ಆರ್. ಅಶೋಕ್ ವಿರುದ್ಧ ಬೆಂಗಳೂರು ಬಿಜೆಪಿ ಶಾಸಕರಿಂದ ಆಕ್ರೋಶ

Update: 2021-10-09 07:03 GMT

ಬೆಂಗಳೂರು, ಅ.8: ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ರಾಜಧಾನಿ ಬೆಂಗಳೂರಿನ ಬಿಜೆಪಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದು, ಅಶೋಕ್ ಅವರು ತಮ್ಮ ಕ್ಷೇತ್ರಗಳ ವಿಷಯದಲ್ಲಿ ಮೂಗು ತೂರಿಸುವುದಕ್ಕೆ ಕಡಿವಾಣ ಹಾಕಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ವರಿಷ್ಠರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಬೆಂಗಳೂರು ನಗರದ ಏಳು ಮಂದಿ ಸಚಿವರು ಇದ್ದಾರೆ. ಬೆಂಗಳೂರು ಉಸ್ತುವಾರಿಯನ್ನು ಯಾವ ಸಚಿವರಿಗೂ ವಹಿಸಿಕೊಟ್ಟಿಲ್ಲ. ಆದರೆ, ಅಶೋಕ್ ಅವರು ಏಕಪಕ್ಷೀಯವಾಗಿ ಬಹುತೇಕ ಎಲ್ಲ ಕ್ಷೇತ್ರಗಳ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು ಬಿಜೆಪಿ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

ಕೆಲವು ತಾಂತ್ರಿಕ ಕಾರಣಗಳಿಂದ ಬಿಡಿಎಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ ಕೇಳಿದ್ದರು. ಆದರೆ, ಇದರ ಲಾಭ ಪಡೆದುಕೊಂಡ ಅಶೋಕ್ ಅವರು ಬಿಡಿಎ ವಿಚಾರದಲ್ಲಿ ಅದರ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ವೇಗಕ್ಕೆ ನಾನೇ ತಡೆ ನೀಡಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇಷ್ಟೇ ಅಲ್ಲದೇ, ಬಿಬಿಎಂಪಿ ಮತ್ತು ಇತರ ಇಲಾಖೆಗಳಿಂದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಬರಬೇಕಾಗಿದ್ದ ಅನುದಾನಗಳಿಗೂ ಅಶೋಕ್ ಕತ್ತರಿ ಹಾಕುತ್ತಿರುವುದರಿಂದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಸದ್ಯದಲ್ಲೇ ಆಕ್ರೋಶ ಆಸ್ಫೋಟ: ಬಿಡಿಎ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಲವು ತಿಂಗಳಿಂದಲೂ ಅಶೋಕ್ ಅವರು ಶಾಸಕರ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು ಎಲ್ಲರಿಗೂ ಅಸಮಾಧಾನ ತಂದಿದೆ ಎಂದು ತಿಳಿದುಬಂದಿದೆ. ವಿಶ್ವನಾಥ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಶಾಸಕರು ತಮ್ಮ ಅಸಮಾಧಾನವನ್ನು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರ ಮುಂದೆ ತೋಡಿಕೊಳ್ಳಲಾರಂಭಿಸಿದ್ದಾರೆ.

ಯಾರು ಬೆಂಗಳೂರು ಉಸ್ತುವಾರಿ ಸಚಿವರು?: ಅಶೋಕ್ ಸೇರಿದಂತೆ ಬೆಂಗಳೂರು ನಗರದ ಏಳು ಸಚಿವರು ಇದ್ದಾರೆ. ಎಲ್ಲರೂ ಬೆಂಗಳೂರಿಗೆ ಸಂಬಂಧಪಟ್ಟವರಿದ್ದಾರೆ. ಆದರೆ, ಅಶೋಕ್ ಅವರು ಮಾತ್ರ ಸ್ವಯಂ ಘೋಷಿತ ಬೆಂಗಳೂರು ಉಸ್ತುವಾರಿ ಸಚಿವರಂತೆ ವರ್ತಿಸುತ್ತಿದ್ದಾರೆ. ಇವರು ಶಾಸಕರ ಗಮನಕ್ಕೆ ಬಾರದೇ ಅಥವಾ ಅವರನ್ನು ಕರೆಯದೇ ಬೆಂಗಳೂರಿಗೆ ಸಂಬಂಧಿಸಿದಂತೆ ಏಕಪಕ್ಷೀಯವಾಗಿ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಹಾಗಾದರೆ, ಇನ್ನುಳಿದ ಮಂತ್ರಿಗಳ ಅಸ್ತಿತ್ವವೇನು? ಅವರು ಬೆಂಗಳೂರಿಗೆ ಸಂಬಂಧಪಟ್ಟವರಲ್ಲವೇ? ಎಂಬ ಪ್ರಶ್ನೆಗಳು ಅಸಮಾಧಾನಿತ ಶಾಸಕರಿಂದ ವ್ಯಕ್ತವಾಗತೊಡಗಿವೆ. ಅಶೋಕ್‌ಗೆ ಅಧಿಕಾರ ಕೊಟ್ಟವರಾರು?: ಇದುವರೆಗೆ ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿಯ ಕೈಯಲ್ಲಿದೆ. ಆದರೆ, ಮುಖ್ಯಮಂತ್ರಿಯ ಗಮನಕ್ಕೂ ಬಾರದೇ ಅಶೋಕ್ ಬೆಂಗಳೂರಿಗೆ ಸಂಬಂಧಿಸಿದ ಸಭೆಗಳನ್ನು ನಡೆಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಮೂಲಕ ಬೆಂಗಳೂರು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಬರಬೇಕಾಗಿರುವ ಅನುದಾನಕ್ಕೆ ಕತ್ತರಿ ಹಾಕಿಸುತ್ತಿದ್ದಾರೆ.

ಅಶೋಕ್ ಅವರ ಈ ಏಕಪಕ್ಷೀಯ ನಿರ್ಧಾರಗಳಿಂದ ಬೇಸತ್ತಿರುವ ಶಾಸಕರು ಅವರ ವಿರುದ್ಧ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರಲ್ಲಿ ಆಕ್ರೋಶ ವ್ಯಕ್ತಪಡಿಸಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕೂಡಲೇ ಮುಖ್ಯಮಂತ್ರಿ ಮಧ್ಯ ಪ್ರವೇಶ ಮಾಡಿ ಅಶೋಕ್ ಅವರ ಕಾರ್ಯವೈಖರಿಗೆ ಕಡಿವಾಣ ಹಾಕಬೇಕು ಮತ್ತು ತಮ್ಮ ಕ್ಷೇತ್ರಗಳಿಗೆ ಸೂಕ್ತ ಅನುದಾನಗಳನ್ನು ಬಿಡುಗಡೆ ಮಾಡಬೇಕು. ಅದೇ ರೀತಿ, ಅನುದಾನದ ವಿಚಾರದಲ್ಲಿ ಅಶೋಕ್ ಅವರ ಮಾತಿಗೆ ಕಿಮ್ಮತ್ತು ನೀಡಬಾರದು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದೂ ಶಾಸಕರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜಧಾನಿಯಿಂದ ದೂರವಿಡಿ

ಅಶೋಕ್ ಅವರಿಗೆ ಕಂದಾಯದಂತಹ ಪ್ರಮುಖ ಖಾತೆಯನ್ನು ವಹಿಸಿಕೊಡಲಾಗಿದೆ. ಇದು ರಾಜ್ಯಕ್ಕೆ ಸಂಬಂಧಿಸಿದ ಇಲಾಖೆಯಾಗಿದ್ದು, ತಮ್ಮ ಖಾತೆಯ ಕಡೆಗೆ ಗಮನಹರಿಸಿದರೆ, ಭವಿಷ್ಯದಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಬೆಂಗಳೂರು ನಗರದ ಬಗ್ಗೆ ತಲೆ ಹಾಕುವ ಮೂಲಕ ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಇದರಿಂದಾಗಿ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಶೋಕ್ ಅವರು ಬೆಂಗಳೂರು ನಗರದ ವಿಚಾರದಲ್ಲಿ ತಲೆ ಹಾಕದಂತೆ ಮಾಡಬೇಕು ಎಂದು ಶಾಸಕರು ವರಿಷ್ಠರಲ್ಲಿ ದೂರು ಸಲ್ಲಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News