ತಾಲಿಬಾನ್ ಬೆಂಬಲಿಸಿ ಪೋಸ್ಟ್ ಮಾಡಿ ಬಂಧನಕ್ಕೀಡಾಗಿದ್ದ ಅಸ್ಸಾಂನ 16 ಮಂದಿ ಪೈಕಿ 14 ಮಂದಿಗೆ ಜಾಮೀನು

Update: 2021-10-12 06:31 GMT
ಸಾಂದರ್ಭಿಕ ಚಿತ್ರ

ಗುವಾಹಟಿ: ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿದ್ದಾರೆಂಬ ಆರೋಪದ ಮೇಲೆ ಅಸ್ಸಾಂ ಪೊಲೀಸರು ಆಗಸ್ಟ್ ತಿಂಗಳಿನಲ್ಲಿ ಬಂಧಿಸಿದ್ದ 16 ಜನರ ಪೈಕಿ  ಕನಿಷ್ಠ 14 ಮಂದಿಗೆ ಸ್ಥಳೀಯ ನ್ಯಾಯಾಲಯಗಳು ಜಾಮೀನು ನೀಡಿವೆ. ಬಂಧಿತರ ಪೈಕಿ ಒಬ್ಬರನ್ನು ಹೊರತುಪಡಿಸಿ ಇತರ ಎಲ್ಲರ ವಿರುದ್ಧ ಕಠಿಣ ಯುಎಪಿಎ ಕಾಯಿದೆಯನ್ನು ಹೇರಲಾಗಿದೆ. ಆದರೆ ಆರೋಪಿಗಳನ್ನು ಜೈಲಿನಲ್ಲಿಯೇ ಉಳಿಸಿಕೊಳ್ಳಲು ಯಾವುದೇ ಬಲವಾದ ಆಧಾರಗಳಿಲ್ಲ ಎಂಬ ಕಾರಣ ನೀಡಿ ನ್ಯಾಯಾಲಯಗಳು ಜಾಮೀನು ನೀಡಿವೆ ಎಂದು indianexpress.com ವರದಿ ಮಾಡಿದೆ.

ಒಟ್ಟು 14 ಮಂದಿಯನ್ನು ಬಂಧಿಸಿರುವ ವಿಷಯವನ್ನು ಅಸ್ಸಾಂ ವಿಶೇಷ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಸ್ಟ್ 21ರಂದು ಘೋಷಿಸಿದ್ದರು. ಇದರ ಮರುದಿನವೇ ಇನ್ನಿಬ್ಬರನ್ನು ಬಂಧಿಸಲಾಗಿತ್ತು. ನಿಷ್ಪಕ್ಷಪಾತವಾಗಿ ಕಾರ್ಯಾಚರಿಸುವಂತೆ ಆಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಪೊಲೀಸರಿಗೆ ಸೂಚಿಸಿದ್ದರು.

ಜಾಮೀನು ಪಡೆದವರಲ್ಲಿ 49 ವರ್ಷದ ಮೌಲಾನ ಫಝ್ಲೂಲ್ ಕರೀಂ ಖಾಸಿಮಿ ಕೂಡ ಸೇರಿದ್ದಾರೆ. ಎಐಯುಡಿಎಫ್‍ನ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಜಮೀಯತ್ ರಾಜ್ಯ ಕಾರ್ಯದರ್ಶಿಯಾಗಿರುವ ಇವರು ದರ್ರಂಗ್ ಜಿಲ್ಲೆಯ ಸಿಪಝರ್ ಗ್ರಾಮದವರು. ಅಕ್ಟೋಬರ್ 5ರಂದು ಅವರಿಗೆ ಗುವಾಹಟಿ ಹೈಕೋರ್ಟ್ ಜಾಮೀನು ನೀಡಿತ್ತಲ್ಲದೆ ನಿರ್ದಿಷ್ಟ ಫೇಸ್ಬುಕ್ ಪೋಸ್ಟ್ ಹೊರತುಪಡಿಸಿ ಅವರು ಯಾವುದೇ ಇತರ ಗಂಭೀರ ಆರೋಪ ಹೊಂದಿಲ್ಲ ಎಂದು ಹೇಳಿತ್ತು.

ಅಸ್ಸಾಂ ಪೊಲೀಸರ 21ನೇ ಬೆಟಾಲಿಯನ್ ಕಾನ್‍ಸ್ಟೇಬಲ್ ಸೈದುಲ್ ಹೊಖ್ ಸೆಪ್ಟೆಂಬರ್ 22ರಂದು ಜಾಮೀನು ಗಳಿಸಿದ್ದರು.  ಆತ ಆಗಸ್ಟ್ 18ರಂದು ತಾಲಿಬಾನ್ ಅನ್ನು ಅಭಿನಂದಿಸಿ ಮಾಡಿದ್ದಾರೆನ್ನಲಾದ ಫೇಸ್ಬುಕ್ ಪೋಸ್ಟ್ ಗೆ ಬಂಧಿಸಲಾಗಿತ್ತು. ಈ ಒಂದು ಸಾಕ್ಷ್ಯವು ಆತ ತಾಲಿಬಾನ್ ಅನ್ನು ಬೆಂಬಲಿಸುತ್ತಾರೆ ಅಥವಾ ಬೆಂಬಲಿಸಲು ಇತರರನ್ನು ಪ್ರೇರೇಪಿಸುತ್ತಾರೆ ಹಾಗೂ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯಡಿ ಅಪರಾಧವೆಸಗಿದ್ದಾರೆ ಎಂದು ಹೇಳಲು ಸಾಕಾಗದು ಎಂದು ನ್ಯಾಯಾಲಯ ಹೇಳಿತ್ತು.

ಜಾಮೀನು ಪಡೆದ ಇತರರಲ್ಲಿ ಜಾವೇದ್ ಹುಸೈನ್ ಮಜೂಂದಾರ್, ಮೊಝಿದುಲ್ ಇಸ್ಲಾಂ, ವೈದ್ಯಕೀಯ ವಿದ್ಯಾರ್ಥಿ ನಾದಿಮ್ ಅಖ್ತರ್ ಲಸ್ಕರ್, ಮಾಜಿ ಮೌಲಾನ ಬಸೀರುದ್ದೀನ್ ಲಸ್ಕರ್, ಖಾಸಗಿ ಕೋಚಿಂಗ್ ಸೆಂಟರ್ ಶಿಕ್ಷಕ ಅಬು ಬಕ್ಕರ್ ಸಿದ್ದಿಖ್, ಶಿಕ್ಷಕ ಮುಜೀಬುದ್ದೀನ್,. ಬಿಕಾಂ ವಿದ್ಯಾರ್ಥಿ ಮೊರ್ತುಝ ಹುಸೈನ್ ಖಾನ್ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News