ಇದೆಂತಹ ನ್ಯಾಯ?

Update: 2021-10-06 05:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊನೆಗೂ ಹಾಥರಸ್ ಸಂತ್ರಸ್ತೆಗೆ ನ್ಯಾಯ ಸಿಗುವ ಸೂಚನೆಗಳು ಕಾಣುತ್ತಿವೆ. ಪೊಲೀಸರು ಆರೋಪಿಯ ವಿರುದ್ಧ 5,000 ಪುಟಗಳ ಚಾರ್ಜ್‌ಶೀಟ್‌ನ್ನು ಸಲ್ಲಿಸಿದ್ದಾರೆ. ಅಂದ ಹಾಗೆ ಈ ಚಾರ್ಜ್ ಶೀಟ್ ಸಲ್ಲಿಸಿರುವುದು ಹಾಥರಸ್ ಭೀಕರ ಅತ್ಯಾಚಾರ, ಕೊಲೆ ಆರೋಪಿಗಳ ವಿರುದ್ಧವಲ್ಲ. ಬದಲಿಗೆ, ಈ ಅತ್ಯಾಚಾರದ ಸತ್ಯಾಸತ್ಯತೆಗಳನ್ನು ವರದಿ ಮಾಡಲು ಕೇರಳದಿಂದ ಉತ್ತರ ಪ್ರದೇಶಕ್ಕೆ ತೆರಳಿದ ಪತ್ರಕರ್ತನ ವಿರುದ್ಧ . ಅತ್ಯಾಚಾರ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಆಸಕ್ತಿಯನ್ನು ಪೊಲೀಸರು ಅತ್ಯಾಚಾರ ವರದಿ ಮಾಡಲು ತೆರಳಿದ ವರದಿಗಾರನ ವಿರುದ್ಧ ಹೊಂದಿದ್ದಾರೆ. ಇಷ್ಟಕ್ಕೂ ವರದಿಗಾರನ ಮೇಲೆ ಕ್ರಮ ತೆಗೆದುಕೊಳ್ಳಲು ಮುಖ್ಯ ಕಾರಣ, ಆತನ ಹೆಸರು ಸಿದ್ದೀಕ್ ಕಪ್ಪನ್! ಆತ ನಿರ್ದಿಷ್ಟ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಪೊಲೀಸರಿಗೆ ಆತನ ಮೇಲೆ ಅನುಮಾನ ಬಂದಿದೆ. ಹಾಥರಸ್ ಪ್ರಕರಣದ ಬಗ್ಗೆ ವರದಿ ಮಾಡಿ, ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವುದಕ್ಕೆ ಹೊರಟಿದ್ದ ಎನ್ನುವುದು ಪೊಲೀಸರ ಚಾರ್ಜ್‌ಶೀಟ್‌ನ ಒಟ್ಟು ಸಾರ. ಪುಣ್ಯಕ್ಕೆ ಹಾಥರಸ್ ಪ್ರಕರಣದ ಪ್ರಮುಖ ಆರೋಪಿಯಾಗಿ ಈ ಪತ್ರಕರ್ತ ಸಿದ್ದೀಕ್‌ನ್ನು ಸೇರಿಸಿಲ್ಲ. ಅಷ್ಟರಮಟ್ಟಿಗೆ ಆತನ ಮೇಲೆ ಕರುಣೆ ತೋರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ಸಂಭವಿಸಿದ್ದುದರಿಂದ ಸಮಾಜದ ಶಾಂತಿ ಕದಡಿರುವುದಲ್ಲ. ಪತ್ರಕರ್ತರು ವರದಿ ಮಾಡಿರುವುದರಿಂದ ಸಮಾಜದ ಶಾಂತಿ ಕದಡಿರುವುದು. ಆದುದರಿಂದ ಪತ್ರಕರ್ತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದರೆ, ಹಾಥರಸ್‌ನ ಸಂತ್ರಸ್ತೆಗೆ ನ್ಯಾಯ ದೊರಕಿದಂತಾಗುತ್ತದೆ ಎಂದು ಪೊಲೀಸರು ಭಾವಿಸಿದ್ದಾರೆ. ಹಾಥರಸ್ ಘಟನೆಗೂ ಕೇರಳದಲ್ಲಿ ಪ್ರಧಾನವಾಗಿ ಬೇರು ಬಿಟ್ಟಿರುವ ಒಂದು ಮುಸ್ಲಿಮ್ ಸಂಘಟನೆಗೂ ನಂಟು ಹಾಕಲು ಅವರು ಯತ್ನಿಸಿದ್ದಾರೆ. ಹಾಥರಸ್ ಘಟನೆಯನ್ನು ಬಳಸಿಕೊಂಡು, ನ್ಯಾಯಕ್ಕಾಗಿ ಆಗ್ರಹಿಸಿ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಆ ಸಂಘಟನೆ ಹೊಂದಿತ್ತು. ಇದಕ್ಕಾಗಿ ಸಿದ್ದೀಕ್ ಥಿಂಕ್ ಟ್ಯಾಂಕ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ ನ್ಯಾಯ ಕೇಳುವುದು ಅಪರಾಧ. ಒಬ್ಬ ದಲಿತ ಮಹಿಳೆಯನ್ನು ಅತ್ಯಾಚಾರ ಗೈದು ಕೊಂದು ಹಾಕಿದರೆ, ಆ ಘಟನೆಯನ್ನು ವರದಿ ಮಾಡುವುದು, ಪೊಲೀಸರ, ಜಿಲ್ಲಾಡಳಿತದ ವೈಫಲ್ಯವನ್ನು ಬೊಟ್ಟು ಮಾಡುವುದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ. ಹಥ್ರಾಸ್ ಪ್ರಕರಣದಲ್ಲಿ ಹಲವು ದಲಿತ ಸಂಘಟನೆಗಳು ನ್ಯಾಯಕ್ಕಾಗಿ ಬೀದಿಗಿಳಿದಿದ್ದವು. ರಾಜಕೀಯ ಪಕ್ಷಗಳೂ ಹೋರಾಟ ನಡೆಸಿದ್ದವು. ಹಾಥರಸ್ ಪ್ರಕರಣ ಬೆಳಕಿಗೆ ಬರುವುದರಲ್ಲಿ, ವೈಫಲ್ಯ ಬಹಿರಂಗವಾಗುವುದರಲ್ಲಿ ಈ ಪತ್ರಕರ್ತನ ದೊಡ್ಡ ಪಾತ್ರವೇನು ಇರಲಿಲ್ಲ. ಹಾಥರಸ್ ಘಟನೆಯನ್ನು ತಿರುಚುವುದಕ್ಕಾಗಿ ಮತ್ತು ಹೋರಾಟಗಳನ್ನು ಬಗ್ಗು ಬಡಿಯುವುದಕ್ಕಾಗಿ ಸಿದ್ದೀಕ್ ಕಪ್ಪನ್‌ರನ್ನು ಉತ್ತರ ಪ್ರದೇಶ ಸರಕಾರ ಬಳಸಿಕೊಂಡಿತು. ಉದ್ವಿಗ್ನತೆಯ ಹಿಂದೆ ದೇಶದ್ರೋಹಿಗಳಿದ್ದಾರೆ ಎನ್ನುವುದನ್ನು ಬಿಂಬಿಸಿ, ಹಾಥರಸ್ ಪ್ರಕರಣದಲ್ಲಿ ಮಾನ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ಅದಕ್ಕೆ ಸಿಕ್ಕಿದ ಮಿಕವೇ ಸಿದ್ದೀಕ್ ಕಪ್ಪನ್ ಎಂಬ ಯುವ ಪತ್ರಕರ್ತ. ಈ ಮೊಲದ ಮರಿಗೆ ಪೊಲೀಸರು ಬಣ್ಣ ಬಳಿದು ಹುಲಿಯನ್ನಾಗಿಸಲು ಹೊರಟಿದ್ದಾರೆ. ಅದರ ಭಾಗವಾಗಿ 5,000 ಪುಟಗಳ ಜಾರ್ಜ್‌ಶೀಟ್‌ನ್ನು ಪೊಲೀಸರು ಸಲ್ಲಿಸಿದ್ದಾರೆ.

ಕಪ್ಪನ್‌ನ ಮೇಲೆ ಪೊಲೀಸರು ಹೊರಿಸುವ ಆರೋಪಗಳ ಆಧಾರದಲ್ಲಿ ಈ ದೇಶದ ಯಾವುದೇ ಪತ್ರಕರ್ತನನ್ನೂ ಬಂಧಿಸಬಹುದಾಗಿದೆ. ನಿಝಾಮುದ್ದೀನ್ ಮರ್ಕಝ್, ಸಿಎಎ ವಿರೋಧಿ ಪ್ರತಿಭಟನೆಗಳು, ಈಶಾನ್ಯ ದಿಲ್ಲಿ ಹಿಂಸಾಚಾರ, ಅಯೋಧ್ಯೆ ರಾಮಮಂದಿರ ಮೊದಲಾದ ವಿವಾದಾತ್ಮಕ ವಿಷಯಗಳ ಬಗ್ಗೆ ಸಿದ್ದೀಕ್ ಕಪ್ಪನ್ ಬರೆದಿರುವ 36 ಲೇಖನಗಳನ್ನು ದೋಷಾರೋಪದಲ್ಲಿ ಉಲ್ಲೇಖಿಸಲಾಗಿದೆಯಂತೆ. ಸಿದ್ದೀಕ್ ಕಪ್ಪನ್ ದೇಶವಿರೋಧಿ ಕೃತ್ಯದಲ್ಲಿ ಶಾಮೀಲಾಗಿದ್ದಾನೆ ಎನ್ನುವುದನ್ನು ಸಾಬೀತು ಮಾಡುವುದಕ್ಕಾಗಿ ಈ ಲೇಖನಗಳನ್ನು ಬಳಸಲಾಗಿದೆ. ಸಿಎಎ ವಿರುದ್ಧ ಲೇಖನಗಳನ್ನು ಬರೆದರೆ, ಪ್ರತಿಭಟನಾಕಾರರ ಪರವಾಗಿ ವಿಶ್ಲೇಷಣೆಗಳನ್ನು ಬರೆದರೆ ಒಬ್ಬ ಪತ್ರಕರ್ತ ದೇಶದ್ರೋಹಿಯಾಗುತ್ತಾನೆ ಎಂದಾದರೆ, ಈ ದೇಶದಲ್ಲಿ ಇವುಗಳನ್ನು ಬರೆದಿರುವುದು ಸಿದ್ದೀಕ್ ಕಪ್ಪನ್ ಮಾತ್ರವೇ ಅಲ್ಲ ಮತ್ತು ಸರಕಾರವನ್ನು ಟೀಕಿಸುವುದು, ಸರಕಾರದ ನೀತಿಗಳನ್ನು ಖಂಡಿಸುವುದು ಪತ್ರಕರ್ತನ ಕರ್ತವ್ಯದ ಭಾಗ. ಬಾಬರಿ ಮಸೀದಿ, ರಾಮಮಂದಿರಗಳ ಬಗ್ಗೆ ಲೇಖನಗಳನ್ನು ಬರೆಯುವುದನ್ನು ‘ಹಿಂದೂ ವಿರೋಧಿ ಲೇಖನ’ ಎಂದು ಪೊಲೀಸರೇ ಉಲ್ಲೇಖಿಸಿದ ಮೇಲೆ, ಯಾವುದೇ ಪತ್ರಕರ್ತ ತನ್ನ ಕರ್ತವ್ಯವನ್ನು ಈ ದೇಶದಲ್ಲಿ ನಿರ್ವಹಿಸುವುದಕ್ಕೆ ಸಾಧ್ಯವೇ?

ಯಾವುದೇ ಒಂದು ಸಂಘಟನೆಯ ಜೊತೆಗೆ ಗುರುತಿಸಿಕೊಳ್ಳುವುದು ಅಪರಾಧವಾಗಬೇಕಾದರೆ, ಆ ಸಂಘಟನೆ ಸರಕಾರದಿಂದ ನಿಷೇಧ ಗೊಂಡಿರಬೇಕು. ಪ್ರಜಾಸತ್ತಾತ್ಮಕವಾಗಿ ಅಸ್ತಿತ್ವದಲ್ಲಿರುವ ಒಂದು ಸಂಘಟನೆಯ ಜೊತೆಗೆ ಗುರುತಿಸಿಕೊಂಡರೆ ಅದು ಅಪರಾಧವಾಗುವುದು ಹೇಗೆ? ಒಟ್ಟಿನಲ್ಲಿ ಸಿದ್ದೀಕ್ ಕಪ್ಪನ್‌ಗೆ ಶಿಕ್ಷೆ ಕೊಡಿಸುವ ಮೂಲಕ ಹಾಥರಸ್ ಸಂತ್ರಸ್ತೆಗೆ ನ್ಯಾಯ ನೀಡಲು ಪೊಲೀಸರು ಮುಂದಾಗಿದ್ದಾರೆ ಎನ್ನುವುದು ಸ್ಪಷ್ಟ. ಈತನ ಮೇಲೆ ಇರುವ ಆಸಕ್ತಿ,ಹಾಥರಸ್‌ನ ಅತ್ಯಾಚಾರ ಆರೋಪಿಗಳ ಮೇಲಿದ್ದಿದ್ದರೆ ಇಂದು ಅವರಿಗೆ ಗಲ್ಲು ಶಿಕ್ಷೆಯೇ ಆಗಿ ಬಿಡುತ್ತಿತ್ತು . ಸಿದ್ದೀಕ್ ಕಪ್ಪನ್‌ರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡುವ ಮೂಲಕ ಅವರು ದೇಶದ ಪತ್ರಕರ್ತರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಸಂಭವಿಸುವ ಯಾವುದೇ ಅಪರಾಧಗಳಿಗೆ ಪ್ರತಿಕ್ರಿಯಿಸುವ ಹಕ್ಕು ಪತ್ರಕರ್ತರಿಗಿಲ್ಲ ಎಂದು ಅವರು ಬೆದರಿಸುತ್ತಿದ್ದಾರೆ. ಆ ಮೂಲಕ, ಈ ದೇಶದಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಅಪರಾಧವಲ್ಲ, ಅತ್ಯಾಚಾರಗಳನ್ನು ವರದಿ ಮಾಡುವುದು ಅಪರಾಧ ಎನ್ನುವ ಸಂದೇಶವನ್ನು ಅವರು ನೀಡುತ್ತಿದ್ದಾರೆ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಕೇಳುವುದು ದೇಶದ್ರೋಹದ ಭಾಗವೆಂದು ಅವರು ವ್ಯಾಖ್ಯಾನಿಸುತ್ತಿದ್ದಾರೆ. ಮುಸ್ಲಿಮರಿಗೆ, ದಲಿತರಿಗಾದ ಅನ್ಯಾಯದ ಕುರಿತಂತೆ ಬರೆದರೆ ಅದನ್ನು ದಲಿತರು, ಮುಸ್ಲಿಮರನ್ನು ಪ್ರಚೋದಿಸುವ ಕೆಲಸವೆಂದು ಹೇಳುತ್ತಿದ್ದಾರೆ.

ಹಾಗಾದರೆ ಅತ್ಯಾಚಾರ ನಡೆದಾಗ ಒಬ್ಬ ಪತ್ರಕರ್ತ ಮಾಡಬೇಕಾದ ಕೆಲಸವೇನು? ಪೊಲೀಸರ ಹೇಳಿಕೆಗಳನ್ನು ಬರೆದು ಮುದ್ರಿಸುವುದೇ ಪತ್ರಿಕೋದ್ಯಮವೇ? ನಿರ್ಭಯಾ ಪ್ರಕರಣದಲ್ಲಿ ಇಡೀ ದೇಶ ಒಂದಾಗಿ ಮಾತನಾಡಿತು. ಆದರೆ ಹಾಥರಸ್ ಪ್ರಕರಣದಲ್ಲಿ ಮಾತನಾಡಿದವರೇ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ ಮಾತ್ರವಲ್ಲ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅತ್ತ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಇಂದು ಸಿದ್ದೀಕ್ ಕಪ್ಪನ್‌ಗೆ ಒದಗಿದ ಸ್ಥಿತಿ ಭವಿಷ್ಯದಲ್ಲಿ ಸತ್ಯದ ಪರವಾಗಿ ನಿಲ್ಲುವ ಎಲ್ಲ ಪತ್ರಕರ್ತರೂ ಎದುರಿಸಬೇಕಾಗುತ್ತದೆ. ತಮಿಳುನಾಡಿನ ಹೈಕೋರ್ಟ್ ಪ್ರಕರಣವೊಂದರಲ್ಲಿ ಅರಣ್ಯ ಇಲಾಖೆಗೆ ನಿರ್ದೇಶನ ನೀಡುತ್ತಾ ‘‘ಹುಲಿಯನ್ನು ತಕ್ಷಣವೇ ಕೊಲ್ಲಬೇಡಿ. ಅದು ನರಭಕ್ಷಕ ಹುಲಿಯಲ್ಲದೇ ಇರಬಹುದು’’ ಎಂದು ಸಲಹೆ ನೀಡುತ್ತದೆ. ಆದರೆ ಮನುಷ್ಯನ ವಿಷಯ ಬಂದಾಗ ವೌನವಾಗುತ್ತದೆ. ಕನಿಷ್ಠ ಗೋವು, ಹುಲಿಗೆ ಇರುವ ಬೆಲೆಯನ್ನಾದರೂ ಮನುಷ್ಯನಿಗೆ ನೀಡಿ ಎಂದು ನ್ಯಾಯಾಲಯ ಪೊಲೀಸರಿಗೆ ತಿಳಿ ಹೇಳಬೇಕಾಗಿದೆ. ಇಲ್ಲವಾದರೆ, ದಲಿತರ ಮೇಲಿನ ಅತ್ಯಾಚಾರ ನಮ್ಮ ಹಕ್ಕು ಎಂದು ಮೇಲ್‌ಜಾತಿಯ ಜನರು ನ್ಯಾಯಾಲಯದ ಮೊರೆಹೋಗುವ ದಿನ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News