ಕೋವಿಡ್ ಸೋಂಕು: ಇನ್ನೂ 30 ಜಿಲ್ಲೆಗಳಲ್ಲಿ ಅಧಿಕ ಪಾಸಿಟಿವಿಟಿ ದರ

Update: 2021-10-04 04:30 GMT

ಹೊಸದಿಲ್ಲಿ, ಅ.4: ದೇಶದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದರೂ, ಇನ್ನೂ 30 ಜಿಲ್ಲೆಗಳು ಮಾತ್ರ ಅಪಾಯದ ಮಟ್ಟದಲ್ಲೇ ಮುಂದುವರಿದಿವೆ. ಕಳೆದ ಐದು ತಿಂಗಳಿನಿಂದ ಪಾಸಿಟಿವಿಟಿ ದರ ದೇಶಾದ್ಯಂತ ಇಳಿಕೆಯಾಗುತ್ತಿದ್ದರೂ, ಈ ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಶೇಕಡ 10ಕ್ಕಿಂತ ಅಧಿಕ ಪಾಸಿಟಿವಿಟಿ ದರ ಇದೆ. ಈ ಅಪಾಯಕಾರಿ 30 ಜಿಲ್ಲೆಗಳಲ್ಲಿ 13 ಜಿಲ್ಲೆಗಳು ಕೇರಳ ರಾಜ್ಯದಲ್ಲಿವೆ.

ರಾಷ್ಟ್ರಮಟ್ಟದಲ್ಲಿ ಸತತ 13 ದಿನಗಳಿಂದ ಸಾಪ್ತಾಹಿಕ ಪಾಸಿಟಿವಿಟಿ ದರ ಶೇಕಡ 3ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ ಎನ್ನುವುದು ಆರೋಗ್ಯ ಇಲಾಖೆ ಅಂಕಿಅಂಶಗಳಿಂದ ತಿಳಿದು ಬರುತ್ತದೆ.

ಅಧಿಕ ಹೊರೆ ಇರುವ ಪ್ರದೇಶಗಳಲ್ಲಿ ಸೋಂಕು ತಡೆ ಕಾರ್ಯತಂತ್ರವನ್ನು ತಜ್ಞರು ಪ್ರಶ್ನಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಬೆಳಕಿಗೆ ಬಾರದ ಪ್ರಕರಣಗಳು ಅಧಿಕ ಇರುವ ಎಲ್ಲ ಸಾಧ್ಯತೆಗಳೂ ಇವೆ" ಎಂದು ಸಾರ್ವಜನಿಕ ಆರೋಗ್ಯ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

"ಕೇರಳದಲ್ಲಿ ತಪಾಸಣೆ ತೀವ್ರವಾಗಿ ನಡೆಯುತ್ತಿದ್ದರೂ, ಅತ್ಯಧಿಕ ಅಪಾಯ ಸಾಧ್ಯತೆ ಇರುವ ಸಂಪರ್ಕಗಳನ್ನು ಮಾತ್ರ ಗುರಿ ಮಾಡಲಾಗಿದೆ. ಈ ವರ್ಗದಲ್ಲಿ ಸಹಜವಾಗಿಯೇ ಪಾಸಿಟಿವಿಟಿ ದರ ಅಧಿಕ. ಆದರೆ ನಾವು ಸಾಕಷ್ಟು ಪರೀಕ್ಷೆಗಳನ್ನು ನಡೆಸದಿದ್ದಾಗ, ರೋಗಲಕ್ಷಣಗಳು ಇಲ್ಲದ ಹಲವು ಮಂದಿಯನ್ನು ನಾವು ಕೈಬಿಡುವ ಸಾಧ್ಯತೆ ಇರುತ್ತದೆ. ಆದರೆ ಇವರು ರೋಗ ಹರಡುವ ಸಾಮರ್ಥ್ಯ ಹೊಂದಿರುತ್ತಾರೆ. ಬಹುಶಃ ಹೀಗಾಗುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತರ 11 ರಾಜ್ಯಗಳ 18 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡ 5ರಿಂದ 10ರ ನಡುವೆ ಇದೆ. ಇದು ಕೂಡಾ ಅಧಿಕ ಪ್ರಮಾಣದಲ್ಲಿ ಸೋಂಕು ಹರಡುವುದರ ಪ್ರತೀಕವಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಇದ್ದರೆ ಮಾತ್ರ ಆ ನಿರ್ದಿಷ್ಟ ಪ್ರದೇಶದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂಬ ಅರ್ಥ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೇರಳ ಹೊರತುಪಡಿಸಿದರೆ ಮಿಝೋರಾಂನ 8 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಅಧಿಕವಾಗಿದೆ. ಮಣಿಪುರ ಹಾಗೂ ಅರುಣಾಚಲ ಪ್ರದೇಶಗಳ ತಲಾ ಮೂರು, ಸಿಕ್ಕಿಂನ ಎರಡು ಹಾಗೂ ಮೇಘಾಲಯದ ಒಂದು ಜಿಲ್ಲೆಗಳಲ್ಲಿ ಅಧಿಕ ಪಾಸಿಟಿವಿಟಿ ದರ ದಾಖಲಾಗಿದೆ.

ಕೇರಳದಲ್ಲಿ ಸಕ್ರಿಯ ಪ್ರಕರಣಗಳು ಕೂಡಾ ಅಧಿಕವಿದ್ದು, 1,44,075 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಇದು ಇಡೀ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಶೇಕಡ 52.01ರಷ್ಟು. ಐದು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ 40,252, ತಮಿಳುನಾಡು (17,192), ಮಿಝೋರಾಂ (16,841), ಕರ್ನಾಟಕ (12,594) ಹಾಗೂ ಆಂಧ್ರ ಪ್ರದೇಶ (11656) ನಂತರದ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News