ಕಾಸರಗೋಡು: ಪಾರ್ಶ್ವವಾಯುಪೀಡಿತ ಛಲಗಾರ ಬಹುಕೋಟಿ ಟಿಂಬರ್ ಉದ್ಯಮದ ಒಡೆಯ

Update: 2021-10-10 08:12 GMT
ಶಾನವಾಸ್, ಪುತ್ರಿ ನಿದಾ (ಫೋಟೊ: the new indian express)

ಕಾಸರಗೋಡು : ಹನ್ನೊಂದು ವರ್ಷದ ಹಿಂದೆ ಪಾರ್ಶ್ವವಾಯುಪೀಡಿತರಾಗಿ ಹಾಸಿಗೆಬಿಟ್ಟು ಮೇಲೇಳಲಾಗದ ಸ್ಥಿತಿಯಲ್ಲಿದ್ದರೂ, ಛಲ ಬಿಡದೇ ಟಿಂಬರ್ ವಹಿವಾಟು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶಾನವಾಸ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇಂದು ಟಿ.ಎ.ಶಾನವಾಸ್ (46) ಕೇವಲ ಯಶಸ್ವಿ ಉದ್ಯಮಿಯಷ್ಟೇ ಅಲ್ಲ; ಎಲ್ಲ ಬಗೆಯ ಅಗತ್ಯತೆಗಳಿಗೆ ಸೂಕ್ತವಾದ ಟಿಂಬರ್ ಪೂರೈಸುವ ವಿಶ್ವಾಸಾರ್ಹ ಟಿಂಬರ್ ವ್ಯಾಪಾರಿಯಾಗಿ ಬೆಳೆದಿದ್ದಾರೆ. ತಮ್ಮ 18X15 ಅಡಿಯ ಕೊಠಡಿಯ ಮಧ್ಯದಲ್ಲಿ ಹಾಕಿದ ಸೆಮಿ ಆಟೊಮ್ಯಾಟಿಕ್ ಹೈಡ್ರಾಲಿಕ್ ಹಾಸ್ಪಿಟಲ್ ಬೆಡ್‌ನಿಂದಲೇ ಎಲ್ಲ ವಹಿವಾಟುಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಎದುರುಗಡೆ ಗೋಡೆಯಲ್ಲಿ ಅಳವಡಿಸಿರುವ 32 ಇಂಚಿನ ಮಾನಿಟರ್, ತಮ್ಮ ಎರಡೂ ಟಿಂಬರ್ ಮಳಿಗೆ, ಡಿಪೋ ಹಾಗೂ ಮನೆಯ ಸುತ್ತಮುತ್ತಲ ಸಿಸಿ ಟಿವಿ ದೃಶ್ಯಾವಳಿಗಳನ್ನು ತೋರಿಸುತ್ತಿರುತ್ತವೆ. ಎಡ ಕಿವಿಗೆ ಅಳವಡಿಸಿದ ಆ್ಯಪಲ್ ಏರ್‌ಪಾಡ್ ಸದಾ ಗ್ರಾಹಕರ ಜತೆ ಸಂಪರ್ಕ ಬೆಸೆಯುತ್ತದೆ. "ಇದು ನನ್ನ ಕಚೇರಿ. ಮೊದಲು ನನ್ನ ಕಿವಿಗೆ ಬೀಳದೇ ಯಾವೊಂದು ವಹಿವಾಟೂ ನಡೆಯುವುದಿಲ್ಲ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಮಗಳು ನಿದಾ ಈ ಉದ್ಯಮಿಗೆ ಸಹಾಯಕಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾಳೆ.

ಶಾನವಾಸ್ ರಸ್ತೆ ಅಪಘಾತದಲ್ಲಿ ಗಾಯಗೊಂಡು ಪಾರ್ಶ್ವವಾಯುಪೀಡಿತರಾದಾಗ ನಿದಾ ಫಾತಿಯಾ 40 ದಿನದ ಮಗು. ಹಿರಿಯ ಮಗಳು ಫಿದಾ ಫಾತಿಮಾಗೆ ಆರು ವರ್ಷ. ಶಾನವಾಸ್‌ಗೆ ಆಗ 35 ವರ್ಷ. 2010ರ ಮೇ 6ರಂದು ಮುಂಜಾನೆ 4ಕ್ಕೆ ಟಿಂಬರ್ ಖರೀದಿಗಾಗಿ ಉಡುಪಿಗೆ ಹೋಗಲು ಸಜ್ಜಾಗುತ್ತಿದ್ದಾಗ ಪತ್ನಿ ರಹ್ಮಾತ್, ನಿದಾಳನ್ನು ಕೈಗಿತ್ತು ನೀವು ಇದುವರೆಗೆ ಮಗುವನ್ನು ಎತ್ತಿಕೊಂಡಿಲ್ಲ. ಹೊರಡುವ ಮುನ್ನ ಮಗಳನ್ನು ಎತ್ತಿಕೊಳ್ಳಿ ಎಂದು ಹೇಳಿದ್ದರು.

ನಿದಾಳನ್ನು ಅಪ್ಪ ಎತ್ತಿಕೊಂಡಿದ್ದು ಅದೇ ಮೊದಲು; ಅದೇ ಕೊನೆ. ಉಡುಪಿಯಿಂದ ಬರುತ್ತಿದ್ದಾಗ ಪೆರಿಯಾ ಸಮೀಪದ ಕುಣಿಯಾದಲ್ಲಿ ಕಾರು ಪಲ್ಟಿಯಾಯಿತು. ಕಾರಿನಿಂದ ಶಾನವಾಸ್ ಹೊರಕ್ಕೆಸೆಯಲ್ಪಟ್ಟರು. ಯಾವ ವಾಹನ ಚಾಲಕರೂ ನೆರವಿಗೆ ಬರಲಿಲ್ಲ., ಕೊನೆಗೆ ಇಬ್ಬರು ಟ್ರಕ್ ಚಾಲಕರು ತಮ್ಮದೇ ಟ್ರಕ್‌ನಲ್ಲಿ ಕರೆದೊಯ್ದು ಕಾಞಂಗಾಡು ಆಸ್ಪತ್ರೆಗೆ ದಾಖಲಿಸಿದರು. ಟ್ರಕ್‌ನಲ್ಲಿ ಪ್ರಯಾಣಿಸಿದ್ದು ಬಹುಶಃ ಗಾಯ ಉಲ್ಬಣಿಸಲು ಕಾರಣವಾಯಿತು ಎಂದು ಅವರು ಹೇಳುತ್ತಾರೆ.

ವೈದ್ಯರು ಮಂಗಳೂರಿಗೆ ಕಳುಹಿಸಿಕೊಟ್ಟರು. ಬೆನ್ನುಹುರಿಗೆ ಗಾಯವಾಗಿರುವುದನ್ನು ದೃಢಪಡಿಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯಕಾರಿ ಎಂದು ಸಲಹೆ ಮಾಡಿದರು. ನಾಲ್ಕೂವರೆ ತಿಂಗಳು ಐಸಿಯುನಲ್ಲಿ ಕಳೆದರು. ಕಂಕುಳಲ್ಲಿ ಪುಟ್ಟ ಮಗುವನ್ನು ಎತ್ತಿಕೊಂಡು ರಹ್ಮತ್ ಸಹಾಯಕ್ಕೆ ನಿಂತರು. ಆದರೂ ಆರೋಗ್ಯ ಸುಧಾರಿಸದಿದ್ದಾಗ ವೆಲ್ಲೋರ್‌ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ವರ್ಗಾಯಿಸಲಾಯಿತು. ಅಲ್ಲಿ ವೈದ್ಯರು ಸ್ಟೀಲ್ ರಾಡ್ ಅಳವಡಿಸಿ ಕುತ್ತಿಗೆ ಚಲನೆ ನಿಯಂತ್ರಿಸಲು ನೆರವಾದರು. ಐದು ತಿಂಗಳ ಕಾಲ ಅಲ್ಲಿ ಉಳಿಯಬೇಕಾಯಿತು.

ಐದನೇ ತಿಂಗಳು ಕೂಡಿಟ್ಟ ಹಣವೆಲ್ಲ ಮುಗಿದಾಗ ಆಸ್ಪತ್ರೆಯಿಂದಲೇ ತಮ್ಮ ಟಿಂಬರ್ ವಹಿವಾಟು ಮುಂದುವರಿಸಲು ಶಾನವಾಸ್ ನಿರ್ಧರಿಸಿದರು. ರಹ್ಮತ್ ಅವರ ಚಿನ್ನ ಒತ್ತೆ ಇಟ್ಟು ಟಿಂಬರ್ ವ್ಯವಹಾರ ಮುಂದುವರಿಸಿದರು. ಒಂದು ಲಕ್ಷ ರೂಪಾಯಿ ಬಂಡವಾಳದಲ್ಲಿ ಮತ್ತೆ ವ್ಯವಹಾರ ಆರಂಭವಾಯಿತು. ಬಳಿಕ ಎಳೇರಿ ಪಂಚಾಯ್ತಿಯ ಕೊಂಬತ್ತೂರಿಗೆ ವಾಪಸ್ಸಾದರು. ಅಲ್ಲಿಂದ ಬೆಳೆಯಲು ಆರಂಭವಾದ ವ್ಯವಹಾರದಲ್ಲಿ ಮತ್ತೆ ಹಿನ್ನಡೆದಾದದ್ದೇ ಇಲ್ಲ ಎಂದು ಅವರು ಹೇಳುತ್ತಾರೆ.

ಇದೀಗ ಅವರು ದೇಶೀಯ ಮರದ ಜತೆ ಆಮದು ಮಾಡಿಕೊಂಡ ಮರಮುಟ್ಟು ಮಾರಾಟ ಮಾಡುತ್ತಾರೆ. ಒಂದು ಬಾರಿ ಇವರೊಂದಿಗೆ ವಹಿವಾಟು ನಡೆಸಿದವರು ಮತ್ತೆ ಅವರ ಸ್ನೇಹಿತರಿಗೆ ಹೇಳಿ ಹೊಸ ಗಿರಾಕಿಗಳನ್ನು ಕಳುಹಿಸಿಕೊಡುವ ಮೂಲಕ ವ್ಯವಹಾರ ಬೆಳೆದಿದೆ. ಶಾನವಾಸ್ ಮಾರಾಟದ ಗುರು ಆಗಿದ್ದರೆ ಬಿಕಾಂ ಪದವೀಧರೆ ರಹ್ಮತ್ ದಾಖಲೆಗಳನ್ನು ನಿರ್ವಹಿಸುತ್ತಾರೆ. ಕಳೆದ ತಿಂಗಳು 17ನೇ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಪರಪ್ಪ ಎಂಬಲ್ಲಿ ಹೊಸ ಮಳಿಗೆ ತೆರೆದಿದ್ದಾರೆ. ಪರಪ್ಪ ಡಿಪೋದಲ್ಲಿ ಇದೀಗ 15 ಮಂದಿ ಬಡಗಿಳಿಗೆ ಇವರ ಉದ್ಯಮ ಉದ್ಯೋಗ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News