ರಾಕೇಶ್ ಝುನ್‍ಝುನ್‍ವಾಲ ಅವರ 'ಆಕಾಶ ಏರ್' ಗೆ ಕೇಂದ್ರ ವಿಮಾನಯಾನ ಸಚಿವಾಲಯದ ಹಸಿರು ನಿಶಾನೆ

Update: 2021-10-12 06:02 GMT
ರಾಕೇಶ್ ಝುನ್‍ಝುನ್‍ವಾಲ (Photo: PTI)

ಹೊಸದಿಲ್ಲಿ: ದೇಶದ ಖ್ಯಾತ ಸ್ಟಾಕ್ ಮಾರ್ಕೆಟ್ ಹೂಡಿಕೆದಾರ ರಾಕೇಶ್ ಝುನ್‍ಝುನ್‍ವಾಲ ಹಾಗೂ ಜೆಟ್ ಏರ್‍ವೇಸ್ ಸಂಸ್ಥೆಯ ಮಾಜಿ ಸಿಇಒ ವಿನಯ್ ದುಬೆ ಅವರಿಂದ ಬೆಂಬಲಿತವಾಗಿರುವ 'ಆಕಾಶ ಏರ್' ಎಂಬ ಹೊಸ ವಿಮಾನಯಾನ ಸಂಸ್ಥೆಗೆ ಭಾರತದಲ್ಲಿ ಕಾರ್ಯಾಚರಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ನಿರಾಕ್ಷೇಪಣಾ ಪತ್ರ ನೀಡಿದೆ.

ಈ ನೂತನ ವಿಮಾನಯಾನ ಸಂಸ್ಥೆ 2022ರ ಬೇಸಿಗೆಯ ಸಮಯದಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಹೋಲ್ಡಿಂಗ್ ಕಂಪೆನಿ ಎಸ್‍ಎನ್‍ವಿ ಏವ್ಯೇಷನ್ ಪ್ರೈವೇಟ್ ಲಿಮಿಟೆಡ್ ಹೇಳಿದೆ.

ಈ ಹೊಸ ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಇಂಡಿಗೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆದಿತ್ಯ ಘೋಷ್ ಕೂಡ ಇದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಅಂದಾಜು 70 ವಿಮಾನಸೇವೆಗಳನ್ನು ಒದಗಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ವಿಮಾನ ತಯಾರಿಕಾ ಸಂಸ್ಥೆ ಏರ್‍ಬಸ್ ಈ ನೂತನ ಕಂಪೆನಿಯೊಂದಿಗೆ ವಿಮಾನಯಾನ ಖರೀದಿ ಒಪ್ಪಂದದ ಕುರಿತಂತೆ ಮಾತುಕತೆ ನಡೆಸುತ್ತಿದೆ ಎಂದು ಏರ್‍ಬಸ್ ಮುಖ್ಯ ವಾಣಿಜ್ಯ ಅಧಿಕಾರಿ ಕ್ರಿಸ್ಟಿಯಾನ್ ಶೆರೆರ್ ಕಳೆದ ವಾರ ಹೇಳಿದ್ದರು. ಅಮೆರಿಕಾದ  ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ತಯಾರಿಸುವ ಬಿ737 ಮ್ಯಾಕ್ಸ್ ವಿಮಾನಗಳ ಖರೀದಿ ಕುರಿತಂತೆ ಸಂಸ್ಥೆಯ ಜತೆ ಆಕಾಸ ಮಾತುಕತೆ ನಡೆಸುತ್ತಿದೆ ಎಂಬ ಮಾಹಿತಿಯೂ ಇದೆ.

ಅಕ್ಟೋಬರ್ 5ರಂದು ರಾಕೇಶ್ ಝುನ್‍ಝುನ್‍ವಾಲ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಕುರಿತು ಅವರನ್ನು ನಂತರ ಪ್ರಶ್ನಿಸಿದಾಗ ತಾವು ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾಗಿ ಹೇಳಿಕೊಂಡಿದ್ದರು.

ಹಲವಾರು ವಿಮಾನಯಾನ ಸಂಸ್ಥೆಗಳು ನಷ್ಟದಲ್ಲಿರುವಾಗ ವಿಮಾನಯಾನ ಕ್ಷೇತ್ರ ಪ್ರವೇಶಿಸುತ್ತಿರುವ ಬಗ್ಗೆ ಇದೀಗ ಅವರನ್ನು ಕೇಳಿದಾಗ ತಮಗೇನೂ ಹೇಳಲು ಸಾಧ್ಯವಿಲ್ಲ ಆದರೆ ಯಾವುದೇ ಸನ್ನಿವೇಶವನ್ನು ಎದುರಿಸಲು ಸಿದ್ಧ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News