡಿದಿದ್ದೀರಿ ಎಂಬ ಪ್ರಶ್ನೆಯನ್ನು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಕೇಳಬೇಕಾಗಿದೆ. ರೈತರಿಗೆ ಬೇಡವಾದ ಕೃಷಿ ನೀತಿ, ಕೇವಲ ಆಳುವವರಿಗೆ ಅದರಲ್ಲೂ ಕೆಲವು ಕಾರ್ಪೊರೇಟ್ ಉದ್ಯಮಿಗಳಿಗೆ ಬೇಕಾಗಿದೆ. ಈ ವಿಪರ್ಯಾಸದ ಬಗ್ಗೆ ಸುಪ್ರೀಂಕೋರ್ಟ್ ಮಾತನಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News