ಶಿಲ್ಲಾಂಗ್‌ನಲ್ಲಿ ದಲಿತ ಸಿಖ್ಖರ ಸ್ಥಳಾಂತರಕ್ಕೆ ತಡೆ: ಮೇಘಾಲಯ ಸರಕಾರದಿಂದ ವರದಿ ಕೋರಿದ ಅಲ್ಪಸಂಖ್ಯಾತರ ಆಯೋಗ

Update: 2021-10-12 17:27 GMT

ಹೊಸದಿಲ್ಲಿ,ಅ.12: ಶಿಲ್ಲಾಂಗ್‌ನ ಹರಿಜನ ಕಾಲನಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಿಖ್ಖರನ್ನು ಸ್ಥಳಾಂತರಿಸಲು ಯಾವುದೇ ಕ್ರಮವನ್ನು ಕೈಗೊಳ್ಳದಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಮೇಘಾಲಯ ಸರಕಾರಕ್ಕೆ ಸೂಚಿಸಿದೆ. ಈ ಬಗ್ಗೆ ಅ.15ರೊಳಗೆ ವಿವರವಾದ ವರದಿಯೊಂದನ್ನು ಸಲ್ಲಿಸುವಂತೆಯೂ ಅದು ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಶಿಲ್ಲಾಂಗ್ ಮುನ್ಸಿಪಲ್ ಬೋರ್ಡ್ ಮತ್ತು ಇತರ ಇಲಾಖೆಗಳ ಸಿಬ್ಬಂದಿಗಳನ್ನು ನಗರದ ಇನ್ನೊಂದು ಭಾಗಕ್ಕೆ ಸ್ಥಳಾಂತರಿಸುವ ರಾಜ್ಯ ಸರಕಾರದ ನಿರ್ಧಾರದ ಬಗ್ಗೆ ಮಾಧ್ಯಮ ವರದಿಗಳನ್ನು ಗಮನಿಸಿದ ಬಳಿಕ ಆಯೋಗವು ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.

ಪ್ರದೇಶದಲ್ಲಿನ ಇತರ ನಿವಾಸಿಗಳಿಗಾಗಿ ಇನ್ನೊಂದು ಸ್ಥಳವನ್ನು ಹುಡುಕಲೂ ಸರಕಾರವು ನಿರ್ಧರಿಸಿತ್ತು.

ಸ್ವೀಪರ್ಸ್ ಲೇನ್ ಮತ್ತು ಪಂಜಾಬಿ ಲೇನ್ ಎಂದೂ ಕರೆಯಲಾಗುವ ಹರಿಜನ ಕಾಲನಿಯಿರುವ ಎರಡೂವರೆ ಎಕರೆ ಭೂಮಿಯನ್ನು ಸೂಕ್ತ ಪ್ರಕ್ರಿಯೆಗಳನ್ನು ಪಾಲಿಸಿ ಒಂದು ವಾರದೊಳಗೆ ಸರಕಾರವು ವಶಪಡಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಅವರು ಅ.5ರಂದು ತಿಳಿಸಿದ್ದರು.

ಕಾಲನಿಯಲ್ಲಿ ವಾಸವಿರುವ 350 ಕುಟುಂಬಗಳು ಮಾತ್ರ ಮುನ್ಸಿಪಲ್ ಬೋರ್ಡ್‌ನ ಉದ್ಯೋಗಿಗಳನ್ನು ಹೊಂದಿವೆ. ಹೀಗಾಗಿ ಪ್ರದೇಶದಲ್ಲಿಯ ನಿವಾಸಿಗಳು ಸರಕಾರದ ನಿರ್ಧಾರವನ್ನು ವಿರೋಧಿಸಿದ್ದರು.

 ಪ್ರದೇಶದಲ್ಲಿ ಸಂಭವಿಸಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಹರಿಜನ ಕಾಲನಿಯಿಂದ ಸಿಖ್ಖರನ್ನು ಸ್ಥಳಾಂತರಿಸುವಂತೆ ಖಾಸಿ ಸಂಘಟನೆಗಳು ಮಂಡಿಸಿದ್ದ ಬೇಡಿಕೆಯನ್ನು ಪರಿಶೀಲಿಸಲು ಜೂನ್,2018ರಲ್ಲಿ ಸರಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ಬಳಿಕ ಸಂಗ್ಮಾರ ನಿರ್ಧಾರ ಹೊರಬಿದ್ದಿತ್ತು.

ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಉಚ್ಚ ನ್ಯಾಯಾಲಯವೂ ಎಪ್ರಿಲ್‌ನಲ್ಲಿ ಆದೇಶಿಸಿತ್ತು ಮತ್ತು ವಿಷಯವು ಸರ್ವೋಚ್ಚ ನ್ಯಾಯಾಲಯದ ಪರಿಗಣನೆಯಲ್ಲಿದೆ ಎಂದು ಹರಿಜನ ಪಂಚಾಯತ ಸಮಿತಿಯ ಕಾರ್ಯದರ್ಶಿ ಗುರ್ಜಿತ್ ಸಿಂಗ್ ತಿಳಿಸಿದರು.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವೂ ಈ ವಿಷಯದ ಕುರಿತು ಸರಕಾರದಿಂದ ವಿವರವಾದ ವರದಿಯನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News