ಕೊರೋನ ಸೋಂಕಿನ ಆರಂಭಿಕ ನಿರ್ವಹಣೆಯಲ್ಲಿ ಬ್ರಿಟನ್ ಸರಕಾರ ವಿಫಲ: ಸಂಸತ್ ಸಮಿತಿ ವರದಿ

Update: 2021-10-12 16:23 GMT

ಲಂಡನ್, ಅ.12: ಕಳೆದ ವರ್ಷ ಕೊರೋನ ಸೋಂಕು ಕಾಣಿಸಿಕೊಂಡಾಗ ಲಾಕ್‌ಡೌನ್ ಜಾರಿಗೊಳಿಸುವಲ್ಲಿ ಸರಕಾರ ವಿಳಂಬಿಸಿದ್ದು ಹಲವಾರು ಮಂದಿಯ ಸಾವಿಗೆ ಕಾರಣವಾಗಿದೆ ಮತ್ತು ಇದು ದೇಶದ ಇತಿಹಾಸದಲ್ಲೇ ಅತ್ಯಂತ ಗಂಭೀರ ಆರೋಗ್ಯ ವೈಫಲ್ಯಗಳಲ್ಲಿ ಒಂದಾಗಿದೆ ಎಂದು ಬ್ರಿಟನ್ ಸಂಸತ್‌ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಉಲ್ಬಣಗೊಂಡಿದ್ದ ಸಾರ್ಸ್, ಎಂಇಆರ್‌ಎಸ್ ಮತ್ತು ಎಬೋಲಾದಿಂದ ಪಾಠ ಕಲಿಯದ ಅಧಿಕಾರಿಗಳು, ಕೊರೋನ ವಿರುದ್ಧದ ಪ್ರಾಥಮಿಕ ನಿರ್ವಹಣೆ ಸಂದರ್ಭ ಶೀತಜ್ವರಕ್ಕೆ ನೀಡುವ ಪ್ರಾಧಾನ್ಯತೆಯನ್ನು ನೀಡಿದ್ದರು ಎಂದು ಮಂಗಳವಾರ ಬಿಡುಗಡೆಗೊಂಡಿರುವ ಸರ್ವಪಕ್ಷಗಳ ಸಂಸದರ ತಂಡದ ಅಧ್ಯಯನ ವರದಿ ತಿಳಿಸಿದೆ. ಸರಕಾರ ಕೊರೋನ ಸೋಂಕು ನಿರ್ವಹಿಸಿರುವ ಬಗ್ಗೆ ಮುಂದಿನ ವರ್ಷ ಸ್ವತಂತ್ರ ಸಂಸ್ಥೆಯೊಂದರಿಂದ ವಿಚಾರಣೆ ನಡೆಯಲಿದ್ದು, ಇದಕ್ಕೂ ಮುನ್ನ ಸಂಸತ್ತಿನ 2 ಸ್ಥಾಯೀ ಸಮಿತಿಗಳು ನಡೆಸಿದ ಸಾರ್ವಜನಿಕ ವಿಚಾರಣೆಯನ್ನು ಆಧರಿಸಿದ 151 ಪುಟಗಳ ವರದಿ ಇದಾಗಿದೆ. ತಜ್ಞರು, ಸಲಹೆಗಾರರು ಸುರಕ್ಷಿತ ಅಂತರ ಪಾಲನೆ, ಕ್ವಾರಂಟೈನ್, ಲಾಕ್‌ಡೌನ್ ಮುಂತಾದ ನಿರ್ಬಂಧ ಕ್ರಮಗಳನ್ನು ಕ್ರಮೇಣ ಜಾರಿಗೊಳಿಸಲು ಸಲಹೆ ನೀಡಿದ್ದರು. ಆದರೆ ಲಾಕ್‌ಡೌನ್ ಜಾರಿಗೊಳಿಸಲು 2020ರ ಜನವರಿವರೆಗೂ ಸರಕಾರ ವಿಳಂಬಿಸಿದ್ದು ಕೊರೋನ ನಿಯಂತ್ರಣದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಈ ಧೋರಣೆ ತಪ್ಪೆಂದು ಸಾಬೀತಾಗಿದೆ ಮತ್ತು ಮರಣ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡು ಆಶ್ರಯತಾಣಗಳಿಗೆ ಹಿಂದಿರುಗಿದ ಹಿರಿಯ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸುವಲ್ಲಿನ ವೈಫಲ್ಯ ಮರಣದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಯಿತು ಎಂದು ವರದಿ ಹೇಳಿದೆ. ಕಳೆದ ವರ್ಷದ ಮಾರ್ಚ್‌ನಿಂದ ಬ್ರಿಟನ್‌ನಲ್ಲಿ ಕೊರೋನ ಸೋಂಕು ತೀವ್ರಗತಿಯಲ್ಲಿ ಉಲ್ಬಣಿಸಿ ಸುಮಾರು 1,38,000 ಮಂದಿ ಸಾವನ್ನಪ್ಪಿದ್ದರು. ಯುರೋಪ್‌ನಲ್ಲೇ ಕೊರೋನದಿಂದ ಅತ್ಯಧಿಕ ಸಾವಿನ ಪ್ರಕರಣ ವರದಿಯಾದ ದೇಶಗಳಲ್ಲಿ ಬ್ರಿಟನ್ ಕೂಡಾ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News