ಮುಂದ್ರಾ ಹೆರಾಯಿನ್ ವಶ ಪ್ರಕರಣ: ದಿಲ್ಲಿ-ಎನ್‌ಸಿಆರ್‌ನ 5 ಸ್ಥಳಗಳ ಮೇಲೆ ಎನ್‌ಐಎ ದಾಳಿ

Update: 2021-10-12 17:41 GMT

ಮುಂಬೈ, ಅ. 12: ಗುಜರಾತ್‌ನ ಮುಂದ್ರಾ ಬಂದರಿನಿಂದ ಕಳೆದ ತಿಂಗಳು 3,000 ಕಿ.ಗ್ರಾಂ. ಹೆರಾಯಿನ್ ವಶಪಡಿಸಿಕೊಂಡ ಪ್ರಕರಣದ ತನಿಖೆಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ರಾಷ್ಟ್ರೀಯ ರಾಜಧಾನಿ ವಲಯ (ಎನ್‌ಸಿಆರ್)ದ 5 ಸ್ಥಳಗಳ ಮೇಲೆ ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ನಿರ್ದೇನದಂತೆ ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್‌ಐ)ದಿಂದ ಈ ತಿಂಗಳ ಆರಂಭದಲ್ಲಿ ಸಲ್ಲಿಸಿದ್ದ ದೂರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸ್ವೀಕರಿಸಿತ್ತು. ಅಲ್ಲದೆ, ಎನ್‌ಡಿಪಿಎಸ್ ಕಾಯ್ದೆ ಹಾಗೂ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಪ್ರಕರಣ ದಾಖಲಿಸಿದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ ಈ ದಾಳಿ ನಡೆಸಿದೆ. ದಿಲ್ಲಿ ಹಾಗೂ ನೋಯ್ಡಾದ ಐದು ಕಡೆಗಳಲ್ಲಿ ಸಂಸ್ಥೆ ದಾಳಿ ನಡೆಸಿದೆ. ಮುಂದ್ರಾ ಬಂದರಿನಲ್ಲಿ 2,988.21 ಕಿ.ಗ್ರಾಂ. ಹೆರಾಯಿನ್ ವಶಪಡಿಸಿಕೊಂಡಿರುವ ಹಾಗೂ ವಿದೇಶಿ ಪ್ರಜೆಗಳು ಹೆರಾಯಿನ್ ಖರೀದಿಸಿರುವ, ಪೂರೈಕೆ ಮಾಡಿರುವ ಪ್ರಕರಣ ಇದಾಗಿದೆ. ಇದಕ್ಕೆ ಸಂಬಂಧಿಸಿ ಈ ದಾಳಿ ನಡೆಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟಂಬರ್ 13ರಂದು ಅಫ್ಘಾನ್‌ನ ಕಂದಹಾರ್‌ನಿಂದ ಇರಾನ್‌ನ ಅಬ್ಬಾಸ್ ಬಂದರಿನ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ಬಂದಿದ್ದ ಹಡಗಿನ ಎರಡು ಕಂಟೈನರ್‌ನಲ್ಲಿದ್ದ ಹೆರಾಯಿನ್ ಅನ್ನು ಕಂದಾಯ ಬೇಹುಗಾರಿಗೆ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News