ಜನರ ಸಾವಿಗೆ ಕಾರಣವಾಗುತ್ತಿರುವ ಈ ರಾಸಾಯನಿಕದ ಬಗ್ಗೆ ಇರಲಿ ಎಚ್ಚರ...

Update: 2021-10-13 03:43 GMT

ನ್ಯೂಯಾರ್ಕ್ : ಪ್ಲಾಸ್ಟಿಕ್ ಕಂಟೈನರ್‌ಗಳಿಂದ ಹಿಡಿದು ಸೌಂದರ್ಯ ಸಾಧನಗಳ ವರೆಗೆ ವ್ಯಾಪಕವಾಗಿ ಬಳಕೆಯಾಗುವ ಥಾಲೆಟ್‌ಗಳೆಂಬ ರಾಸಾಯನಿಕಗಳು ಅಮೆರಿಕದಲ್ಲಿ ಪ್ರತಿ ವರ್ಷ ಒಂದು ಲಕ್ಷ ಜನರ ಸಾವಿಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ಅಂಶವೊಂದನ್ನು ನ್ಯೂಯಾರ್ಕ್ ವಿಶ್ವವಿದ್ಯಾನಿಲಯ ಕೈಗೊಂಡ ಅಧ್ಯಯನವೊಂದು ಬಹಿರಂಗಪಡಿಸಿದೆ.

ಆಟಿಕೆಗಳು, ಬಟ್ಟೆಬರೆ, ಶಾಂಪೂ ಮುಂತಾದ ನೂರಾರು ಉತ್ಪನ್ನಗಳಲ್ಲಿ ಈ ರಾಸಾಯನಿಕ ಬಳಸಲಾಗುತ್ತಿದ್ದು, ವ್ಯಕ್ತಿಯ ಅಂತಃಸ್ರಾವಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಹಾರ್ಮೋನ್‌ಗಳ ವ್ಯತ್ಯಯಕ್ಕೆ ಕಾರಣವಾಗುತ್ತಿದೆ ಎನ್ನುವುದು ದಶಕಗಳಿಂದ ತಿಳಿದಿರುವ ಅಂಶವಾಗಿದೆ.

ಇಂಥ ವಸ್ತುಗಳ ಮೂಲಕ ವಿಷಕಾರಕ ಕಣಗಳು ದೇಹವನ್ನು ಪ್ರವೇಶಿಸುತ್ತವೆ ಹಾಗೂ ಇವರು ಬೊಜ್ಜು, ಮಧುಮೇಹ ಮತ್ತು ಹೃದ್ರೋಗಗಳಿಗೆ ಕಾರಣವಾಗುತ್ತವೆ ಎಂದು ಎನ್ವಿರಾನ್ಮೆಂಟ್ ಪೊಲ್ಯೂಶನ್ ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾದ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ನ್ಯೂಯಾರ್ಕ್ ವಿವಿಯ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಈ ಅಧ್ಯಯನದಲ್ಲಿ 55-64 ವಯೋಮಾನದ 5,000 ಮಂದಿ ವಯಸ್ಕರನ್ನು ಸೇರಿಸಲಾಗಿತ್ತು. ಥಾಲೆಟ್‌ಗಳ ಅಧಿಕ ಸಾಂದ್ರತೆ ಮೂತ್ರದಲ್ಲಿ ಕಂಡುಬಂದಲ್ಲಿ ಅಂಥ ವ್ಯಕ್ತಿಗಳು ಹೃದಯ ರೋಗಗಳಿಂದ ಸಾಯುವ ಸಾಧ್ಯತೆ ಅಧಿಕ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಥಾಲೆಟ್‌ಗೆ ಅಧಿಕ ಒಡ್ಡಿಕೊಳ್ಳುವುದು ನಿರೀಕ್ಷಿತ ಅವಧಿಗಿಂತ ಮುನ್ನ ಸಾಯಲು ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹೃದ್ರೋಗದಿಂದ ಸಾವು ಸಂಭವಿಸಬಹುದು ಎಂದು ಅಧ್ಯಯನ ವರದಿ ಸಿದ್ಧಪಡಿಸಿರುವ ಲಿಯನಾರ್ಡೊ ಟ್ರಸಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News