2022ರ ಹಜ್ ಯಾತ್ರೆಗೆ ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್ ಆಗಿರಲಿವೆ:‌ ಕೇಂದ್ರ ಸಚಿವ ನಕ್ವಿ

Update: 2021-10-10 15:55 GMT

ಮುಂಬೈ,ಅ.10: ಮುಂದಿನ ವರ್ಷದ ಹಜ್ ಯಾತ್ರೆಗಾಗಿ ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್ ಆಗಿರುತ್ತವೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಇಲ್ಲಿ ತಿಳಿಸಿದರು.

ಶನಿವಾರ ಇಲ್ಲಿಯ ಹಜ್ ಭವನದಲ್ಲಿ ಆನ್‌ಲೈನ್ ಬುಕಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿದ ಬಳಿಕ ಹೇಳಿಕೆಯಲ್ಲಿ ನಕ್ವಿ, ಇಂಡೋನೇಶ್ಯಾದ ಬಳಿಕ ಭಾರತವೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಜ್ ಯಾತ್ರಿಗಳನ್ನು ಕಳುಹಿಸುತ್ತಿದೆ ಎಂದು ತಿಳಿಸಿದರು. ಕೋವಿಡ್-19 ಸಾಂಕ್ರಾಮಿಕ ಮತ್ತು ಸೌದಿ ಅರೇಬಿಯಾದ ನಿರ್ಧಾರಗಳಿಂದಾಗಿ 2020 ಮತ್ತು 2021ರಲ್ಲಿ ಹಜ್ ಯಾತ್ರೆ ಸಾಧ್ಯವಾಗಿರಲಿಲ್ಲ. ಅ.21ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಹಜ್ ಪುನರ್‌ಪರಿಶೀಲನಾ ಸಭೆಯಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆಗಳ ಬಳಿಕ ಮುಂದಿನ ವರ್ಷದ ಹಜ್ ಯಾತ್ರಾ ಕಾರ್ಯಕ್ರಮವನ್ನು ಪ್ರಕಟಿಸಲಾಗುವುದು ಎಂದರು. 

ಅಲ್ಪಸಂಖ್ಯಾತರ ವ್ಯವಹಾರಗಳ, ವಿದೇಶಾಂಗ ವ್ಯವಹಾರಗಳ ಮತ್ತು ನಾಗರಿಕ ವಾಯುಯಾನ ಸಚಿವಾಲಯಗಳ ಅಧಿಕಾರಿಗಳು, ಸೌದಿ ಅರೇಬಿಯಕ್ಕೆ ಭಾರತದ ರಾಯಭಾರಿ, ಜಿದ್ದಾದಲ್ಲಿನ ಭಾರತದ ಕಾನ್ಸುಲ್ ಜನರಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕೋವಿಡ್ ಶಿಷ್ಟಾಚಾರಗಳು,ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ 2022ರ ಹಜ್ ಯಾತ್ರಿಗಳಿಗಾಗಿ ಭಾರತದಲ್ಲಿ ಮತ್ತು ಸೌದಿ ಅರೇಬಿಯಾದಲ್ಲಿ ವಿಶೇಷ ತರಬೇತಿಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ನಕ್ವಿ ಹೇಳಿದರು.
 
2020ರಲ್ಲಿ 700ಕ್ಕೂ ಅಧಿಕ ಮತ್ತು 2021ರಲ್ಲಿ 2,100ಕ್ಕೂ ಅಧಿಕ ಮಹಿಳೆಯರು ‘ಮೆಹರಮ್(ಪುರುಷ ಸಹವರ್ತಿ) ’ ಇಲ್ಲದೆ ಹಜ್ ಯಾತ್ರೆಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಅವರು ಯಾತ್ರೆ ಕೈಗೊಳ್ಳಲು ಬಯಸಿದರೆ ಅವರ ಅರ್ಜಿಗಳು 2022ರ ಹಜ್ ಯಾತ್ರೆಗೆ ಅರ್ಹವಾಗಿರುತ್ತವೆ.
  
‘ಮೆಹರಮ್’ ಇಲ್ಲದೆ 2022ರ ಹಜ್‌ಗೆ ತೆರಳಲು ಬಯಸುವ ಇತರ ಮಹಿಳೆಯರೂ ಅರ್ಜಿಗಳನ್ನು ಸಲ್ಲಿಸಬಹುದು. ಈ ವರ್ಗದಡಿಯ ಎಲ್ಲ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಶನಿವಾರ ಭಾರತೀಯ ಹಜ್ ಸಮಿತಿಯ ಸದಸ್ಯರೊಂದಿಗೆ 2022ರ ಹಜ್ ಯಾತ್ರೆಗಾಗಿ ಸಿದ್ಧತೆಗಳ ಬಗ್ಗೆಯೂ ನಕ್ವಿ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News