ಸರಕಾರದ ಮೈಮೇಲೆ ರೈತರ ನೆತ್ತರು!

Update: 2021-10-08 06:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಎಲ್ಲೋ ನಡೆದ ರೈಲು ದುರಂತಕ್ಕೆ ಸಂಬಂಧಿಸಿ, ಅಂದಿನ ರೈಲು ಖಾತೆಯ ಸಚಿವರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ರಾಜೀನಾಮೆ ನೀಡಿದ ಇತಿಹಾಸ ನಮಗೆ ಗೊತ್ತಿದೆ. ಅಕ್ಟೋಬರ್ 2ರಂದು ಗಾಂಧಿಜಯಂತಿಗಿಂತ ಲಾಲ್ ಬಹಾದ್ದೂರ್ ಶಾಸ್ತ್ರಿಯ ಜಯಂತಿಯ ಕುರಿತಂತೆ ಅತ್ಯಾಸಕ್ತಿ ವಹಿಸುವ ಬಿಜೆಪಿಯ ನಾಯಕರು, ಕನಿಷ್ಠ ಶಾಸ್ತ್ರೀಜಿಯ ಮೇಲಿನ ಗೌರವದಿಂದಲಾದರೂ ಕೇಂದ್ರ ಸಹಾಯಕ ಗೃಹ ಸಚಿವ ಅಜಯ್ ಮಿಶ್ರಾ ಅವರಿಂದ ರಾಜೀನಾಮೆಯನ್ನು ಕೊಡಿಸಬೇಕಾಗಿತ್ತು. ಯಾಕೆಂದರೆ, ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಓಡಿಸಿದ್ದು, ಅವರ ಪುತ್ರ. ಅದೇನು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಕಾರಿನಲ್ಲಿ ತನ್ನ ಪುತ್ರ ಇರಲಿಲ್ಲ ಎಂದು ಸಚಿವರು ಹೇಳುತ್ತಾರಾದರೂ, ಸಾಕ್ಷಗಳು ಅವರ ಮಾತನ್ನು ಅಲ್ಲಗಳೆಯುತ್ತವೆ. 'ರೈತರು ಕಲ್ಲು ತೂರಿದರು. ಆಗ ಅವಘಡ ಸಂಭವಿಸಿತು' ಎಂದೂ ತಮ್ಮ ಮಗನನ್ನು ಸಮರ್ಥಿಸಲು ಹೊರಟಿದ್ದಾರೆ. ಆದರೆ ಶಾಂತವಾಗಿ ನಿಂತಿದ್ದ ರೈತರ ಮೇಲೆ ಅನಿರೀಕ್ಷಿತವಾಗಿ ಕಾರು ಹತ್ತಿಸಿದ ವೀಡಿಯೊ ವೈರಲ್ ಆಗಿದೆ. ಪ್ರತಿಭಟನಾ ನಿರತ ರೈತರ ಮೇಲಿನ ಆಕ್ರೋಶದಿಂದಲೇ ಈ ಕೃತ್ಯ ಎಸಗಲಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ, ನೆರೆದ ರೈತರನ್ನು ಪ್ರಚೋದಿಸುವ ಪ್ರಯತ್ನ ನಡೆದಿದೆ. ಇದೀಗ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವ ಬಗ್ಗೆ ಸರಕಾರ ಆದೇಶ ನೀಡಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯಾಗಿರುವಾತ 'ಕೇಂದ್ರ ಸಹಾಯಕ ಗೃಹ ಸಚಿವ' ಅಜಯ್ ಮಿಶ್ರಾರ ಪುತ್ರ ಆಗಿರುವುದರಿಂದ ತನಿಖೆ ಸರಿಯಾದ ದಾರಿಯಲ್ಲಿ ನಡೆಯುತ್ತದೆ ಎಂದು ನಿರೀಕ್ಷಿಸುವುದು ಕಷ್ಟ.

ಎಂಟು ಜನರ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿ ಈವರೆಗೆ ಮುಖ್ಯ ಆರೋಪಿಯನ್ನು ಬಂಧಿಸಲಾಗಿಲ್ಲ ಎನ್ನುವುದೇ ತನಿಖೆಯ ಗತಿಯನ್ನು ಹೇಳುತ್ತದೆ. ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ, ಕಾರು ಹರಿಸುವ ಮೂಲಕ ಸಚಿವರ ಪುತ್ರ ದೊಡ್ಡ ಅನಾಹುತವೊಂದನ್ನು ಸೃಷ್ಟಿಸಲು ಮುಂದಾಗಿದ್ದ. ರೈತರನ್ನು ಹಿಂಸೆಗೆ ಪ್ರಚೋದಿಸುವುದೇ ಮುಖ್ಯ ಗುರಿಯಾಗಿತ್ತು. ಒಂದು ವೇಳೆ ನೆರೆದ ರೈತರೆಲ್ಲ ಸಹನೆ ಕಳೆದುಕೊಂಡು ಹಿಂಸೆಗೆ ಇಳಿದಿದ್ದರೆ, ಅಲ್ಲೊಂದು ಜಲಿಯನ್ ವಾಲಾಬಾಗ್ ನಿರ್ಮಾಣವಾಗಿ ಬಿಡುತ್ತಿತ್ತು. ರೈತ ಮುಖಂಡರು ವಹಿಸಿದ ಮುತ್ಸದ್ದಿತನದಿಂದಾಗಿ ಯಾವುದೇ ಹಿಂಸೆ ನಡೆಯಲಿಲ್ಲ. ಇದುವೇ ರೈತ ಹೋರಾಟದ ಪ್ರಾಮಾಣಿಕತೆಯನ್ನು ಹೇಳುತ್ತದೆ. ನೆರೆದವರು ರೈತರಲ್ಲದೇ ಹೋಗಿದ್ದರೆ, ಅರಾಜಕತೆ ಅವರ ಉದ್ದೇಶವಾಗಿದ್ದರೆ, ಈ ಸಂದರ್ಭವನ್ನು ಖಂಡಿತವಾಗಿಯೂ ಬಳಸುತ್ತಿದ್ದರು. ಲಖಿಂಪುರ ಖೇರಿ ರಣರಂಗವಾಗಿ ಬಿಡುತ್ತಿತ್ತು. ಆದರೆ ನೆರೆದ ರೈತರಿಗೆ ತಮ್ಮ ಗುರಿ, ಉದ್ದೇಶ ಸ್ಪಷ್ಟವಿತ್ತು. ಆದುದರಿಂದ ಅವರು ಅಗಾಧ ಸಹನೆಯನ್ನು, ತಾಳ್ಮೆಯನ್ನು ಪ್ರದರ್ಶಿಸಿದರು. ರೈತರನ್ನು ಉಗ್ರರು, ಗೂಂಡಾಗಳು ಎಂದು ಕರೆದ ಸರಕಾರವೇ ನಾಚುವಂತೆ ಅವರು ಅಲ್ಲಿ ಪ್ರಬುದ್ಧತೆಯನ್ನು ಮೆರೆದರು. ಒಂದು ವೇಳೆ ಸಂಘಪರಿವಾರ ನಾಯಕರಾಗಿದ್ದರೆ, ಸ್ಥಳಕ್ಕೆ ಬಂದು ನೆರೆದವರನ್ನು ಪ್ರಚೋದಿಸುವ ಭಾಷಣ ಮಾಡುತ್ತಿದ್ದರು. ಆದರೆ ದಿಲ್ಲಿಯಿಂದ ಬಂದ ರೈತ ಮುಖಂಡರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ತಾಳ್ಮೆಯಿಂದ ಭಾಷಣ ಮಾಡಿದರು. ತಮ್ಮ ಭಾಷಣಗಳಲ್ಲಿ ಎಲ್ಲೂ ಪ್ರಚೋದಕ ಮಾತುಗಳನ್ನು ಆಡಲಿಲ್ಲ. ಒಂದು ವೇಳೆ ಅಂತಹ ಮಾತುಗಳನ್ನು ಆಡಿದ್ದರೆ ರೈತರು ಪ್ರತಿ ದಾಳಿ ನಡೆಸುತ್ತಿದ್ದರು.

ಅಪಘಾತಗೈದ ಕಾರು ಭಸ್ಮವಾಗಿ ಬಿಡುತ್ತಿತ್ತು. ರೈತ ಮುಖಂಡರು ಹಿಂಸಾಚಾರದ ಆರೋಪ ಹೊತ್ತು ಜೈಲಲ್ಲಿರುತ್ತಿದ್ದರು. ರೈತರೆಲ್ಲರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿ ಮೀಡಿಯಾಗಳು ವಿಚಾರಣೆ ನಡೆಸುತ್ತಿದ್ದವು. ಪ್ರತಿಭಟನೆಯನ್ನು ದಮನ ಮಾಡಿ ಬಿಡುತ್ತಿದ್ದವು. ರೈತರ ತಾಳ್ಮೆ ಪ್ರತಿಭಟನೆಯ ಶಕ್ತಿಯನ್ನು ಹೇಳುತ್ತಿದೆ. ಅಪಘಾತ ನಡೆದ ಬಳಿಕ ಅದನ್ನು ಸರಕಾರ ನಿರ್ವಹಿಸುತ್ತಿರುವ ರೀತಿ, ಪರೋಕ್ಷವಾಗಿ ಅಪಘಾತವನ್ನು ಸಮರ್ಥಿಸುವಂತಿದೆ. ಯಾಕೆ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ ಎಂದರೆ, ನಾವು ಮರಣೋತ್ತರ ಪರೀಕ್ಷೆಯಲ್ಲಿ ವ್ಯಸ್ತರಾಗಿದ್ದೆವು ಎಂದು ಪೊಲೀಸ್ ಅಧಿಕಾರಿ ಬಾಲಿಶ ಕಾರಣ ನೀಡುತ್ತಾರೆ. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸದೇ ಇದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದವರು ಕೇಂದ್ರ ಗೃಹ ಸಚಿವರು . ಇಲ್ಲಿ ಆರೋಪಿಯ ತಂದೆಯೇ ಸಹಾಯಕ ಗೃಹ ಸಚಿವರಾಗಿರುವುದರಿಂದ, ಅವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? ಆರೋಪಿಯ ತಂದೆ ಗೃಹ ಸಚಿವರಾಗಿರುವವರೆಗೆ ಪೊಲೀಸರು ಧೈರ್ಯದಿಂದ ಕಾರ್ಯಾಚರಣೆ ನಡೆಸುವುದಾದರೂ ಹೇಗೆ? ತನಿಖೆಯ ಹಾದಿ ಸುಗಮವಾಗಬೇಕಾದರೆ ಮೊತ್ತ ಮೊದಲು ಸಹಾಯಕ ಗೃಹ ಸಚಿವ ಅಜಯ್ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಆಗ ಮಾತ್ರ ಪೊಲೀಸರಿಗೆ ತನಿಖೆ ನಡೆಸುವ ನೈತಿಕ ಶಕ್ತಿ ದೊರಕುತ್ತದೆ. ಅವರ ರಾಜೀನಾಮೆ ಇಲ್ಲದೆ ನಡೆಸುವ ತನಿಖೆ, ಒಂದು ಅಣಕವಷ್ಟೇ. ಅದರಿಂದ ಸಂತ್ರಸ್ತರಿಗೆ ಯಾವುದೇ ರೀತಿಯ ನ್ಯಾಯ ದೊರಕಲಾರದು.

ಹಿಂಸಾಚಾರದ ಬಳಿಕ ರೈತರು ಪ್ರದರ್ಶಿಸಿದ ಒಗ್ಗಟ್ಟು, ಸಂಯಮ ಪ್ರತಿಭಟನೆಯ ಭವಿಷ್ಯದ ದಾರಿಯನ್ನು ಸ್ಪಷ್ಟಪಡಿಸಿದೆ. ಕಾರ್ಪೊರೇಟ್ ದೊರೆಗಳಿಗೆ ಪ್ರತಿಭಟನೆಯನ್ನು ಬಗ್ಗು ಬಡಿಯಲು ಇರುವ ದಾರಿಯೆಂದರೆ, ಹಿಂಸಾಚಾರ. ರೈತರನ್ನು ಕಾನೂನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಿ ಬಳಿಕ, ಪೊಲೀಸರ ಮೂಲಕ ಬಗ್ಗು ಬಡಿಯುವುದು. ರೈತರನ್ನು ರೈತರಲ್ಲ, ಗೂಂಡಾಗಳು ಎಂದು ಬಿಂಬಿಸಿ, ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಳುವುದು. ಆದರೆ ರೈತರು ಅದಕ್ಕೆ ಅವಕಾಶ ಕೊಟ್ಟಿಲ್ಲ. ರೈತ ಪ್ರತಿಭಟನೆ ಇದೇ ರೀತಿ ಸಂಯಮದಿಂದ ಮುನ್ನಡೆದರೆ, ಸುಪ್ರೀಂಕೋರ್ಟ್ ಶೀಘ್ರದಲ್ಲೇ ತನ್ನ ತೀರ್ಪನ್ನು ನೀಡುವ ಒತ್ತಡಕ್ಕೆ ಬೀಳುತ್ತದೆ. ಸರಕಾರ ರೈತರಿಗೆ ತಲೆ ಬಾಗಲೇ ಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ರೈತರನ್ನು ಕೊಂದ ಆರೋಪಿಗಳಿಗೆ ಶಿಕ್ಷೆಯಾಗದೇ ಇದ್ದರೆ, ರೈತರ ನೆತ್ತರು, ಕಣ್ಣೀರು ಸರಕಾರವನ್ನು ಸುಮ್ಮಗೆ ಬಿಡುವುದಿಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ 'ಜೈ ಜವಾನ್-ಜೈ ಕಿಸಾನ್' ಘೋಷಣೆಯನ್ನು ಮಾಡಿದ್ದರು. ದೇಶ ಉಳಿಯಬೇಕಾದರೆ ಇವರಿಬ್ಬರು ಅತ್ಯಗತ್ಯ. ಇಂದು ದೇಶವನ್ನು ರಕ್ಷಿಸಲು ರೈತರೇ ಯೋಧರಾಗಿ ಬೀದಿಗಿಳಿದಿದ್ದಾರೆ. ಈ ನಿಜ ಯೋಧರ ಮುಂದೆ, ಅಂಬಾನಿ, ಅದಾನಿಗಳೆಂಬ ನಕಲಿ ರೈತರು ಸೋಲಲೇಬೇಕು. ರೈತರ ನೆತ್ತರು ಬಿದ್ದ ನೆಲದಲ್ಲಿ, ಮತ್ತೆ ಭತ್ತದ ತೆನೆಗಳು ತಲೆದೂಗುವ ದಿನಗಳು ಬರಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News