ಗಾಂಧಿ ಬಗ್ಗೆ ಕುತೂಹಲವಿಲ್ಲದೇ ಗಾಂಧಿ ಬರವಣಿಗೆ ಸಾಧ್ಯವಿಲ್ಲ: ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

Update: 2021-10-10 17:09 GMT

ಬೆಂಗಳೂರು, ಅ.10: ಗಾಂಧಿ ಬದುಕಿದ್ದಾಗಲೇ, ಗಾಂಧಿಯ ಕುರಿತು ಜನರು ದಂತಕಥೆಗಳನ್ನು ರಚಿಸಿದ್ದರು. ಇದು ಇತಿಹಾಸವನ್ನು ಮಾತ್ರವಲ್ಲದೇ, ಭವಿಷ್ಯವನ್ನು ಸೂಚಿಸುತ್ತಿತ್ತು. ಈ ನಿಟ್ಟಿನಲ್ಲಿ ಇಂದಿಗೂ ಗಾಂಧಿ ಕುರಿತು ಪುಸ್ತಕಗಳು ಹೊರಬರುತ್ತಿವೆ. ಗಾಂಧಿಯ ಬಗ್ಗೆ ಕುತೂಹಲವಿಲ್ಲದೇ ಅವರ ಕುರಿತು ಉತ್ತಮವಾಗಿ ಬರೆಯಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದ್ದಾರೆ.

ರವಿವಾರ ಸುಚಿತ್ರ ಫಿಲಂ ಸೊಸೈಟಿಯಲ್ಲಿ ರಾಮಚಂದ್ರ ಗುಹಾ ಅವರ ‘ಗಾಂಧಿ: ಪ್ರಪಂಚವನ್ನು ಬದಲಿಸಿದ ಆ ವರ್ಷಗಳು’ ಎಂಬ ಕನ್ನಡ ಅನುವಾದಿತ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗಾಂಧಿ ಕೇವಲ ಐತಿಹಾಸಿಕ ಕಥಾನಾಯಕನಲ್ಲ. ಅದಕ್ಕೂ ಮಿಗಿಲಾಗಿ ಒಬ್ಬ ದಾರ್ಶನಿಕನಾಗಿದ್ದಾರೆ. ಹೀಗಾಗಿ, ಈ ಪುಸ್ತಕದಲ್ಲಿ ಗಾಂಧಿಯ ಜೀವನವನ್ನು ಒಂದು ಐತಿಹಾಸಿಕ ದಾರ್ಶನಿಕ ಪ್ರಯಾಣದಂತೆ ಬಿಂಬಿಸಲಾಗಿದೆ ಎಂದು ತಿಳಿಸಿದರು.

ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಮಾತನಾಡಿ, ಕಳೆದೆರಡು ದಶಕಗಳಿಂದ ವಿಶ್ವದಲ್ಲಿ ಗಾಂಧಿಯವರ ಕುರಿತು ನಡೆದ ಚರ್ಚೆಗಳಷ್ಟು ಯಾವ ನಾಯಕರ ಬಗ್ಗೆಯೂ ನಡೆದಿಲ್ಲ. ಇದು ಅವರ ಚಿಂತನೆಗಳ ಪ್ರಸ್ತುತತೆಯನ್ನು ಪ್ರತಿಪಾದಿಸುತ್ತದೆ. ಗಾಂಧಿಯನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡುವುದಕ್ಕಿಂತ ನಮ್ಮ ಜೀವನ ಕ್ರಮವಾಗಿ ಅಳವಡಿಸಿಕೊಳ್ಳುವುದು ಭಿನ್ನವಾಗಿರುತ್ತದೆ. ಗಾಂಧಿಯನ್ನು ಕುರಿತ ಯಾವುದೇ ಬರವಣಿಗೆ ಇರಲಿ, ಈ ಕಾಲಕ್ಕೆ ಅನುಗುಣವಾಗಿ ಬಿಂಬಿಸುವಂತಿರಬೇಕು. ಈ ಪುಸ್ತಕದಲ್ಲಿ ಆ ಕೆಲಸವನ್ನು ಕಾಣಬಹುದಾಗಿದೆ ಎಂದರು. 

ಗಾಂಧಿ ರೂಪುಗೊಂಡ ಕ್ರಮವನ್ನು ಪ್ರಾಯೋಗಿಕವಾಗಿ ಈ ಪುಸ್ತದಲ್ಲಿ ತೋರಿಸಲಾಗಿದೆ. ಅಲ್ಲದೇ ಅವರು ಮಹಿಳೆಯರ ಬಗ್ಗೆ ಹೊಂದಿರುವ ನಿಲುವನ್ನು ಕಾಣಬಹುದು. ದೇಶದಲ್ಲಿ ಕೋಮುಗಲಭೆಗಳು ಕಡಿಮೆಯಾಗಬೇಕಾದರೆ, ಮಹಿಳೆಯನ್ನು ನಾಯಕಯರನ್ನಾಗಿಸಬೇಕು ಎಂಬ ಧೋರಣೆ ಈ ಪುಸ್ತಕದಲ್ಲಿ ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ಲೇಖಕ ರಾಮಚಂದ್ರ ಗುಹಾ, ಸತೀಶ್ ಚಪ್ಪರಿಕೆ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News